ADVERTISEMENT

ರಾಮನಗರ: ಯುವನಿಧಿ ನೋಂದಣಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2023, 14:19 IST
Last Updated 26 ಡಿಸೆಂಬರ್ 2023, 14:19 IST
<div class="paragraphs"><p>ರಾಮನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರು ಯುವನಿಧಿ ಯೋಜನೆಯ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದರು.&nbsp;</p></div>

ರಾಮನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರು ಯುವನಿಧಿ ಯೋಜನೆಯ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದರು. 

   

ರಾಮನಗರ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಯುವನಿಧಿಗೆ ಜಿಲ್ಲೆಯ ಫಲಾನುಭವಿಗಳ ನೋಂದಣಿಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರು ಚಾಲನೆ ನೀಡಿದರು. ನಂತರ, ಯೋಜನೆಗೆ ಸಂಬಂಧಿಸಿದ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಅವರು, ‘ಯುವನಿಧಿ ಯೋಜನೆಗೆ ಅರ್ಹರಾಗಿರುವವರು ಇಂದಿನಿಂದ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು. ಅಂತಹವರಿಗೆ ಸರ್ಕಾರದಿಂದ ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ಸಿಗಲಿದೆ. 2023ರಲ್ಲಿ ಪದವಿ ಮತ್ತು ಡಿಪ್ಲೋಮಾ ಶಿಕ್ಷಣ ಪೂರ್ಣಗೊಳಿಸಿ ಕನಿಷ್ಠ 6 ತಿಂಗಳು ಸರ್ಕಾರಿ ಅಥವಾ ಖಾಸಗಿ ಉದ್ಯೋಗ ಹೊಂದದವರು ಅರ್ಜಿ ಸಲ್ಲಿಸಬಹುದು’ ಎಂದರು.

ADVERTISEMENT

‘ಯೋಜನೆ ಅನ್ವಯ, ಪದವಿ ಪೂರ್ಣಗೊಳಿಸಿರುವವರಿಗೆ ಮಾಸಿಕ ₹3 ಸಾವಿರ ಮತ್ತು ಡಿಪ್ಲೋಮಾ ಮಾಡಿದವರಿಗೆ ಮಾಸಿಕ ₹1,500 ಮೊತ್ತವನ್ನು ನಿರುದ್ಯೋಗ ಭತ್ಯೆಯಾಗಿ ನೀಡಲಾಗುವುದು. ಅರ್ಹ ಅಭ್ಯರ್ಥಿಗಳು ಉಚಿತವಾಗಿ ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಸಹ ಅರ್ಜಿ ಸಲ್ಲಿಸಬಹುದು’ ಎಂದು ಸಲಹೆ ನೀಡಿದರು.

‘ಯುವನಿಧಿಗೆ ನೋಂದಣಿ, ಫಲಾನುಭವಿಗಳಿಗೆ ಇರಬೇಕಾದ ಅರ್ಹತೆ ಕುರಿತು ಏನಾದರೂ ಗೊಂದಲಗಳಿದ್ದರೆ ಸಹಾಯವಾಣಿ: 18005999918 ಗೆ ಕರೆ ಮಾಡಿ ಪರಿಹರಿಸಿಕೊಳ್ಳಬಹುದು. ಸದ್ಯ ಯೋಜನೆಯ ನೋಂದಣಿಗೆ ಕಡೆಯ ದಿನಾಂಕವನ್ನು ನಿಗದಿಪಡಿಸಿಲ್ಲ’ ಎಂದು ಹೇಳಿದರು.

ಜಿಲ್ಲಾ ಕೌಶಲಾಭಿವೃಧ್ಧಿ ಇಲಾಖೆಯ ಸಹಾಯಕ ನಿರ್ದೇಶಕಿ ಲತಾ ಸಿ.ಎನ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ್ ಹಾಗೂ ಇತರರು ಇದ್ದರು.

ಉದ್ಯೋಗಕ್ಕೆ 1,043 ನೋಂದಣಿ: ‘ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಪಿಯುಸಿ, ಪದವಿ, ಡಿಪ್ಲೋಮಾ ಸೇರಿದಂತೆ ವಿವಿಧ ಕೋರ್ಸ್‌ಗಳನ್ನು ಪೂರೈಸಿದ 1,043 ಮಂದಿ ಉದ್ಯೋಗಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಎಷ್ಟು ನಿರುದ್ಯೋಗಿಗಳಿದ್ದಾರೆ, ಅದರಲ್ಲೂ ಯುವನಿಧಿ ಭತ್ಯೆ ಪಡೆಯಲು ನಿಗದಿಪಡಿಸಿರುವ ಮಾನದಂಡದ ವ್ಯಾಪ್ತಿಗೆ ಎಷ್ಟು ನಿರುದ್ಯೋಗಿಗಳು ಬರಲಿದ್ದಾರೆ ಎಂಬ ಮಾಹಿತಿ ಸ್ಪಷ್ಟವಾಗಿ ಸಿಕ್ಕಿಲ್ಲ. ಅದನ್ನು ಪದವಿ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗಳಿಂದ ಪಡೆಯಬೇಕಿದೆ. ಯುವನಿಧಿ ನೋಂದಣಿಯು ಕೇಂದ್ರೀಕೃತವಾಗಿ ನಡೆಯಲಿದ್ದು, ಸ್ಥಳೀಯವಾಗಿ ಅದರ ದತ್ತಾಂಶ ಈಗಲೇ ಸಿಗುವುದಿಲ್ಲ’ ಎಂದು ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಸಹಾಯಕ ನಿರ್ದೇಶಕ ಗೋವಿಂದರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

Cut-off box - ಯೋಜನೆಯ ಮಾರ್ಗಸೂಚಿಗಳು – 2023ರಲ್ಲಿ ಪದವಿ ಅಥವಾ ಡಿಪ್ಲೋಮಾ ಮುಗಿಸಿ ಕನಿಷ್ಠ 6 ತಿಂಗಳು ಉದ್ಯೋಗ ಹೊಂದಲಾಗದವರು ಯುವನಿಧಿಗೆ ಅರ್ಹರು.– ಕರ್ನಾಟಕದಲ್ಲಿ ವಾಸವಾಗಿರಬೇಕು.– ನೇರ ನಗದು ವರ್ಗಾವಣೆ (ಡಿಬಿಟಿ) ಸ್ವೀಕರಿಸಲು ಆಧಾರ್ ಸಂಖ್ಯೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಹೊಂದಿರಬೇಕು.– ಆಧಾರ್ ಸಂಖ್ಯೆಗೆ ಮೊಬೈಲ್ ನಂಬರ್ ಲಿಂಕ್ ಮಾಡಿರಬೇಕು.– ನಿರುದ್ಯೋಗಿ ಎಂದು ದೃಢೀಕರಿಸಬೇಕು. ಪ್ರತಿ ತಿಂಗಳು ದೃಢೀಕರಿಸುವ ಜೊತೆಗೆ ಘೋಷಣೆ ಪತ್ರ ಸಲ್ಲಿಸಬೇಕು. ಉದ್ಯೋಗ ಸಿಕ್ಕ ತಕ್ಷಣ ಮುಚ್ಚಳಿಕೆ ಪತ್ರ ಬರೆದು ಕೊಡಬೇಕು.– ತಪ್ಪು ಘೋಷಣೆ ಅಥವಾ ಉದ್ಯೋಗ ಘೋಷಣೆ ಮಾಡಲು ವಿಫಲವಾದರೆ ಅದುವರೆಗೆ ಭತ್ಯೆಯನ್ನು ದಂಡವಾಗಿ ಪಾವತಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.