ಬೆಂಗಳೂರು: ಕೃತಕ ಮಂಡಿ ಜೋಡಣೆ, ಭುಜದ ಕೀಲು ಅಳವಡಿಕೆ ಸೇರಿದಂತೆ ಮೂಳೆ ಶಸ್ತ್ರಚಿಕಿತ್ಸೆಗೆ ಹೆಸರಾಗಿರುವ ನಗರದ ಸಂಜಯ್ ಗಾಂಧಿ ಅಪಘಾತ ಮತ್ತು ಅಸ್ಥಿ ಚಿಕಿತ್ಸಾ ಆಸ್ಪತ್ರೆಯಲ್ಲಿ ನೂತನವಾಗಿ ನಾಲ್ಕು ಶಸ್ತ್ರ ಚಿಕಿತ್ಸೆ ಕೊಠಡಿಗಳನ್ನು (ಒ.ಟಿ) ನಿರ್ಮಿಸಲಾಗಿದ್ದು ರೋಗಿಗಳ ಕಾಯುವಿಕೆ ಸಮಸ್ಯೆ ನೀಗುವ ನಿರೀಕ್ಷೆ ಇದೆ.
ಆಸ್ಪತ್ರೆಯಲ್ಲಿ ಈ ಮುನ್ನ ಐದು ಶಸ್ತ್ರಚಿಕಿತ್ಸೆ ಕೊಠಡಿಗಳು ಇದ್ದವು. ಈಗ ಅವುಗಳ ಸಂಖ್ಯೆ ಒಂಬತ್ತಕ್ಕೆ ಏರಿದೆ.
‘ನಮ್ಮ ಆಸ್ಪತ್ರೆಯಲ್ಲಿ ರೋಗಿಗಳ ಕಾಯುವಿಕೆ ದಿನೇ ದಿನೇ ಹೆಚ್ಚುತ್ತಿತ್ತು. ಲಭ್ಯವಿದ್ದ ಸೌಲಭ್ಯದಲ್ಲಿ ಕಾಯುವಿಕೆ ಅವಧಿಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಪ್ರಯತ್ನ ಮಾಡುತ್ತಿದ್ದೆವು. ಶಸ್ತ್ರ ಚಿಕಿತ್ಸೆಯಲ್ಲಿ ಆಗುತ್ತಿದ್ದ ವಿಳಂಬ ತಪ್ಪಿಸಲು ಇನ್ನಷ್ಟು ಕೊಠಡಿಗಳನ್ನು ನಿರ್ಮಿಸಲು ಸರ್ಕಾರ ₹ 4 ಕೋಟಿ ಹಣ ಬಿಡುಗಡೆ ಮಾಡಿತ್ತು. ಒಂದೂವರೆ ವರ್ಷದಲ್ಲಿ ಸುವ್ಯವಸ್ಥಿತ ಶಸ್ತ್ರಚಿಕಿತ್ಸೆ ಕೊಠಡಿಗಳು ಸಿದ್ಧಗೊಂಡಿವೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಎಚ್.ಎಸ್.ಚಂದ್ರಶೇಖರ್ ಮಾಹಿತಿ ನೀಡಿದರು.
‘ಆಸ್ಪತ್ರೆಯಲ್ಲಿ ಹೊರರೋಗಿಗಳು ಹಾಗೂ ಒಳರೋಗಿಗಳು ಸಂಖ್ಯೆ ಹೆಚ್ಚಾಗಿಯೇ ಇದೆ. ಮೊದಲು ಇದ್ದ ಶಸ್ತ್ರಚಿಕಿತ್ಸೆ ಕೊಠಡಿಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳು ಇರಲಿಲ್ಲ. ಮೂಳೆಗಳ ಜೋಡಣೆ, ಬದಲಾವಣೆ, ಭುಜ ಹಾಗೂ ಮೊಣಕಾಲು ಶಸ್ತ್ರಚಿಕಿತ್ಸೆಗಾಗಿ ಕ್ರೀಡಾಪಟುಗಳು, ರೋಗಿಗಳು ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಶಸ್ತ್ರಚಿಕಿತ್ಸೆಗಳನ್ನು ಮಾಡಲು ಹೊಸ ಸೌಲಭ್ಯಗಳಿಂದ ಸಾಧ್ಯವಾಗಲಿದೆ’ ಎಂದು ಅವರು
ಹೇಳಿದರು.
ಒಂದೂವರೆ ದಶಕದಲ್ಲಿ ಆಸ್ಪತ್ರೆ ಹಂತ–ಹಂತವಾಗಿ ಹೊಸ ಸೌಲಭ್ಯಗಳನ್ನು ಪಡೆಯುತ್ತ ಬಂದಿದೆ. 2007ರಲ್ಲಿ ಸಿ.ಟಿ ಸ್ಕ್ಯಾನ್ ವ್ಯವಸ್ಥೆಯನ್ನು ಪಡೆದರೆ, 2009ರಲ್ಲಿ ಬೆನ್ನೆಲುಬು ಶಸ್ತ್ರಚಿಕಿತ್ಸೆ, ಆರ್ಥೋಪ್ಲ್ಯಾಸ್ಟಿ ವಿಭಾಗಗಳನ್ನು ಇಲ್ಲಿ ತೆರೆಯಲಾಗಿದೆ. 2013ರಲ್ಲಿ ರೇಡಿಯೊಥೆರಪಿಯನ್ನು ಕಂಪ್ಯೂಟರೀಕರಣಗೊಳಿಸಲಾಗಿದೆ.
