ADVERTISEMENT

ಚನ್ನಪಟ್ಟಣ ಉಪಚುನಾವಣೆ | ನಿಖಿಲ್ ನಿರಾಸಕ್ತಿ: ಯೋಗೇಶ್ವರ್ ಮೈತ್ರಿ ಅಭ್ಯರ್ಥಿ

ಬಿಜೆಪಿ– ಜೆಡಿಎಸ್‌ನಿಂದ ಸಿಪಿವೈ ಸ್ಪರ್ಧೆ ಸಾಧ್ಯತೆ

ಓದೇಶ ಸಕಲೇಶಪುರ
Published 21 ಅಕ್ಟೋಬರ್ 2024, 5:33 IST
Last Updated 21 ಅಕ್ಟೋಬರ್ 2024, 5:33 IST
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ನಕ್ಷೆ
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ನಕ್ಷೆ   

ರಾಮನಗರ: ಚನ್ನಪಟ್ಟಣದಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಟಿಕೆಟ್‌ ಹಗ್ಗಜಗ್ಗಾಟ ಬಹುತೇಕ ಅಂತ್ಯಗೊಂಡಿದೆ. ಪ್ರಬಲ ಆಕಾಂಕ್ಷಿಯಾಗಿರುವ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರೇ ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿ ಅಥವಾ ಜೆಡಿಎಸ್‌ನಿಂದ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರಿಂದ ತೆರವಾಗಿರುವ ಕ್ಷೇತ್ರಕ್ಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಸಬೇಕೆಂಬ ಒತ್ತಡ ಹೆಚ್ಚಾಗಿತ್ತು. ಇತ್ತೀಚೆಗೆ ಪುತ್ರನೊಂದಿಗೆ ಕ್ಷೇತ್ರದಲ್ಲಿ ಸರಣಿ ಸಭೆ ನಡೆಸಿದ್ದ ಕುಮಾರಸ್ವಾಮಿ ಅವರು ನಿಖಿಲ್ ಸ್ಪರ್ಧೆಯ ಸುಳಿವು ಕೊಟ್ಟಿದ್ದರು. ಆದರೆ, ಬದಲಾಗುತ್ತಿರುವ ರಾಜಕೀಯ ಚಿತ್ರಣ ಹಾಗೂ ಸ್ಪರ್ಧೆಗೆ ಪುತ್ರ ತೋರಿದ ನಿರಾಸಕ್ತಿಯಿಂದಾಗಿ ಅವರ ತೀರ್ಮಾನ ಬದಲಿಸುವಂತೆ ಮಾಡಿದೆ ಎನ್ನುತ್ತವೆ ‘ಮೈತ್ರಿ’ ಮೂಲಗಳು.

ಬಿರುಸಿನ ಚಟುವಟಿಕೆ: ಅಭ್ಯರ್ಥಿ ಆಯ್ಕೆ ಕುರಿತು ಎರಡೂ ಪಕ್ಷದೊಳಗೆ ವಾರದಿಂದ ಬಿರುಸಿನ ಚಟುವಟಿಕೆ ನಡೆಯುತ್ತಿವೆ. ಅ.16ರಂದು ಯೋಗೇಶ್ವರ್ ಚನ್ನಪಟ್ಟಣದಲ್ಲಿ ಕರೆದಿದ್ದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ನಿರೀಕ್ಷೆಗೂ ಮೀರಿ ಜನ ಸೇರಿದ್ದರು. ಸಭೆಯಲ್ಲಿ ಮಾತನಾಡಿದ್ದ ಅವರು, ‘ನಾನೇ ಮೈತ್ರಿ ಅಭ್ಯರ್ಥಿಯಾಗುವೆ. ದುಡುಕುವುದು ಬೇಡ. ಒಂದೆರಡು ದಿನ ಕಾಯೋಣ’ ಎಂದಿದ್ದರು.

