ADVERTISEMENT

ಬುಡಕಟ್ಟು ಕಾವ್ಯದಲ್ಲಿ ವಿಸ್ತಾರವಾದ ಪ್ರತಿಮಾಲೋಕ

ತಳಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ: ಭಾಷಾ ವಿಜ್ಞಾನಿ ಮೇಟಿ ಮಲ್ಲಿಕಾರ್ಜುನ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2017, 4:59 IST
Last Updated 28 ಮಾರ್ಚ್ 2017, 4:59 IST
ಸಾಗರ: ‘ವಿಸ್ತಾರವಾದ ಪ್ರತಿಮಾಲೋಕವನ್ನು ಒಳಗೊಂಡಿರುವುದೇ ಬುಡಕಟ್ಟು ಮಹಾಕಾವ್ಯಗಳ ವಿಶೇಷತೆಯಾಗಿದೆ’ ಎಂದು ಭಾಷಾ ವಿಜ್ಞಾನಿ ಮೇಟಿ ಮಲ್ಲಿಕಾರ್ಜುನ ಹೇಳಿದರು.
 
ಇಲ್ಲಿನ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ‘ಕರ್ನಾಟಕದ ಬುಡಕಟ್ಟು ಮಹಾಕಾವ್ಯಗಳು’ (ಒಂದು ಪುನರಾವ
ಲೋಕನ)  ಕುರಿತು ಸೋಮವಾರ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ‘ಬುಡಕಟ್ಟು ಕಾವ್ಯಗಳಲ್ಲಿ ಪ್ರತಿಮಾಲೋಕ’ ಬಗ್ಗೆ ಅವರು ಮಾತನಾಡಿದರು.
 
‘ಬುಡಕಟ್ಟು ಮಹಾಕಾವ್ಯಗಳನ್ನು ತಳಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಈ ಕಾವ್ಯಗಳಲ್ಲಿ ಇಡೀ ಸಮಾಜದ ಅಸ್ಮಿತೆ, ಬದುಕಿನ ಬೇರೆ ಬೇರೆ ರೂಪಕಗಳು ನಮ್ಮ ಒಟ್ಟೂ ಬದುಕನ್ನು ರೂಪಿಸುವ ವಿನ್ಯಾಸವಾಗಿ ಪ್ರಕಟಗೊಂಡಿರುವುದಾಗಿ ಪರಿಗಣಿಸಬೇಕು’ ಎಂದರು.
 
‘ಈ ಮಹಾಕಾವ್ಯಗಳ ನಾಯಕರನ್ನು ರಾಜಕೀಯ ಸಂಕೇತವಾಗಿ ನೋಡಿದರೆ ಅವುಗಳಿಗೆ ಸಂಕುಚಿತತೆ ಮೂಡುತ್ತದೆ. ಈ ಕಾವ್ಯಗಳಲ್ಲಿ ಪುರಾಣ, ಇತಿಹಾಸದ ನೆಲೆಗಟ್ಟಿನಲ್ಲಿ ರೂಪುಗೊಂಡ ಸಾಂಸ್ಕೃತಿಕ ಆಯಾಮ ಮತ್ತು ವಿವೇಕ ಇರುವುದನ್ನು ನಾವು ಗುರುತಿಸಬೇಕು’ ಎಂದು ಹೇಳಿದರು.
 
‘ಬುಡಕಟ್ಟು ಕಾವ್ಯಗಳಲ್ಲಿ ಪ್ರತಿರೋಧದ ನೆಲೆಗಳು’ ಎಂಬ ವಿಷಯದ ಕುರಿತು ಲೇಖಕ ಕುಂಸಿ ಉಮೇಶ್‌ ಮಾತನಾಡಿ, ‘ಬುಡಕಟ್ಟು ಕಾವ್ಯಗಳಲ್ಲಿ ಪ್ರತಿರೋಧದ ನೆಲೆ ಎನ್ನುವುದು ಕೇಡಿನ ಕತೆಗಳಿಗೆ ಪರ್ಯಾಯವಾಗಿ ರೂಪುಗೊಂಡಿವೆ. ಈ ಕಾರಣಕ್ಕೆ ಇಲ್ಲಿನ ಕಥನಗಳನ್ನು ಜನಪದ ಕಥನ ಎನ್ನುವುದಕ್ಕಿಂತ ಮಾನವ ಕಥನ ಎಂದು ನೋಡುವುದು ಸರಿಯಾದ ಕ್ರಮ ಎಂದರು.
 
