ADVERTISEMENT

ಅನಂತಮೂರ್ತಿ ನೆನಪಲ್ಲಿ ಸಾಂಸ್ಕೃತಿಕ ಕೇಂದ್ರ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2014, 8:48 IST
Last Updated 29 ಡಿಸೆಂಬರ್ 2014, 8:48 IST

ತೀರ್ಥಹಳ್ಳಿ:  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್‌.ಅನಂತಮೂರ್ತಿ ಅವರ ನೆನಪಿನಲ್ಲಿ ತೀರ್ಥಹಳ್ಳಿಯಲ್ಲಿ ಒಂದು ಕೇಂದ್ರವನ್ನು ಸ್ಥಾಪಿಸಿ ಅದರ ಮೂಲಕ ಸಾಹಿತ್ಯ, ಸಂಸ್ಕೃತಿ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿಯ ಅವರ ಅಮೂಲ್ಯವಾದ ಚಿಂತನೆ ಮತ್ತು ಕಾಳಜಿ ಮುನ್ನಡೆಸಿಕೊಂಡು ಹೋಗಬೇಕೆಂಬ ಪ್ರಸ್ತಾವ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.

ಯು.ಆರ್‌.ಅನಂತಮೂರ್ತಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕೇಂದ್ರ ಅಥವಾ ಯು.ಆರ್‌. ಅನಂತಮೂರ್ತಿ ಮಾನವಿಕಶಾಸ್ತ್ರ, ಕಲೆ ಮತ್ತು ಸಾಂಸ್ಕೃತಿಕ ಕೇಂದ್ರ ಸ್ಥಾಪಿಸುವಂತೆ ಕರ್ನಾಟಕ ಹಾಗೂ ಭಾರತದ ಇತರ ಭಾಗಗಳ ಅನೇಕ ಮುಖ್ಯ ಚಿಂತಕರ ಅಭಿಲಾಷೆಯಾಗಿದೆ. ಕರ್ನಾಟಕ ಸರ್ಕಾರವನ್ನು ಪ್ರತಿನಿಧಿಸುವ ಹಲವರು ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.

ಈ ಕೇಂದ್ರವು ಸಾಹಿತ್ಯ, ಕಲೆ, ರಾಜಕೀಯ, ಸಾಂಸ್ಕೃತಿಕ ರಂಗಗಳಲ್ಲಿ ಅನಂತಮೂರ್ತಿ ಅವರ ಚಿಂತನೆ  ಹಾಗೂ ವಿಚಾರಗಳನ್ನು ಮುಂದುವರಿಸುವ ನಿಟ್ಟಿನಲ್ಲಿ  ಅಗತ್ಯವಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿದೆ. ಭಾಷೆ, ರಾಜಕೀಯ ಹಾಗೂ ಸಮಾಜದ ನೈಜ ನಿಲುವುಗಳ ಜೊತೆ ನಡೆಯುವ ಸತತ ಸಂವಾದದ ಭಾಗವಾಗಿರಬೇಕು ಎಂಬ ಆಶಯವನ್ನು ಹೊಂದಲಾಗಿದೆ. ಕೇಂದ್ರದ ಒಟ್ಟು ನಿಲುವು ಅಸಾಂಪ್ರದಾಯಕವಾದ ಎಲ್ಲರಿಗೂ ಎಟಕುವಂತಿದ್ದು ಅನಂತಮೂರ್ತಿ ಅವರ ವ್ಯಕ್ತಿತ್ವವನ್ನು ಪ್ರತಿಫಲಿಸುತ್ತಿರಬೇಕು. ಅನಂತಮೂರ್ತಿ ಅವರ ಬದುಕು ಹಾಗೂ ಬರವಣಿಗೆಗೆ ಸಂಬಂಧಿಸಿದ ವಸ್ತು ವಿಶೇಷಗಳನ್ನು ಪ್ರದರ್ಶನಕ್ಕೆ ಇಡುವ ವ್ಯವಸ್ಥೆ ಇಲ್ಲಿರಬೇಕು. ಕೇಂದ್ರವು ಸಮಾನ ಮನಸ್ಕ ಸಂಸ್ಥೆಗಳ ಸಹಯೋಗದಲ್ಲಿ ಸಮಾಜ ಹಾಗೂ ನಾಗರಿಕತೆಗೆ ಸಂಬಂಧಿಸಿದ ಚಿಂತನೆಗಳನ್ನು ಕಾಲಕಾಲಕ್ಕೆ ಸಂದರ್ಭಾನುಸಾರವಾಗಿ ಪುನರುಜ್ಜೀವನಗೊಳಿಸುವ ಕೆಲಸವನ್ನು ಮಾಡಬೇಕು. ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದು ಅಲ್ಲಿಯ ಮಾನವಿಕಶಾಸ್ತ್ರದ ಸ್ನಾತಕೋತ್ತರ ವಿಭಾಗಗಳ ಜೊತೆ ಕೊಡುಕೊಳ್ಳುವಿಕೆಯನ್ನು ಸತತವಾಗಿ ನಡೆಸುವಂತಿರಬೇಕು ಎಂಬ ಆಶಯವನ್ನು ಹೊಂದಿದೆ.

