ಚನ್ನಪಟ್ಟಣ (ರಾಮನಗರ): ‘ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೊ, ಚನ್ನಪಟ್ಟಣದಲ್ಲಿ ಯೋಗೇಶ್ವರ್ ಗೆಲ್ಲುವುದು ಅಷ್ಟೇ ಸತ್ಯ. ಅಭಿವೃದ್ಧಿ ಪರ ಕೆಲಸ ಮಾಡುವವರು ಯಾರೆಂಬುದು ಜನರಿಗೆ ಗೊತ್ತಾಗಿದೆ. ಅವರು ಮಾಡಿರುವ ಕೆಲಸವನ್ನು ಗಮನಿಸಿ ಈ ಸಲ ಅವರನ್ನು ವಿಧಾನಸೌಧಕ್ಕೆ ಕಳಿಸಲಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಉಪ ಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನವಾದ ಸೋಮವಾರ ಪಟ್ಟಣದ ಹೊರವಲಯದ ದೊಡ್ಡಮಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಪರ ಹಮ್ಮಿಕೊಂಡಿದ್ದ ಪ್ರಚಾರ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಕ್ಷೇತ್ರದಲ್ಲಿ ಯೋಗೇಶ್ವರ್ ಮಾಡಿರುವ ನೀರಾವರಿ ಕೆಲಸಗಳನ್ನು ಗಮನಿಸಿ, ಇಲ್ಲಿನ ಜನರೇ ಅವರನ್ನು ಆಧುನಿಕ ಭಗೀರಥ ಅಂತ ಕರೆಯುತ್ತಾರೆ. ಹಿಂದೆ ವರದೇಗೌಡರ ಕಾಲದಲ್ಲಿ ನಾನು ಇಲ್ಲಿಗೆ ಪ್ರಚಾರಕ್ಕೆ ಬಂದಾಗಿನ ಸ್ಥಿತಿಗೂ, ಈಗಿಗೂ ಬಹಳ ವ್ಯತ್ಯಾಸವಾಗಿದೆ. ಅದಕ್ಕೆ ಯೋಗೇಶ್ವರ್ ಮಾಡಿರುವ ಕೆಲಸ ಕಾರಣ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೈತಪರ ನಿರ್ಧಾರ: ‘ಹೈನುಗಾರಿಕೆಯಲ್ಲಿ ತಾಲ್ಲೂಕು ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದ್ದು, ಅತಿ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದೆ. ಹಾಗಾಗಿ, ಹಾಲಿನ ಪ್ರೋತ್ಸಾಹಧನವನ್ನು ₹5ರಷ್ಟು ಏರಿಕೆ ಮಾಡಬೇಕು. ಅಕ್ಕಪಕ್ಕದ ರಾಜ್ಯಗಳಲ್ಲಿ ಹಾಲಿನ ದರ ಹೆಚ್ಚು ಇದೆ. ನಮ್ಮಲ್ಲಿ ಕಡಿಮೆ ಇದೆ ಎಂದು ಯೋಗೇಶ್ವರ್ ಮನವಿ ಮಾಡಿದ್ದಾರೆ. ಈಗ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಆ ಬಗ್ಗೆ ಯಾವುದೇ ಭರವಸೆ ನೀಡುವುದಿಲ್ಲ. ಆದರೆ, ರೈತಪರ ತೀರ್ಮಾನ ಕೈಗೊಳ್ಳುವೆ’ ಎಂದು ಭರವಸೆ ನೀಡಿದರು.
‘ಯೋಗೇಶ್ವರ್ ಸಾಮಾನ್ಯ ಕುಟುಂಬದಿಂದ ಬಂದಿರುವ ರಾಜಕಾರಣಿ. ನಿಖಿಲ್ ಕುಮಾರಸ್ವಾಮಿ ಅವರು, ಅವರಪ್ಪ ಮುಖ್ಯಮಂತ್ರಿ ಆಗಿದ್ದಾಗಲೇ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸೋತರು. ನಂತರ ಅವರ ತಾಯಿ ಪ್ರತಿನಿಧಿಸುತ್ತಿದ್ದ ರಾಮನಗರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋತರು. ಆದರೂ, ಕುಮಾರಸ್ವಾಮಿ ಪುತ್ರ ವ್ಯಾಮೋಹದಿಂದ ನಿಖಿಲ್ ಅವರನ್ನು ಚನ್ನಪಟ್ಟಣಕ್ಕೆ ತಂದು ನಿಲ್ಲಿಸಿದ್ದಾರೆ’ ಎಂದರು.