ಮಲೆಮಹದೇಶ್ವರ ಕಾವ್ಯದಲ್ಲಿ ಗಂಡಿನ ಅಧಿಕಾರ ಕೇಂದ್ರವನ್ನು ಹೆಣ್ಣು ಪ್ರಶ್ನಿಸುವ ಕ್ರಮ ಕೇವಲ ಹೆಣ್ಣಿನ ಕಥನವಲ್ಲ. ಬದಲಾಗಿ ಅದು ವಿವೇಕವನ್ನು ಜಾಗೃತವಾಗಿ ಒಳಗಿನಿಂದಲೇ ಕಟ್ಟಿಕೊಂಡ ಕನ್ನಡದ ಜೀವದ್ರವ್ಯ. ನಿಜಕ್ಕೂ ‘ಧರೆಗೆ ದೊಡ್ಡವರು’ ಯಾರು ಎಂಬುದನ್ನು ವಿಶ್ಲೇಷಿಸಿದ್ದು ಈ ಕಾವ್ಯಗಳ ವೈಶಿಷ್ಟ್ಯತೆ ಎಂದು ಹೇಳಿದರು.
 
ಮಂಟೇಸ್ವಾಮಿ ಕಾವ್ಯದಲ್ಲಿ ಗಂಡು ಮೂಲಭೂತವಾದದ ವಿರುದ್ಧ ಪ್ರತಿರೋಧದ ಧ್ವನಿ ಸಾಂಸ್ಕೃತಿಕ ದಂಗೆಕೋರತನದ ರೂಪಕವಾಗಿ ಮೂಡಿದೆ. ಸ್ಥಾಪಿತ ಮೌಲ್ಯಗಳೊಳಗೆ ಸಿಲುಕಿ ನರಳುತ್ತಿರುವ ಪಾತ್ರಗಳಿಗೆ ಬಿಡುಗಡೆಯ ದಾರಿ ತೋರಿಸಿರುವುದು ಬುಡಕಟ್ಟು ಕಾವ್ಯ ಎಂದು ಬಣ್ಣಿಸಿದರು.
 
‘ಬುಡಕಟ್ಟು ಮಹಾಕಾವ್ಯಗಳ ಜ್ಞಾನ ಮೀಮಾಂಸೆ’ ಕುರಿತು ಬರಹಗಾರ ಕಿರಣ್ ಗಾಜನೂರು ಮಾತನಾಡಿ, ‘ಬುಡಕಟ್ಟು ಕಾವ್ಯ ಎಂದರೆ ಅದು ಅರಿವನ್ನು ಗಳಿಸಿಕೊಳ್ಳಲು ನಡೆದ ಪ್ರಯತ್ನ ಹೊರತು, ಅದರ ಹಿಂದೆ ಇತರ ನಿರ್ದಿಷ್ಟ ಉದ್ದೇಶಗಳು ಇರಲಿಲ್ಲ.

ನಮ್ಮ ಸಮಕಾಲೀನ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಆ ಕಾವ್ಯದಲ್ಲಿ ಯಾವ ಮಾದರಿಗಳು ಇವೆ ಎನ್ನುವುದನ್ನು ಹುಡುಕುವ ಹೊಸ ಜ್ಞಾನ ಮೀಮಾಂಸೆ ಕಟ್ಟಬೇಕಿದೆ’ ಎಂದರು.
 
ಅಧ್ಯಕ್ಷತೆ ವಹಿಸಿದ್ದ ಲೇಖಕ ಶ್ರೀಕಂಠ ಕೂಡಿಗೆ ಮಾತನಾಡಿ, ‘ವಿಸ್ತಾರವಾದ ಜ್ಞಾನಲೋಕ ಬುಡಕಟ್ಟು ಮಹಾಕಾವ್ಯಗಳಲ್ಲಿ ಇವೆ ಎಂಬುದನ್ನು ಅಧ್ಯಯನಗಳು ಸ್ಥಿರೀಕರಿಸಿವೆ. ದೈವೀಕತೆಯನ್ನು ಮಾನವೀಕರಣಗೊಳಿಸಿರುವ ಪ್ರಕ್ರಿಯೆ ಇಲ್ಲಿ ನಡೆದಿದೆ.

ಮನುಷ್ಯ ಕೇಂದ್ರಿತ ಅಹಂಕಾರವನ್ನು ಮುರಿದು ನಮ್ಮ ಪರಿಸರವನ್ನು ಕಾಪಾಡಿಕೊಳ್ಳಬೇಕಾದ ಅಗತ್ಯಕ್ಕೆ ಒತ್ತು ಕೊಟ್ಟಿರುವಲ್ಲಿ ಬುಡಕಟ್ಟು ಕಾವ್ಯಗಳ ಸಮಕಾಲೀನತೆ ಅಡಗಿದೆ’ ಎಂದರು. ಕಾವ್ಯಾ ಎಸ್‌.ಕೋಳಿವಾಡ್ ಗೋಷ್ಠಿಯನ್ನು ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.