ಅನಂತಮೂರ್ತಿಯವರ ಸೃಜನಶೀಲ ಬರವಣಿಗೆಯ ಕೇಂದ್ರದಲ್ಲಿರುವ ಮಲೆನಾಡು, ತಮ್ಮ ಬಾಲ್ಯ ಮತ್ತು ಯೌವನದ ದಿನಗಳನ್ನು ಕಳೆದ ಸ್ಥಳವೂ ಆಗಿರುವುದರಿಂದ ತೀರ್ಥಹಳ್ಳಿ ಪ್ರಸ್ತುತ ಕೇಂದ್ರಕ್ಕೆ ಸೂಕ್ತ ಸ್ಥಳವಾಗಿದೆ. ಅನಂತಮೂರ್ತಿ ಅವರ ಜನ್ಮ ಸ್ಥಳ ಮೇಳಿಗೆಗೂ ಇದು ಹತ್ತಿರದಲ್ಲಿದೆ.  ತುಂಗಾ ಕಾಲೇಜಿನ ಆವರಣದಲ್ಲಿ  ಕೇಂದ್ರ ಸ್ಥಾಪನೆಗೆ ಒಲವು ವ್ಯಕ್ತವಾಗಿದೆ.

ಕೇಂದ್ರದಲ್ಲಿ ವಿದ್ವಾಂಸರ ವಾಸ್ತವ್ಯ ಇರುವಂತಿರಬೇಕು. ಸಾಹಿತ್ಯ, ಕಲೆ, ಪರಿಸರ, ಮಾನವಿಕ ಶಾಸ್ತ್ರಗಳಲ್ಲಿ ಮಹತ್ವದ ಕೆಲಸ ಮಾಡಿದ ವಿದ್ವಾಂಸರನ್ನು ಜಗತ್ತಿನ ನಾನಾ ಭಾಗಗಳಿಂದ ಒಂದು ನಿರ್ದಿಷ್ಟ ಅವಧಿಗೆ ಕೇಂದ್ರಕ್ಕೆ ಆಹ್ವಾನಿಸಿ ಕಾರ್ಯಕ್ರಮ ಹಮ್ಮಿಕೊಳ್ಳುವುದು. ಭಾಷೆ, ಜನಪದ. ಸಾಹಿತ್ಯ ಹಾಗೂ ಸಾಂಸ್ಕೃತಿ ಕ್ಷೇತ್ರಗಳಲ್ಲಿ ಹೊಸ ಚಿಂತನೆಗೆ ಸ್ಫೂರ್ತಿದಾಯಕವಾಗುವಂಥಹ ಚಟುವಟಿಕೆ. ಆಗಾಗ ಕೆಲವು ಮಹತ್ವದ ಪ್ರಕಟಣೆಗಳನ್ನು ಕೈಗೆತ್ತಿಕೊಳ್ಳಬಹುದು. ಇವು ಸಂಗ್ರಹಯೋಗ್ಯ ವಿಶೇಷ ಪ್ರಕಟಣೆಗಳಾಗಿರುತ್ತವೆ. ಅನುವಾದ ಕಾರ್ಯಕ್ರಮ ಪ್ರತಿ ವರ್ಷ ಒಂದು ವಿಭಿನ್ನವಾದ ಸಾಂಸ್ಕೃತಿಕ ಉತ್ಸವ ಹಮ್ಮಿಕೊಳ್ಳುವುದು, ವಿಚಾರ ಸಂಕಿರಣ ಸರಣಿ, ಸಮಾಜ ವಿಜ್ಞಾನ, ಜನಪ್ರಿಯ ವಿಜ್ಞಾನ ಹಾಗೂ ರಾಜಕೀಯ ಕ್ಷೇತ್ರಗಳ ಅತ್ಯುತ್ತಮ ಬರಹಗಳಿಗೆ ವಾರ್ಷಿಕ ಪ್ರಶಸ್ತಿ ಕೊಡುವುದು. ಹಾಗೂ ಸ್ವತಂತ್ರವಾಗಿ ಅಥವಾ ಸಮಾನ ಚಿಂತನೆಯ ಇತರೆ ಸಂಸ್ಥೆಗಳ ಸಹಯೋಗದಲ್ಲಿ ಒಂದು ಪತ್ರಿಕೆಯನ್ನು ಪ್ರಕಟಿಸುವುದು ಸೇರಿದಂತೆ ಅನೇಕ ವಿಚಾರಗಳನ್ನು ಒಳಗೊಂಡಿದೆ.

