ADVERTISEMENT

ತೀರ್ಥಹಳ್ಳಿಗೆ ಡಾ.ಎಲ್.ಸಿ.ಸುಮಿತ್ರಾ ಆಯ್ಕೆ

ಎರಡು ತಾಲ್ಲೂಕುಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2015, 8:56 IST
Last Updated 6 ಆಗಸ್ಟ್ 2015, 8:56 IST

ಶಿವಮೊಗ್ಗ: ಜಿಲ್ಲೆಯ ಎರಡು ತಾಲ್ಲೂಕುಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸಿದ್ಧತೆ ಮಾಡ ಲಾಗುತ್ತಿದೆ. ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಗಾಗಿ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಯಿತು.

2014-15 ನೇ ಸಾಲಿನಲ್ಲಿ ತಾಲ್ಲೂಕು ಸಮ್ಮೇಳನಗಳಿಗಾಗಿ ಸರ್ಕಾರ ನೀಡಬೇಕಿದ್ದ ಅನುದಾನ ಬಿಡುಗಡೆ ಆಗಲಿಲ್ಲ. ಮೊದಲ ಕಂತಿನಲ್ಲಿ ನೀಡಿದ್ದ ಅನುದಾನದಲ್ಲಿ ಮೂರು ತಾಲ್ಲೂಕು ಸಮ್ಮೇಳನಗಳಿಗೆ ಹಣ ನೀಡಲಾಗಿದ್ದು ಉಳಿದ ತಾಲ್ಲೂಕುಗಳಿಗೆ ಹಣನೀಡಲು ಕೇಂದ್ರ ಪರಿಷತ್ತಿನಲ್ಲಿ ಹಣವಿಲ್ಲವೆಂದು ರಾಜ್ಯ ಅಧ್ಯಕ್ಷರು ಪತ್ರ ಬರೆದು ತಿಳಿಸಿದ್ದಾರೆ. ಸರ್ಕಾರ ಕನ್ನಡ ಸಾಹಿತ್ಯ ಪರಿಷತ್ತು ಶತಮಾನೋತ್ಸವಕ್ಕೆಂದು ಹತ್ತು ಕೋಟಿ ಕೊಡುವುದಾಗಿ ಮುಖ್ಯ ಮಂತ್ರಿಗಳು ಪ್ರಕಟಿಸಿದ್ದು, ಬಿಟ್ಟರೆ ಇದುವರೆಗೂ ಯಾವುದೇ ಹಣ ಬಾರದೆ ಶತಮಾನೋತ್ಸವ ವರ್ಷಾಚರಣೆ ಸೊರಗುತ್ತಿರುವುದನ್ನು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ. ಮಂಜುನಾಥ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮ್ಮೇಳನ ನಡೆಸಲು ಅನುಕೂಲವಾಗುವಂತೆ ಆಯವ್ಯಯದಲ್ಲಿ ಮೀಸಲಿರಿಸಿರುವ ಹಣವನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಪತ್ರಬರೆಯಲು ತೀರ್ಮಾನಿಸಲಾಯಿತು, ಶತಮಾನೋತ್ಸವ ಹೆಸರಿಗೆಮಾತ್ರ, ಕೇಂದ್ರ ಪರಿಷತ್ತು ಯಾವುದೇ ಕಾರ್ಯಕ್ರಮ, ಯಾವುದೇ ಹಣ ನೀಡದಿರುವ ವಿಚಾರವಾಗಿ ಚರ್ಚಿಸಲಾಯಿತು ಎಂದು ಅವರು ವಿವರಿಸಿದ್ದಾರೆ.

ಶಿಕಾರಿಪುರ ತಾಲ್ಲೂಕು ಆರನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಈಸೂರು ಮೂಲದ ಈಗ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಆಗಿರುವ ಡಾ.ಸಿ. ವಾಸುದೇವಪ್ಪ ಅವರನ್ನು ಆಯ್ಕೆ ಮಾಡಲಾಯಿತು. ತೀರ್ಥಹಳ್ಳಿ ತಾಲ್ಲೂಕು ಐದನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಇಲ್ಲಿನ ತುಂಗಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಲೇಖಕಿ ಡಾ.ಎಲ್.ಸಿ. ಸುಮಿತ್ರಾ  ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಎರಡು ತಾಲ್ಲೂಕು ಕಸಾಪ ಸಮಿತಿಗಳು ತಲಾ ನಾಲ್ಕು, ಐದು ಹೆಸರುಗಳನ್ನು ಶಿಫಾರಸು ಮಾಡಲಾಗಿದ್ದು, ಅರ್ಹತೆ, ಅನುಭವ, ಸಾಧನೆ, ಸಾಮಾಜಿಕನ್ಯಾಯ ಎಲ್ಲವನ್ನು ಪರಿಗಣಿಸಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.