‘ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು, ಮೋದಿ ಮಹಾ ಸುಳ್ಳುಗಾರ ಎಂದಿದ್ದರು. ದೇವೇಗೌಡ ಅವರು ಮೋದಿ ಪ್ರಧಾನಿಯಾದರೆ ನಾನು ದೇಶ ತೊರೆಯುವೆ ಎಂದಿದ್ದರು ಈಗ ಅದಕ್ಕೆ ತದ್ವಿರುದ್ದವಾಗಿದ್ದಾರೆ. ಮಂಡ್ಯದಲ್ಲಿ ಗೆದ್ದ ಒಂದೇ ದಿನದಲ್ಲಿ ಮೇಕೆದಾಟು ಅಣೆಕಟ್ಟೆ ಯೋಜನೆಗೆ ಅನುಮತಿ ಕೊಡಿಸುವೆ ಎಂದಿದ್ದವರು ಈಗ ಯೂಟರ್ನ್ ತೆಗೆದುಕೊಂಡು ನಮ್ಮತ್ತ ಬೆರಳು ತೋರಿಸುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
‘ದೇವೇಗೌಡರಂತೆ ನಾವು ದ್ವೇಷದ ರಾಜಕಾರಣ ಮಾಡುವುದಿಲ್ಲ. ಜಾತಿ ಮತ್ತು ಧರ್ಮದ ಆಧಾರದ ಮೇಲೆ ತಾರತಮ್ಯ ಎಸಗುವುದಿಲ್ಲ. ಮೊದಲ ಅವಧಿಯಲ್ಲಿ ಜನರ ಬದುಕು ಬದಲಿಸಿದ ಭಾಗ್ಯಗಳು ಹಾಗೂ ಈ ಅವಧಿಯ ಗ್ಯಾರಂಟಿ ಯೋಜನೆಗಳ ಸಾಕ್ಷಿಗುಡ್ಡೆಗಳನ್ನು ನಾವು ಬಿಟ್ಟಿದ್ದೇವೆ. ದೇವೇಗೌಡರ ಕುಟುಂಬದವರನ್ನು ಏನಾದರೂ ಅಭಿವೃದ್ಧಿ ಕೆಲಸಗಳ ಸಾಕ್ಷಿಗುಡ್ಡೆ ಬಿಟ್ಟಿದ್ದಾರಾ?’ ಎಂದು ಪ್ರಶ್ನಿಸಿದರು.
ಎಚ್.ಡಿ.ಕೆ ವಿಡಿಯೊ ಪ್ರಸಾರ: ಡಿ.ಕೆ. ಸುರೇಶ್ ಭಾಷಣದ ಮಧ್ಯೆ ಕುಮಾರಸ್ವಾಮಿ ಅವರು ವಿಧಾನಸೌಧದಲ್ಲಿ ಮಾಡಿದ ಭಾಷಣದ ವಿಡಿಯೊ ತುಣುಕು ಪ್ರಸಾರ ಮಾಡಲಾಯಿತು. ಬಳಿಕ, ಕುಮಾರಸ್ವಾಮಿ ಅವರು ತಮ್ಮ ಹಾಗೂ ಯೋಗೇಶ್ವರ್ ಆಡಿಯೊ ಕೇಳಿಸಿದ್ದರ ಕುರಿತು ಮಾತನಾಡಿದ ಸುರೇಶ್,‘ನಾನು ಯೋಗೇಶ್ವರ್ ಮೂವತ್ತು ವರ್ಷದ ಸ್ನೇಹಿತರು. ನನ್ನ ಅವರ ಟೀಕೆ ವೈಯಕ್ತಿಕವಾದುದು. ಅದು ಬಿಡಿ. ನೀವು ನಿಮ್ಮನ್ನು ಗೆಲ್ಲಿಸಿದ ಜನರ ಬಗ್ಗೆ ಲಘುವಾಗಿ ಮಾತನಾಡಿದ್ದೀರಿ ಎಂದು ಟೀಕಿಸಿದರು.
