ADVERTISEMENT

ಧರ್ಮಾಧ್ಯಕ್ಷರಾಗಿ ಫ್ರಾನ್ಸಿಸ್ ಸೆರಾವೊ

ಶಿವಮೊಗ್ಗದ ಪವಿತ್ರ ಹೃದಯ ಪ್ರಧಾನಾಲಯ

​ಪ್ರಜಾವಾಣಿ ವಾರ್ತೆ
Published 8 ಮೇ 2014, 10:12 IST
Last Updated 8 ಮೇ 2014, 10:12 IST

ಶಿವಮೊಗ್ಗ: ನಗರದ ಪವಿತ್ರ ಹೃದಯ ಪ್ರಧಾನಾಲಯದ ಆವರಣದಲ್ಲಿ ನೂತನ ಧರ್ಮಾಧ್ಯಕ್ಷ ಮೊನ್ಸಿಜ್ಞೋರ್ ಫ್ರಾನ್ಸಿಸ್ ಸೆರಾವೊ ಅವರ ಧರ್ಮಾಧ್ಯಕ್ಷ ದೀಕ್ಷಾ ಸಮಾರಂಭ ಬುಧವಾರ ಅದ್ದೂರಿಯಾಗಿ ನಡೆಯಿತು.
ವ್ಯಾಟಿಕನ್ ದೇಶದ ಭಾರತೀಯ ರಾಯಭಾರಿ ಸಲ್ವಾತೊರೆ ಪಿನ್ನಾಚಿಯೋ, ಆರ್ಚ್ ಬಿಷಪ್ ಬರ್ನಾಡ್ ಮೊರಾಸ್,  ಶಿವಮೊಗ್ಗ ಧರ್ಮಕ್ಷೇತ್ರದ ಪ್ರೇಷಿತ ಅಧಿಕಾರಿ ಹೆನ್ರಿ ಡಿಸೋಜ, ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೋ ಸಮಾರಂಭಕ್ಕೆ ಸಾಕ್ಷಿಯಾದರು.

ದೇಶದ ವಿವಿಧ ಭಾಗಗಳಿಂದ 20 ಧರ್ಮಾಧ್ಯಕ್ಷರು, 500ಧರ್ಮ ಗುರುಗಳು, 600 ಧರ್ಮ ಭಗಿನಿಯರ ಸಮ್ಮುಖದಲ್ಲಿ ನೂತನ ಧರ್ಮಾಧ್ಯಕ್ಷ ಮೊನ್ಸಿಜ್ಞೋರ್ ಫ್ರಾನ್ಸಿಸ್ ಸೆರಾವೊ  ಚರ್ಚ್ ಆವರಣದ ಸ್ನೇಹ ಭವನದಿಂದ ಆಗಮಿಸಿದರು.
ಮಧುವಣಗಿತ್ತಿಯಂತೆ ಸಿಂಗಾರಗೊಂಡಿದ್ದ ಚರ್ಚ್ ಆವರಣದ ಒಳಗೆ ನೂತನ ಧರ್ಮಾಧ್ಯಕ್ಷ ಆಗಮಿಸುತ್ತಿದ್ದಂತೆ, ಕ್ರೈಸ್ತ ಬಾಂಧವರ ಹರ್ಷೋದ್ಗಾರ ಹಾಗೂ ಪ್ರಾರ್ಥನಾ ಗೀತೆಗಳು ಮುಗಿಲು ಮುಟ್ಟಿದವು. ಎಲ್ಲೆಂದರಲ್ಲಿ ಧರ್ಮಾಧ್ಯಕ್ಷರಿಗೆ ಶುಭಾಶಯಗಳ ಪೂರವೇ ಹರಿದು ಬಂದಿತು.

ಕ್ರೈಸ್ತ ಸಮುದಾಯದ ಪದ್ಧತಿಯಂತೆ ಪ್ರೇಷಿತ ದೀಕ್ಷೆಯ ಪವಿತ್ರ ವಿಧಿಗಳು, ನೇಮಿತ ಧರ್ಮಾಧ್ಯಕ್ಷರ ಅರ್ಪಣೆ, ಪ್ರಭೋಧನೆ, ನೂತನ ಅಭ್ಯರ್ಥಿಯ ಪರಿಶೀಲನೆ, ಪ್ರಾರ್ಥನೆಗೆ ಆಹ್ವಾನ, ಮನವಿಮಾಲೆ, ಹಸ್ತ ನಿಕ್ಷೇಪ, ಶುಭ ಸಂದೇಶದ ಗ್ರಂಥ ಧಾರಣೆ, ಪ್ರತಿಷ್ಠಾ ಪ್ರಾರ್ಥನೆ, ದೀಕ್ಷಾ ತೈಲದಿಂದ ಅಭ್ಯರ್ಥಿಯ ಸಿರಸ್ಸಿನ ಅಭ್ಯಂಜನ, ಶುಭ ಸಂದೇಶದ ಗ್ರಂಥಾರ್ಪಣೆ, ಧರ್ಮಾಧ್ಯಕ್ಷರಿಗೆ ಉಂಗುರ, ಶಿರಸ್ತ್ರಾಣ ಮತ್ತು ಪಾಲನಾ ದಂಡದ ಪ್ರಧಾನ
ಮಾಡಲಾಯಿತು.

ನಂತರ ನೂತನ ಧರ್ಮಾಧ್ಯಕ್ಷ ಸೇವಾಸನ ಸ್ವೀಕರಿಸಿದರು. ಕ್ರೈಸ್ತ ಬಾಂಧವರು ಅಭಿನಂದನೆಗಳ ಸುರಿಮಳೆಗೈದರು.  ಧರ್ಮಕ್ಷೇತ್ರದ ಗುರುಗಳು ಬಲಿಪೀಠದ ಮಂದೆ ಬಂದು, ಧರ್ಮಾಧ್ಯಕ್ಷರಿಗೆ ವಿಧೇಯತೆಯನ್ನು ಉರಿಯುವ ಮೇಣದ ಬತ್ತಿ ಮೂಲಕ
ಗೌರವ ಸಮರ್ಪಿಸಲಾಯಿತು.

ಧರ್ಮಾಧ್ಯಕ್ಷ ದೀಕ್ಷಾ ಸಮಾರಂಭದಲ್ಲಿ ಮಂಗಳೂರಿನ ಅಲೋಶಿಯಸ್ ಪಾವ್ಲ್ ಡಿಸೋಜಾ, ಕಾರವಾರದ ಪೀಟರ್
ಮಚಾದೊ, ಬೆಳಗಾವಿಯ ಡೆರಿಕ್ ಫೆರ್ನಾಂಡಿಸ್, ಚಿಕ್ಕ ಮಗಳೂರಿನ ಅಂತೋನಿ ಸ್ವಾಮಿ, ಬೆಳ್ತಂಗಡಿಯ ಲಾರೆನ್ಸ್ ಮುಕ್ಕುಜಿ, ಭದ್ರಾವತಿಯ ಜೋಸೆಫ್ ಅರುಮಚಡೆಲ್, ಎಐಸಿಸಿ ಸದಸ್ಯ ಮಂಜುನಾಥ ಭಂಡಾರಿ, ಮಂಗಳೂರು ಶಾಸಕ ಜೆ.ಆರ್.ಲೋಬೋ, ಶಿವಮೊಗ್ಗ ನಗರದ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಕೊಂಕಣಿ ಅಕಾಡೆಮಿ ಅಧ್ಯಕ್ಷ ರೋಮ್ ಕ್ಯಾಸ್ಟೋಲಿನೋ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.