ಶಿವಮೊಗ್ಗ: ಕಥೆಗಳ ಕಲ್ಪನೆ ಕಾಲಕಾಲಕ್ಕೆ ಬದಲಾಗುತ್ತವೆ. ಕಥೆ ಓದುವುದು ಮುಗಿದರೂ ಅದು ಹುಟ್ಟುಹಾಕುವ ವಿಚಾರಗಳು ಮನದೊಳಗೆ, ಹೊರಗೆ ಚರ್ಚಿತವಾಗುತ್ತವೆ ಎಂದು ಸಾಹಿತಿ ನಾ.ಡಿಸೋಜ ಹೇಳಿದರು.
ನಗರದ ಕರ್ನಾಟಕ ಸಂಘದಲ್ಲಿ ಭಾನುವಾರ ಕೋಡೂರಿನ ಬೆನಕ ಬುಕ್ಸ್ ಬ್ಯಾಂಕ್ ಹಮ್ಮಿಕೊಂಡಿದ್ದ ಕಾರ್ಯ ಕ್ರಮದಲ್ಲಿ ಸಾಮಾಜಿಕ ಚಿಂತಕ ಸರ್ಜಾಶಂಕರ ಹರಳಿಮಠ ಅವರ ಪುತ್ರ 5ನೇ ತರಗತಿ ವಿದ್ಯಾರ್ಥಿ ಅಂತಃಕರಣ ಅವರ 5 ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಇಂದು ವಿಶ್ವದ ಎಲ್ಲಡೆ ಬಾಲ ಪ್ರತಿಭೆಗಳು ತಮ್ಮ ಬರಹ, ಪ್ರತಿಭೆಗಳ ಮೂಲಕ ಅಚ್ಚರಿ ಮೂಡಿಸುತ್ತಿದ್ದಾರೆ. ಬಾಲ್ಯದಲ್ಲೇ ಮಕ್ಕಳ ಶಿಕ್ಷಣದ ಬಗ್ಗೆ ಧ್ವನಿ ಎತ್ತಿದ ಪಾಕಿಸ್ತಾನದ ಮಾಲಾಲಗೆ ನೋಬೆಲ್ ಬಂದಿದೆ. ಜಿಲ್ಲೆಯ ಮಕ್ಕಳಾದ ಮುದ್ದುತೀರ್ಥಹಳ್ಳಿ, ಸಾಗ ರದ ಕಿಸಾನ್, ಶಿವಮೊಗ್ಗ ನಗರದ ಅಂತಃ ಕರಣ ಅವರ ಸಾಧನೆ ಆಶ್ಚರ್ಯ ತರಿ ಸುತ್ತದೆ. ಸಾಹಿತ್ಯದ ಜತೆಗೆ, ಧಾರಾ ವಾಹಿಗಳಲ್ಲೂ ಮಕ್ಕಳು ಪ್ರತಿಭೆ ಅನಾವರಣ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಪುಟ್ಟ ಕಥೆಗಳನ್ನು ಅಂತಃಕರಣ ಅದ್ಭುತ ವಾಗಿ ನಿರೂಪಣೆ ಮಾಡಿದ್ದಾನೆ. ಚಿಕ್ಕ ಚಿಕ್ಕ ಸಂಗತಿಯನ್ನು ಮನಮುಟ್ಟುವಂತೆ ದಾಖಲಿಸಿದ್ದಾನೆ. ದೇಶದ ಭವಿಷ್ಯದ ಬಗ್ಗೆ ಚಿಂತಿಸಿದ್ದಾನೆ. ಕೆಲ ವಿಷಯಗಳಲ್ಲಿ ಅವಸರ ಮಾಡಿದಂತೆ ಕಂಡರೂ ಒಟ್ಟಾರೆ ಆಶಯಕ್ಕೆ ಧಕ್ಕೆ ತಂದಿಲ್ಲ ಎಂದು ಶ್ಲಾಘಿಸಿದರು.
ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್‌ಮಟ್ಟು ಮಾತನಾಡಿ, ಬರೆಯುತ್ತಾ ಬರೆಯುತ್ತಾ ಮನುಷ್ಯ ಮುಗ್ಧತೆ ಕಳೆದುಕೊಳ್ಳುತ್ತಾನೆ. ಆತನಿಗೆ ಪ್ರಸಿದ್ಧಿ, ಹಣ, ಜಾತಿ, ಧರ್ಮ ನೆನಪಾಗುತ್ತದೆ. ತಾನೆ ಗುರು ಎಂದು ಭಾವಿಸುತ್ತಾನೆ. ಆದರೆ, ಆತ ಜ್ಞಾನಕ್ಕೆ ಎಲ್ಲಿಯವರೆಗೆ ಶಿಷ್ಯನಾಗಿ ಇರುತ್ತಾನೋ ಅಲ್ಲಿಯವರೆಗೆ ಆತನ ಸಾಧನೆ ಮುಂದುವರಿಯುತ್ತದೆ ಎಂದು ವಿಶ್ಲೇಷಿಸಿದರು.
ಅಂಕಣ ಎಂದರೆ ಅದು ಲೇಖಕನ ಅಭಿಪ್ರಾಯ. ಒಂದು ಸಂಗತಿಯನ್ನು ನೋಡುವ, ಗ್ರಹಿಸುವ ಶಕ್ತಿಯ ಜತೆ, ನಿರೂಪಿಸುವ ಶೈಲಿ ಗೊತ್ತಿರಬೇಕು. ಅಂತಃಕರಣ ಅಂತಹ ಸಾವಾಲು, ಸಾಧ್ಯತೆಗಳನ್ನು ಈ ವಯಸ್ಸಿನಲ್ಲೇ ಕರಗತ ಮಾಡಿಕೊಂಡಿದ್ದಾನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ರಕರ್ತ ಎಂ.ರಾಘವೇಂದ್ರ, ಕರ್ನಾಟಕ ಸಂಘದ ಅಧ್ಯಕ್ಷೆ ವಿಜಯಾ ಶ್ರೀಧರ್, ಲೇಖಕ ಕೊಡಕ್ಕಲ್ ಶಿವಪ್ರಸಾದ್ ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್ ಅಧ್ಯಕ್ಷತೆ
ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.