ಸಚಿವರಾದ ಡಾ. ಎಂ.ಸಿ. ಸುಧಾಕರ್, ರಾಮಲಿಂಗಾ ರೆಡ್ಡಿ, ಕೆ. ವೆಂಕಟೇಶ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಶಾಸಕರಾದ ಪ್ರದೀಪ್ ಈಶ್ವರ್, ಪಿ. ರವಿಕುಮಾರ್, ಶರತ್ ಬಚ್ಚೇಗೌಡ, ಡಾ. ಎಚ್.ಡಿ. ರಂಗನಾಥ್, ಶ್ರೀನಿವಾಸ್, ನಂಜೇಗೌಡ, ಕದಲೂರು ಉದಯ್, ಪಿ.ಎಂ. ನರೇಂದ್ರಸ್ವಾಮಿ, ಆನೇಕಲ್ ಶಿವಣ್ಣ, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಎಸ್. ರವಿ, ರಾಮೋಜಿ ಗೌಡ, ಮಾಜಿ ಸಂಸದ ಶಿವರಾಮೇಗೌಡ, ಮಾಜಿ ಶಾಸಕರಾದ ಸಾದತ್ ಅಲಿಖಾನ್, ಎಂ.ಸಿ. ಅಶ್ವಥ್, ಸಿ.ಎಂ. ಲಿಂಗಪ್ಪ, ಕೆ. ರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲಾ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್, ಬಿಎಂಐಸಿಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ ಹಾಗೂ ಇತರರು ಇದ್ದರು.
‘ಎಚ್‌ಡಿಕೆ ನೋಟು, ಯೋಗಿಗೆ ವೋಟು’
‘ಮಗನ ಚುನಾವಣೆಗಾಗಿ ಕುಮಾರಸ್ವಾಮಿ ಸ್ಟೀಲ್ ಅಥವಾ ಮೈನಿಂಗ್ ಸೇರಿದಂತೆ ಎಲ್ಲಿಂದ ದುಡ್ಡು ತಂದಿದ್ದಾರೊ ಗೊತ್ತಿಲ್ಲ. ಆದರೆ ಜನರು ಕುಮಾರಸ್ವಾಮಿ ನೋಟು, ಯೋಗೇಶ್ವರ್‌ಗೆ ವೋಟು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಕ್ಷೇತ್ರದಲ್ಲಿ ಯೋಗೇಶ್ವರ್ ಎರಡು ಸಲ ಸೋಲಲು ಜನ ಕಾರಣವಲ್ಲ. ಅವನೇ ಕಾರಣ. ಬೇಡ ಕಣಯ್ಯ ಎಂದರೂ ಕೇಳದೆ, ಬಿಜೆಪಿಗೆ ಹೋದ. ಸಿಟ್ಟಿನಿಂದ ಒಮ್ಮೆ ನಾವು ರೇವಣ್ಣ ಅವರನ್ನು, ಮತ್ತೊಮ್ಮೆ ಗಂಗಾಧರ್ ಅವರನ್ನು ನಿಲ್ಲಿಸಿದೆವು. ಆಗೆಲ್ಲಾ ಕಾಂಗ್ರೆಸ್‌ಗೆ ಆಹ್ವಾನಿಸಿದರೂ, ಬಾರದೆ ಸೋತ. ಈಗ ಅವನಿಗೆ ಎಲ್ಲಾ ಅರ್ಥವಾಗಿದೆ. ಹಳೆಯದನ್ನು ಮರೆತು ಮುಂದೆ ಆಗಬೇಕಾಗಿರುವುದರ ಕಡೆ ಗಮನ ಕೊಡೋಣ. ಯೋಗೇಶ್ವರ್ ನಿಲ್ಲದಿದ್ದರೆ ನಾನೇ ಉಪ ಚುನಾವಣೆಯಲ್ಲಿ ನಿಲ್ಲುತ್ತಿದ್ದೆ. ಯೋಗೇಶ್ವರ್ ಬಂದು ನಾನೇ ನಿಲ್ಲುವೆ ಎಂದು ಕೇಳಿದ್ದಕ್ಕೆ ಬಿಟ್ಟು ಕೊಟ್ಟೆ. ಗೌಡರು ಅದೆಷ್ಟೇ ಕಣ್ಣೀರು ಹಾಕಿ ಅತ್ತರೂ ನಾವು ಹೆದರುವ ಮಕ್ಕಳಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ನನ್ನ ಜನ ಕಣ್ಣೀರು ಹಾಕಿಸುವುದಿಲ್ಲ: ಸಿಪಿವೈ
