ಶಿವಮೊಗ್ಗ: ಸಮಾಜವಾದಿ ಹೋರಾಟಗಾರರ ಬಗ್ಗೆ ಕುವೆಂಪು ತಮ್ಮ ಸಾಹಿತ್ಯದಲ್ಲಿ ಪ್ರಸ್ತಾಪ ಮಾಡದಿರುವುದು ಆಶ್ಚರ್ಯ ಎಂದು ಅಂಕಣಕಾರ ಪಾರ್ವತೀಶ ಅಭಿಪ್ರಾಯಪಟ್ಟರು.
`ಮಲೆನಾಡು: ನಿನ್ನೆ, ಇಂದು, ನಾಳೆ' ವಿಷಯದ ಕುರಿತ ಗೋಷ್ಠಿಯಲ್ಲಿ `ಮಲೆನಾಡಿಗೆ ಸಮಾಜವಾದಿಗಳು ಮತ್ತು ಕಮ್ಯುನಿಸ್ಟರ ಪಾತ್ರ' ವಿಷಯದ ಕುರಿತು ಅವರು ಮಾತನಾಡಿದರು.
ಕುವೆಂಪು ವೈಚಾರಿಕವಾಗಿ ಸಾಕಷ್ಟು ಬರೆದಿದ್ದಾರೆ. ಇದಕ್ಕೆ `ಕಲ್ಕಿ', `ಕೋಗಿಲೆ-ರಷ್ಯಾ'ದಂತ ಹಲವು ಕವಿತೆಗಳು ಸಾಕ್ಷಿಯಾಗಿವೆ. ಆದರೆ, ಇದೇ ಕುವೆಂಪು ಅವರು ಪ್ರಗತಿಪರ ಹೋರಾಟಗಾರ ಶಾಂತವೇರಿ ಗೋಪಾಲಗೌಡ, ಕಮ್ಯುನಿಸ್ಟ್ ಪಕ್ಷದ ಅಪ್ಪಣ್ಣ ಹೆಗಡೆ ಅವರ ಬಗ್ಗೆ ಏಕೆ ಬರೆಯಲಿಲ್ಲ ಎಂಬುವುದು ಪ್ರಶ್ನೆಯಾಗಿದೆ ಎಂದರು.
ಹಂಪಿ ವಿಶ್ವವಿದ್ಯಾಲಯದ ಡಾ.ಬಿ.ಎಂ. ಪುಟ್ಟಯ್ಯ `ಮಲೆನಾಡಿನ ರಾಜಕೀಯ ಸ್ಥಿತ್ಯಂತರಗಳು' ವಿಷಯದ ಕುರಿತು ಮಾತನಾಡಿದರು.
ವಲಸಿಗರಿಂದ ಹಾಳು: ಬಳ್ಳಾರಿ ಹಾಗೂ ಮಂಡ್ಯ ಕಡೆಯಿಂದ ವಲಸೆ ಬಂದ ಇಬ್ಬರು ವಲಸಿಗ ರಾಜಕಾರಣಿಗಳಿಂದ ಶಿವಮೊಗ್ಗ ಜಿಲ್ಲೆಯ ರಾಜಕೀಯ ಔನ್ನತ್ಯ, ಹಿರಿಮೆ ನಾಶವಾಗಿದೆ ಎಂದು ಸಾಹಿತಿ ಡಾ.ಶ್ರೀಕಂಠ ಕೂಡಿಗೆ ಪರೋಕ್ಷವಾಗಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸದ್ಯದ ರಾಜಕಾರಣ ಮಾಡುವವರು ಕಸದ ಬುಟ್ಟಿಗೆ ಸೇರುತ್ತಾರೆ. ಒಳ್ಳೆಯ ರಾಜಕಾರಣ ಮಾಡುವವರು ಅಧಿಕಾರದಲ್ಲಿ ಇರದಿದ್ದರೂ ಚರಿತ್ರೆಯಾಗುತ್ತಾರೆ ಎಂಬುವುದಕ್ಕೆ ಗೋಪಾಲಗೌಡರು ಸಾಕ್ಷಿಯಾಗಿದ್ದಾರೆ ಎಂದರು.
ಕೋಮು ಸೌಹಾರ್ದ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ.ಎಲ್. ಅಶೋಕ್ 'ಮಲೆನಾಡಿನ ಆರ್ಥಿಕ ಬಿಕ್ಕಟ್ಟು' ವಿಷಯದ ಕುರಿತು ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.