ADVERTISEMENT

ಇದರ ಬೆನ್ನಲ್ಲೇ ಬಿಡದಿ ಬಳಿಯ ಕೇತಗಾನಹಳ್ಳಿ ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ನಡೆದಿದ್ದ ಪಕ್ಷದ ಪ್ರಮುಖರ ಸಭೆಯಲ್ಲಿ ನಿಖಿಲ್ ಸ್ಪರ್ಧೆಗೆ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ, ನಿಖಿಲ್ ಸ್ಪರ್ಧೆಗೆ ಆಸಕ್ತಿ ತೋರಿರಲಿಲ್ಲ. ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಅಭಿಪ್ರಾಯವನ್ನು ಸ್ಥಳೀಯ ಮುಖಂಡರು ಪ್ರಬಲವಾಗಿ ವಿರೋಧಿಸಿದ್ದರು. ಟಿಕೆಟ್‌ಗೆ ಸಿಗದಿದ್ದರೆ ಸ್ವತಂತ್ರವಾಗಿ ಕಣಕ್ಕಿಳಿಯುವ ಸುಳಿವು ನೀಡಿದ್ದ ಯೋಗೇಶ್ವರ್‌ ಮನವೊಲಿಕೆಗೆ ಜೆಡಿಎಸ್ ನಿಯೋಗ ಯತ್ನಿಸಿತ್ತು. ಆದರೆ, ಅವರು ಪಟ್ಟು ಸಡಿಲಿಸಿರಲಿಲ್ಲ.

ತಮ್ಮ ಮನೆಯಲ್ಲಿ ನಡೆದ ಸಭೆಯ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಕುಮಾರಸ್ವಾಮಿ, ‘ಟಿಕೆಟ್ ಕುರಿತು ಯಾರು, ಏನು ಬೇಕಾದರೂ ಹೇಳಬಹುದು. ಕ್ಷೇತ್ರದಲ್ಲಿ ಎನ್‌ಡಿಎ ಗೆಲ್ಲಬೇಕಷ್ಟೆ. ರಾಜಕೀಯ ವಾಸ್ತವಾಂಶಗಳ ಲೆಕ್ಕಾಚಾರ ಮಾಡಿ ಗೆಲ್ಲುವ ಅಭ್ಯರ್ಥಿಗೆ ಆದ್ಯತೆ ನೀಡಲಾಗುವುದು’ ಎಂದು ಹೇಳಿದ್ದರು.

ಸಿ.ಪಿ. ಯೋಗೇಶ್ವರ್
ಎಚ್.ಡಿ. ಕುಮಾರಸ್ವಾಮಿ
ಯಾವ ಪಕ್ಷದ ಚಿಹ್ನೆಯಾದರೂ ಸರಿ ಸ್ಪರ್ಧೆಗೆ ನಾನು ಸಿದ್ದ. ಬಿಜೆಪಿ ಅಥವಾ ಜೆಡಿಎಸ್‌ ಈ ಎರಡರಲ್ಲಿ ಯಾವ ಪಕ್ಷದಿಂದ ಕಣಕ್ಕಳಿಯಬೇಕೆಂದು ಎರಡೂ ಪಕ್ಷಗಳ ವರಿಷ್ಠರು ತೀರ್ಮಾನಿಸುತ್ತಾರೆ. ಅವರ ನಿರ್ಧಾರದಂತೆ ನಾನು ನಡೆಯುತ್ತೇನೆ.
ಸಿ.ಪಿ. ಯೋಗೇಶ್ವರ್ ಸಂಭವನೀಯ ಅಭ್ಯರ್ಥಿ

ದಳದಿಂದ ಸಿಪಿವೈ ಕಣಕ್ಕೆ?

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವನ್ನು ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದರಿಂದ ಯೋಗೇಶ್ವರ್ ಅವರನ್ನು ಜೆಡಿಎಸ್ ಟಿಕೆಟ್‌ನಿಂದ ಕಣಕ್ಕಿಳಿಸಬೇಕೆಂಬ ಅಭಿಪ್ರಾಯ ಪಕ್ಷದೊಳಗೆ ಕೇಳಿ ಬರುತ್ತಿದೆ. ಚನ್ನಪಟ್ಟಣದ ಅಭ್ಯರ್ಥಿ ಆಯ್ಕೆ ವಿಷಯವನ್ನು ಬಿಜೆಪಿ ವರಿಷ್ಠರು ಕುಮಾರಸ್ವಾಮಿ ಅವರ ವಿವೇಚನೆಗೆ ಬಿಟ್ಟಿದ್ದಾರೆ. ಹಾಗಾಗಿ ಅವರೇ ಈ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಬಿಜೆಪಿ–ಜೆಡಿಎಸ್ ಮೂಲಗಳು ತಿಳಿಸಿವೆ.