‘ನನ್ನ ರಾಜಕೀಯ ನಿರ್ಣಯಗಳು ನನ್ನ ತಾಲ್ಲೂಕಿನ ಜನರ ಹಿತಕ್ಕಾಗಿಯೇ ಹೊರತು ವೈಯಕ್ತಿಕ ಉದ್ದೇಶಕ್ಕಲ್ಲ. ಸತತ ಎರಡು ಸೋಲು ನನ್ನ ಆತ್ಮವಿಶ್ವಾಸವನ್ನು ಸ್ವಲ್ಪ ಕುಗ್ಗಿಸಿದ್ದು ಸುಳ್ಳಲ್ಲ. ಇಷ್ಟಕ್ಕೂ ಕುಮಾರಸ್ವಾಮಿ ಕುಟುಂಬಕ್ಕೆ ನಾನೇನು ಅನ್ಯಾಯ ಮಾಡಿದ್ದೆ. ಅವರಿಂದ ತೆರವಾದ ಸ್ಥಾನವನ್ನು ನನಗೆ ಬಿಡುತ್ತಾರೆಂದರೆ, ಅವರ ಪುತ್ರನ ಕರೆದುಕೊಂಡು ಬಂದಿದ್ದಾರೆ. ಟಿಕೆಟ್ ವಿಷಯದಲ್ಲಿ ನನ್ನನ್ನು ಅತಂತ್ರ ಮಾಡಿ ರಾಜಕೀಯವಾಗಿ ಮುಗಿಸಲು ಕುಮಾರಸ್ವಾಮಿ ತಂತ್ರ ಮಾಡಿದರು. ಅವರಂತೆ ನಾನು ಅಳುವ ಅಗತ್ಯವಿಲ್ಲ. ನನ್ನ ಜನ ಅದಕ್ಕೆ ಅವಕಾಶ ಕೊಡುವುದಿಲ್ಲ. ಕುಮಾರಸ್ವಾಮಿ ಮತ್ತು ಅವರ ಪುತ್ರನಿಗೆ ರಾಜ್ಯದ ಎಲ್ಲಿ ಬೇಕಾದರೂ ಹೋಗಬಹುದು. ನಾನು ಕ್ಷೇತ್ರ ಬಿಟ್ಟು ಎಲ್ಲಿಗೆ ಹೋಗಲಿ? ಎಂಎಲ್‌ಸಿಯಾಗಿದ್ದ ನನಗೆ ಇನ್ನೂ ಎರಡು ವರ್ಷ ಅವಧಿ ಇತ್ತು. ಆದರೂ, ನಿಮ್ಮ ಮೇಲೆ ವಿಶ್ವಾಸವಿಟ್ಟು ಆ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಚುನಾವಣೆಗೆ ಸ್ಪರ್ಧಿಸಿರುವೆ. ನಾನು ಗೆದ್ದರೆ ಕ್ಷೇತ್ರದ ಕೆಎಸ್‌ಐಸಿ ಸೀರೆ ಕಾರ್ಖಾನೆಯ ಪುನಶ್ಚೇತನವಾಗಲಿದೆ. ಮತ್ತಷ್ಟು ಗಾರ್ಮೆಂಟ್ ಕಾರ್ಖಾನೆಗಳು ಬರಲಿವೆ. ತಾಲ್ಲೂಕಿನಲ್ಲಿ ಜೆಡಿಎಸ್ ಕಾರ್ಯಕರ್ತರು ಸೇರಿದಂತೆ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಗುತ್ತಿದ್ದು, ಗೆಲುವಿನ ಉತ್ಸಾಹ ಹೆಚ್ಚಾಗಿದೆ’ ಎಂದು ಸಿ.ಪಿ. ಯೋಗೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.
ಗೌಡರನ್ನು ಪ್ರಚಾರಕ್ಕೆ ಕರೆತಂದಿದ್ದು ನೋವಾಗಿದೆ
‘ಕ್ಷೇತ್ರದಲ್ಲಿ ಯೋಗೇಶ್ವರ್ ಪರವಾದ ಅಲೆ ಇದೆ. ಕುಮಾರಸ್ವಾಮಿ ನಿಜವಾಗಿಯೂ ಕೆಲಸ ಮಾಡಿದ್ದರೆ, ಮಗನ ಗೆಲುವಿಗೆ ಬೀದಿ ಸುತ್ತುವ ಅಗತ್ಯವಿರುತ್ತಿರಲಿಲ್ಲ. ದೇವೇಗೌಡರು ನನ್ನ ರಾಜಕೀಯ ಗುರು. ಅವರನ್ನು 93ನೇ ವಯಸ್ಸಿನಲ್ಲಿ ಕುಮಾರಸ್ವಾಮಿ ಪ್ರಚಾರಕ್ಕೆ ಕರೆ ತಂದಿದ್ದು ಮನಸ್ಸಿಗೆ ನೋವಾಗಿದೆ. ನಾನಾಗಿದ್ದರೆ, ಈ ರೀತಿ ಮಾಡುತ್ತಿರಲಿಲ್ಲ’ ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.