ಸಾಗರ: ದೇಶವನ್ನು ಅರ್ಥೈಸುವ ಮತ್ತು ಆಕ್ರಮಿಸುವ ಎಂಬ ಎರಡು ರೀತಿಯ ಮನಸ್ಥಿತಿಗಳು ನಮ್ಮ ನಡುವೆ ಇದ್ದು, ಆಕ್ರಮಣಕಾರಿ ಮನಸ್ಸುಗಳೊಂದಿಗೆ ಯಾವುದೇ ರೀತಿಯ ಚರ್ಚೆ, ಸಂವಾದ, ಅನುಸಂಧಾನ ಸಾಧ್ಯವಿಲ್ಲ’ ಎಂದು ಲೇಖಕ ಗಣೇಶ್ ಎನ್. ದೇವಿ ಅಭಿಪ್ರಾಯಪಟ್ಟರು.
ಸಮೀಪದ ಹೆಗ್ಗೋಡಿನಲ್ಲಿ ಗುರುವಾರ ಆರಂಭಗೊಂಡ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ‘ಚಿಂತನೆ–ಪ್ರತಿ ಚಿಂತನೆ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು. ಅಭಿವ್ಯಕ್ತಿಯೇ ಸಾಧ್ಯವಿಲ್ಲದ ಆಕ್ರಮಣಕಾರಿ ಮನಸ್ಸುಗಳೊಂದಿಗೆ ಪ್ರಭುತ್ವ ಕೂಡ ಗುರುತಿಸಿಕೊಳ್ಳಲು ಹವಣಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದರು.
‘ನಮ್ಮ ನಡುವೆ ಹಲವು ರೀತಿಯ ವಾಸ್ತವಗಳು ಇವೆ. ಈ ಸಂಗತಿಯನ್ನು ನಮ್ಮ ಅನೇಕ ಜ್ಞಾನ ಶಾಖೆಗಳು ಮೊದಲಿನಿಂದಲೂ ಪ್ರತಿಪಾದಿಸಿವೆ. ಆದರೆ, ಪ್ರಸ್ತುತ ಇರುವುದು ಒಂದೇ ವಾಸ್ತವ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ. ಇಂತಹ ಪ್ರಯತ್ನಗಳಿಂದ ಚಿಂತನಾಕ್ರಮ ಬೆಳೆಯಲಾರದು’ ಎಂದು ಹೇಳಿದರು.
ಚಿಂತನೆ ಸಾಧ್ಯವಾಗುವುದು ‘ನೆನಪು’ಗಳ ಆಧಾರದ ಮೇಲೆ. ನೆನಪು ಎಂದರೆ, ಅದು ಕಾಲದ ಜ್ಞಾನ. ವ್ಯಕ್ತಿ ಮತ್ತು ಸಮಷ್ಠಿಯ ನೆನಪುಗಳ ನಡುವೆ ಭಿನ್ನತೆ ಇದ್ದರೂ, ಹೊಂದಾಣಿಕೆ ಕೂಡ ಇದೆ. ಆದರೆ, ಈ ನೆನಪುಗಳು ವಾಸ್ತವದಿಂದ ದೂರ ಸರಿದು ಸಂಜ್ಞೆಗಳಾಗಿ ಬದಲಾದಾಗ ಮುಖ್ಯ ವಾಹಿನಿಯಿಂದ ಹೊರಗೆ ಇರುವ ಸಂಸ್ಕೃತಿಗಳ ಮೇಲೆ ದಬ್ಬಾಳಿಕೆ ನಡೆಸುತ್ತದೆ ಎಂದು ವಿಶ್ಲೇಷಿಸಿದರು.
ಚಿಂತನೆಗಳಿಗೆ ಮೂಲ ಆಧಾರವಾಗಿರುವ ನೆನಪುಗಳೇ ಇಂದು ಮನುಷ್ಯನ ಭಾವಕೋಶದಿಂದ ದೂರಾಗಿ ತಂತ್ರಜ್ಞಾನದ ಕೂಸಾಗಿರುವ ಮೊಬೈಲ್ ಚಿಪ್‌ನೊಳಗೆ ಹುದುಗುತ್ತಿರುವ ವಿಪರ್ಯಾಸ ನೋಡುತ್ತಿದ್ದೇವೆ. ಭವಿಷ್ಯದಲ್ಲಿ ಮನುಷ್ಯ ಈ ಹಿಂದೆ ನೆನಪುಗಳನ್ನು ಇಟ್ಟುಕೊಂಡ ಒಂದು ವಸ್ತುವಾಗಿದ್ದ ಎನ್ನುವ ಸನ್ನಿವೇಶ ನಿರ್ಮಾಣವಾಗಿ ತಂತ್ರಜ್ಞಾನವೇ ನೆನಪುಗಳ ಮೂಲವಾಗುವ ಅಪಾಯ ವಿದೆ. ಇದು ಹಲವು ರೀತಿಯ ಚಿಂತನಾ ಕ್ರಮಗಳನ್ನು ಬೆಳೆಸಲಾರದು ಎಂದರು.
ನಂತರದ ಗೋಷ್ಠಿಯಲ್ಲಿ ಹೆಗ್ಗೋಡಿನ ಜನಮನದಾಟ ತಂಡದ ವರು ಅತುಲ್‌ಪೇಠೆ ಅವರ ನಿರ್ದೇಶನದ ‘ಸತ್ಯಶೋಧಕ’ ನಾಟಕ ಪ್ರದರ್ಶಿಸಿದರು. ಸಂಜೆ ಶಿವರಾಮ ಕಾರಂತ ರಂಗ ಮಂದಿರದಲ್ಲಿ ನೀನಾಸಂ ತಿರುಗಾಟ ನಾಟಕ ‘ಗುಣಮುಖ’ (ರಚನೆ: ಪಿ.ಲಂಕೇಶ್, ನಿರ್ದೇಶನ: ಮಂಜು ಕೊಡಗು) ಪ್ರದರ್ಶನಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.