ಬದಲಾದ ಚಿತ್ರಣ: ಎರಡು ವರ್ಷದ ಹಿಂದೆ ಇದ್ದ ಆಸ್ಪತ್ರೆಯ ವಾತಾವರಣದಲ್ಲಿ ಈಗ ಸಾಕಷ್ಟು ಬದಲಾವಣೆ ಕಂಡುಬಂದಿದೆ. ಕಸದ ನಿರ್ವಹಣೆ, ಹೊರರೋಗಿಗಳ ವಿಭಾಗದ ಸ್ವಚ್ಛತೆ, ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದೆ.
ಹೊಸ ಒ.ಟಿಗಳಿಂದ ಏನು ಉಪಯೋಗ?
30: ಪ್ರತಿದಿನ ಮಾಡಬಹುದಾದ ಶಸ್ತ್ರಚಿಕಿತ್ಸೆಗಳು
500: ಪ್ರತಿ ತಿಂಗಳು ಮಾಡಬಹುದಾದ ಶಸ್ತ್ರಚಿಕಿತ್ಸೆಗಳು
190: ಹಾಸಿಗೆ ಸಾಮರ್ಥ್ಯಡದ ಆಸ್ಪತ್ರೆ
ಶಸ್ತ್ರಚಿಕಿತ್ಸೆ ಕೊಠಡಿಗಳ ವಿಶೇಷತೆ
l ಮಾಡ್ಯುಲರ್ ಏರ್‌ಫ್ಲೋ ವ್ಯವಸ್ಥೆ
l ಸೋಂಕುರಹಿತ ತಂತ್ರಜ್ಞಾನ
l ನೆಲದಲ್ಲಿ ವೈರ್‌ಗಳು ಹರಡದಂತೆ ಪೆಂಡೆಂಟ್ ವ್ಯವಸ್ಥೆ
l ಮೂರು ಪದರದ ಗೋಡೆ
l ಬೆಂಕಿ ಹತ್ತಿಕೊಳ್ಳದಂತೆ ಫೈರ್‌ಲೆಸ್ ತಂತ್ರಜ್ಞಾನ
l ಶಸ್ತ್ರ ಚಿಕಿತ್ಸೆಯನ್ನು ವಿಡಿಯೊ ಮಾಡುವ ಸೌಲಭ್ಯ
l ತಾಪಮಾನ ನಿಯಂತ್ರಣ ಘಟಕ
l ಆರ್ದ್ರತೆ ತಿಳಿಯುವ ಮಾಪಕ
l ಫಿಕ್ಸ್ ಎಕ್ಸ್‌ರೇ ತಂತ್ರಜ್ಞಾನ
ಬರಲಿದೆ ತ್ರಿಡಿ ಸಿಆರ್‌ಎಂ ಯಂತ್ರ
ತ್ರಿಡಿ ತಂತ್ರಜ್ಞಾನದ ಮೂಲಕ ಶಸ್ತ್ರಚಿಕಿತ್ಸೆ ಮಾಡುವಂತಹ ನೂತನ ಯಂತ್ರವನ್ನು ಸದ್ಯದಲ್ಲೇ ಆಸ್ಪತ್ರೆಯಲ್ಲಿ ಅಳವಡಿಸಲಾಗುತ್ತಿದೆ. ಇದಕ್ಕಾಗಿ ಸರ್ಕಾರ ₹1 ಕೋಟಿ ಮಂಜೂರು ಮಾಡಿದೆ. ಚರ್ಮವನ್ನು ಹೆಚ್ಚು ಆಳ ಅಥವಾ ಉದ್ದವಾಗಿ ಕತ್ತರಿಸದೇ ತ್ರಿಡಿ ತಂತ್ರಜ್ಞಾನ ಬಳಸಿ ಶಸ್ತ್ರಚಿಕಿತ್ಸೆ ಮಾಡುವ ಸೌಲಭ್ಯವನ್ನು ಈ ಯಂತ್ರ ಒಳಗೊಂಡಿದೆ.
ಸಂಪರ್ಕ ಸಂಖ್ಯೆ: 080 26562822
* ಬಡರೋಗಿಗಳನ್ನು ಶಸ್ತ್ರಚಿಕಿತ್ಸೆಗೆ ಕಾಯಿಸುವುದು ನೋವಿನ ಸಂಗತಿ. ಸರ್ಕಾರದಿಂದ ಅನುದಾನ ದೊರೆತ ಒಂದೂವರೆ ವರ್ಷದಲ್ಲೇ ನಾಲ್ಕು ಒ.ಟಿಗಳನ್ನು ನಿರ್ಮಿಸಿದ್ದೇವೆ
-ಡಾ.ಎಚ್.ಎಸ್.ಚಂದ್ರಶೇಖರ್, ಆಸ್ಪತ್ರೆ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.