ADVERTISEMENT

ಮಹಿಳಾ ಬರಹಗಾರರಿಂದ ಶ್ರೀಮಂತಗೊಂಡ ಸಾಹಿತ್ಯ

ಮಹಿಳಾ ಸಾಹಿತಿಗಳ ಸಮ್ಮೇಳನದಲ್ಲಿ ಡಾ.ಲತಾ ರಾಜಶೇಖರ್ ಅಭಿಮತ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2014, 8:54 IST
Last Updated 29 ಡಿಸೆಂಬರ್ 2014, 8:54 IST


ಸಾಗರ: ಮಹಿಳಾ ಬರಹಗಾರರು ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದು ಕನ್ನಡ ಸಾಹಿತ್ಯ ಪರಂಪರೆ ಶ್ರೀಮಂತಗೊಳ್ಳಲು ಕಾರಣರಾಗಿದ್ದಾರೆ ಎಂದು ಲೇಖಕಿ ಡಾ.ಲತಾ ರಾಜಶೇಖರ್ ಹೇಳಿದರು.

ಸ್ನೇಹಸಾಗರ ಸ್ವಸಹಾಯ ಮಹಿಳಾ ಮಂಡಳಿ ಭಾನುವಾರ ಏರ್ಪಡಿಸಿದ್ದ ಮಹಿಳಾ ಸಾಹಿತಿಗಳ ದ್ವಿತೀಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷೆಯಾಗಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು ಎಲ್ಲಾ ಕ್ಷೇತ್ರಗಳಂತೆ ಸಾಹಿತ್ಯ ಕ್ಷೇತ್ರದಲ್ಲೂ ಮಹಿಳೆಯರನ್ನು ಕಡೆಗಣಿಸುವ ಪ್ರವೃತ್ತಿ ಇದೆ ಎಂದು ಅಭಿಪ್ರಾಯಪಟ್ಟರು.

ಸಾಹಿತ್ಯ ವಿಮರ್ಶೆಯಲ್ಲೂ ಮಹಿಳೆಯರ ಕೃತಿಗಳು ಅವಗಣನೆಗೆ ಒಳಗಾಗಿವೆ. ನೂರು ವರ್ಷ ಇತಿಹಾಸ ಹೊಂದಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವ ಅವಕಾಶ ಬೆರಳಣಿಕೆಯ ಮಹಿಳೆಯರಿಗೆ ಮಾತ್ರ ದೊರಕಿರುವುದು ವಿಷಾದದ ಸಂಗತಿ ಎಂದರು.

12ನೇ ಶತಮಾನದ ವಚನ ಚಳವಳಿ ಕಾಲದಿಂದ ಹಿಡಿದು ಇಂದಿನವರೆಗೂ ಕನ್ನಡ ಸಾಹಿತ್ಯದಲ್ಲಿ ಮಹಿಳೆಯರು ವಿವಿಧ ರೀತಿಯ ಅನುಭವಗಳಿಗೆ ಕನ್ನಡಿ ಹಿಡಿಯುವ ಮೂಲಕ ವಿಭಿನ್ನ ಸಾಹಿತ್ಯ ಕೃತಿಗಳನ್ನು ರಚಿಸುತ್ತ ಬಂದಿದ್ದಾರೆ. ಮಹಿಳೆಯರ ಸಾಹಿತ್ಯ ಕೃತಿಗಳ ಪ್ರಕಟಣೆಗೆ ಹೆಚ್ಚಿನ ಪ್ರೋತ್ಸಾಹ ದೊರಕಬೇಕಿದೆ ಎಂದು ಹೇಳಿದರು.

ಸಮ್ಮೇಳನವನ್ನು ಉದ್ಘಾಟಿಸಿದ ಮಾಜಿ ಸಚಿವೆ ಲೀಲಾದೇವಿ.ಆರ್.ಪ್ರಸಾದ್ ಮಾತನಾಡಿ, ಆತ್ಮಬಲವೇ ಮಹಿಳೆಯರ ನಿಜವಾದ ಶಕ್ತಿ. ಸಶಕ್ತವಾದ ಸಾಹಿತ್ಯ ರಚನೆಗೂ ಆತ್ಮಬಲದ ಅವಶ್ಯಕತೆ ಇದೆ. ಮಹಿಳೆಯರು ಇಂತಹ ಆತ್ಮಬಲವನ್ನು ಹೊಂದಿದ್ದು ಹಲವು ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಲು ಕಾರಣವಾಗಿದೆ ಎಂದರು.

ವಿಜ್ಞಾನ ಮತ್ತು ತಂತ್ರಜ್ಞಾನ ಅಗಾಧ ಬೆಳವಣಿಗೆ ಸಾಧಿಸುತ್ತಿರುವ ಈ ಹೊತ್ತಿನಲ್ಲಿ ಮಹಿಳೆಯರ ಮೇಲೆ ದೌರ್ಜನ್ಯದ ಪ್ರಮಾಣ ಹೆಚ್ಚಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಈ ಬಗ್ಗೆ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ವಿಧಾನ ಪರಿಷತ್‌ನ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್ ಮಾತನಾಡಿ, ಮಹಿಳೆಯರನ್ನು ಎರಡನೇ ದರ್ಜೆ ಪ್ರಜೆಗಳಂತೆ ನೋಡುವ ಪುರುಷರ ಮನಸ್ಥಿತಿ ಬದಲಾಗದ ಹೊರತು ಆಕೆಯ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ನಿಲ್ಲಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ವಾಸಂತಿ ಶಿವಣ್ಣ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ಮುರುಳೀಧರ್, ನಗರಸಭೆ ಅಧ್ಯಕ್ಷೆ ಎನ್.ಲಲಿತಮ್ಮ, ಅನುಸೂಯಾ.ಎಸ್. ಹಾಜರಿದ್ದರು. ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.

ಸ್ನೇಹಸಾಗರ ಮಹಿಳಾ ಮಂಡಳಿ ಸದಸ್ಯರು ಪ್ರಾರ್ಥಿಸಿದರು. ಸಂಘದ ಅಧ್ಯಕ್ಷೆ ಚೂಡಾಮಣಿ ರಾಮಚಂದ್ರ  ಪ್ರಾಸ್ತಾವಿಕ ಮಾತನಾಡಿದರು. ಶಾಂತಲಾ ದಾನಪ್ಪ ವಂದಿಸಿದರು. ಕುಮುದವಲ್ಲಿ ಅರುಣಾಮೂರ್ತಿ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.