ಸಮೀಕ್ಷೆಯಲ್ಲಿ ಸಿಪಿವೈ ಪರ ಒಲವು

ಕ್ಷೇತ್ರದಲ್ಲಿ ಯೋಗೇಶ್ವರ್‌ ಪರ ಅಲೆ ಇರುವುದರಿಂದ ಅವರನ್ನೇ ಅಭ್ಯರ್ಥಿ ಮಾಡಿದರೆ ಗೆಲುವಿನ ಸಾಧ್ಯತೆ ಹೆಚ್ಚು ಎಂಬ ಅಭಿಪ್ರಾಯ ಎರಡೂ ಪಕ್ಷಗಳಿಂದ ಕೇಳಿಬರತೊಡಗಿದೆ. ‘ಚುನಾವಣೆಗೂ ಮುನ್ನ ಎರಡೂ ಪಕ್ಷಗಳು ನಡೆಸಿದ ಆಂತರಿಕ ಸಮೀಕ್ಷೆಗಳಲ್ಲಿ ಯೋಗೇಶ್ವರ್‌ ಗೆಲುವಿನ ಸಾಧ್ಯತೆ ಹೆಚ್ಚು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹಾಗಾಗಿ ಎಚ್‌ಡಿಕೆ ತಮ್ಮ ಮನಸ್ಸು ಬದಲಾಯಿಸಿದ್ದಾರೆ’ ಎಂದು ಮೈತ್ರಿ ಮುಖಂಡರೊಬ್ಬರು ಹೇಳಿದರು. ‘ಜೆಡಿಎಸ್‌ ಗೆದ್ದಿದ್ದ ಕ್ಷೇತ್ರವನ್ನು ಅದು ಹೇಗೆ ಬಿಜೆಪಿಗೆ ಬಿಟ್ಟು ಕೊಡಲಾಗುತ್ತದೆ ಎಂಬ ಜೆಡಿಎಸ್‌ ವಾದಕ್ಕೆ ಕೋಲಾರದಲ್ಲಿ ಬಿಜೆಪಿ ಗೆದ್ದಿದ್ದರೂ ಲೋಕಸಭಾ ಕ್ಷೇತ್ರವನ್ನು ಬಿಟ್ಟು ಕೊಟ್ಟಿರಲಿಲ್ಲವೇ ಎಂಬ ವಾದವನ್ನು ಬಿಜೆಪಿಯವರು ಮುಂದಿಟ್ಟಿದ್ದಾರೆ. ಚನ್ನಪಟ್ಟಣದಲ್ಲಿ ಮೈತ್ರಿ ಗೆಲುವು ಮೈತ್ರಿಕೂಟಕ್ಕೆ ಮಹತ್ವವಾದುದು. ಇಲ್ಲಿ ಪಕ್ಷ ಪ್ರತಿಷ್ಠೆ ಬೇಡ ಎಂಬ ಸಲಹೆ ಬಂದಿವೆ. ಸಿಪಿವೈ ಸ್ಪರ್ಧೆಗೆ ಎಚ್‌ಡಿಕೆ ಒಪ್ಪಿಗೆ ಸೂಚಿಸಿದರೆ ಕ್ಷೇತ್ರದಲ್ಲಿ ಅವರ ವರ್ಚಸ್ಸಿಗೂ ಧಕ್ಕೆಯಾಗುವುದಿಲ್ಲ. ಮುಂಬರುವ 2028ರ ವಿಧಾನಸಭಾ ಚುನಾವಣೆಗೂ ಇಲ್ಲಿನ ಗೆಲುವು ದಿಕ್ಸೂಚಿಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.