ಪ್ರಸ್ತಾವಿತ ಕೇಂದ್ರಕ್ಕೆ ಒಂದು ಗ್ರಂಥಾಲಯ ಚಿಕ್ಕ ಸಭಾಂಗಣ, ಸೆಮಿನಾರ್‌ ಹಾಲ್‌, ಅಂತರ್ಜಾಲ ಸಂಬಂಧಿತ ಮಾಧ್ಯಮ ಕೇಂದ್ರ, ಅಂನಂತಮೂರ್ತಿ ಅವರ ಬದುಕು ಹಾಗೂ ಬರವಣಿಗೆಗೆ ಸಂಬಂಧಿಸಿದ ವಸ್ತುವಿಶೇಷಗಳನ್ನು ಪ್ರದರ್ಶನಕ್ಕೆ ಇಡಲು ಸೂಕ್ತವಾದ ಪ್ರದರ್ಶನಾಲಯ. ಕಚೇರಿ, ವಿದ್ವಾಂಸರ ವಾಸ್ತವ್ಯಕ್ಕಾಗಿ ಕೆಲವು ಕೋಣೆಗಳು ಅಥವಾ ಪುಟ್ಟ ಕಾಟೇಜುಗಳನ್ನು ಒದಗಿಸುವಂತೆ ಕೋರಲಾಗಿದೆ.

  ‘ಪ್ರಸ್ತಾವಿತ ಕೇಂದ್ರ ಅನಂತಮೂರ್ತಿ ಅವರ ಕುರಿತ ವಸ್ತುಸಂಗ್ರಹಾಲಯವಾಗಿರದೇ ಸೃಜನಾತ್ಮಕ ವಿಚಾರಗಳ ವೇದಿಕೆಯಾಗಬೇಕು. ಮೈಸೂರಿನಲ್ಲಿ ಕೇಂದ್ರ ಸ್ಥಾಪನೆಗೆ ಆಸಕ್ತಿ ವಹಿಸಿದ್ದರೂ ತೀರ್ಥಹಳ್ಳಿಯಲ್ಲಿಯೇ ಇರುವುದು ಸೂಕ್ತ. ಕೇಂದ್ರಕ್ಕೆ ದೇಶದ ಇತರೆ ಕಡೆಗಳಿಂದಲೂ ಬೆಂಬಲ ವ್ಯಕ್ತವಾಗಲಿದೆ’ ಎಂಬ ಅಭಿಪ್ರಾಯವನ್ನು ಅಂನತಮೂರ್ತಿ ಅವರ ಪುತ್ರ ಡಾ.ಶರತ್‌ ಅನಂತಮೂರ್ತಿ ವ್ಯಕ್ತಪಡಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.