ADVERTISEMENT

ರಾಷ್ಟ್ರಕವಿ ಕುವೆಂಪು ಮುಸುಕು ಸರಿದೀತೇ?

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 9:25 IST
Last Updated 3 ಫೆಬ್ರುವರಿ 2012, 9:25 IST

ಶಿವಮೊಗ್ಗ: ಜಿಲ್ಲೆಯ ಜನರ ಬಹುನಿರೀಕ್ಷೆಯ ಕುವೆಂಪು ಪ್ರತಿಮೆ ಅನಾವರಣಕ್ಕೆ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ.  ಒಂದೂವರೆ ತಿಂಗಳಿನಿಂದ ಕುವೆಂಪು ಪ್ರತಿಮೆ ಮೇಲೆ ಹಾಕಿರುವ ಮುಸುಕು ಇನ್ನಷ್ಟು ದಿವಸ ಮುಂದುವರಿಯುವ ಸೂಚನೆಗಳಿವೆ.

ಅನಾವರಣಕ್ಕೆ ಒಂದಿಲ್ಲೊಂದು ವಿಘ್ನಗಳು ಅಡ್ಡಿಯಾಗುತ್ತಿದ್ದು, ಕುವೆಂಪು ಪ್ರತಿಮೆ ಅನಾವರಣಕ್ಕೆ ಅಡ್ಡಿಗಳೇನು ಎಂದು ಕುವೆಂಪು ಅಭಿಮಾನಿಗಳು, ಸಾಹಿತ್ಯಾಸಕ್ತರು, ವಿವಿಧ ಸಂಘ-ಸಂಸ್ಥೆಗಳು ಜಿಲ್ಲಾಡಳಿತವನ್ನು ದಿನನಿತ್ಯ ಪ್ರಶ್ನಿಸುತ್ತಿದ್ದಾರೆ. 

ಈ ಮೊದಲು ನಿಗದಿಯಾದಂತೆ ಕುವೆಂಪು ಅವರ 107ನೇ ಜನ್ಮದಿನಚಾರಣೆ ಕಳೆದ ಡಿ. 29ರಂದೇ ಪ್ರತಿಮೆ ಅನಾವರಣೆಗೊಳ್ಳಬೇಕಿತ್ತು. ಅದರಂತೆ ಎಲ್ಲಾ ಸಿದ್ಧತೆಗಳೂ ನಡೆದಿದ್ದವು. ಆಳೆತ್ತರದ ಪ್ರತಿಮೆಯನ್ನು ಅದಕ್ಕಿಂತ ಮುಂಚಿತವಾಗಿ ಕುವೆಂಪು ರಂಗಮಂದಿರದ ಎದುರು ನಿಲ್ಲಿಸಲಾಗಿತ್ತು. ಆದರೆ, ಅನಾವರಣಗೊಳಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಇದಕ್ಕೆ ಒಪ್ಪಿಗೆ ಸೂಚಿಸಲಿಲ್ಲ. 

ನಂತರ ಒಮ್ಮೆ ಕುಪ್ಪಳಿಗೆ ಮುಖ್ಯಮಂತ್ರಿ ಬಂದಾಗ ಇಲ್ಲಿಗೂ ಬಂದು ಪ್ರತಿಮೆ ಅನಾವರಣಗೊಳಿಸುತ್ತಾರೆಂಬ ನಿರೀಕ್ಷೆಯೂ ಹುಸಿಯಾಯಿತು. ಈಗ ಇದೇ ಫೆ. 18ರಂದು ಮುಖ್ಯಮಂತ್ರಿ ಜಿಲ್ಲೆಗೆ ಬರುವುದು ನಿಗದಿಯಾಗಿದೆ. ಅಂದೇ ಈ ಒಂಬತ್ತು ಕಾಲು ಅಡಿ ಎತ್ತರದ ಶಿಲ್ಪಾಕೃತಿ ಅನಾವರಣಗೊಳ್ಳುವ ನಿರೀಕ್ಷೆ ಇದೆ.
 
ಆದರೆ, ಇದಕ್ಕಿಂತ ಒಂದು ದಿವಸ ಮುಂಚೆ ಅಂದರೆ ಫೆ. 17ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಇಷ್ಟೇ ಗಾತ್ರದ ಕುವೆಂಪು ಪ್ರತಿಮೆಯನ್ನು ಸದಾನಂದಗೌಡ ಅವರೇ ಅನಾವರಣಗೊಳಿಸಲಿದ್ದಾರೆ. ಅಂದು ಕುವೆಂಪು ಕುಟುಂಬದ ಬಹುತೇಕ ಸದಸ್ಯರು ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾಗಾಗಿ, ಮರುದಿನವೇ ಶಿವಮೊಗ್ಗದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಅವರೆಲ್ಲರೂ ಪಾಲ್ಗೊಳ್ಳಬೇಕಿದ್ದರಿಂದ ಅಂದೇ ಪ್ರತಿಮೆ ಅನಾವರಣಗೊಳ್ಳುವುದು ಬಹುತೇಕ ಕಷ್ಟ ಎನ್ನಲಾಗುತ್ತಿದೆ.

ಸದಾನಂದಗೌಡ ಅವರ ಜಿಲ್ಲಾ ಪ್ರವಾಸದಲ್ಲಿ ಈ ಕಾರ್ಯಕ್ರಮ ಇನ್ನೂ ಸೇರ್ಪಡೆಗೊಳ್ಳದಿರುವುದರಿಂದ 18ರಂದು ಕುವೆಂಪು ಪ್ರತಿಮೆ ಅನಾವರಣ ಇನ್ನಷ್ಟು ದಿವಸ ಅಥವಾ ತಿಂಗಳು ಮುಂದಕ್ಕೆ ಹೋಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಪ್ರತಿಮೆಯನ್ನು ಅನಾವರಣಗೊಳಿಸದೇ ತಿಂಗಳಾನುಗಟ್ಟಲೆ ಮುಸುಕು ಹಾಕಿ, ಅವರ ಹೆಸರಿನ ಕುವೆಂಪು ರಂಗಮಂದಿರದ ಎದುರೇ ಇಟ್ಟಿರುವುದು ಯಾರಿಗೂ ಶೋಭೆ ತರುವುದಲ್ಲ. ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ವಹಿಸದೆ ಮೊದಲು ಪ್ರತಿಮೆ ಅನಾವರಣಗೊಳಿಸಬೇಕು ಎನ್ನುತ್ತಾರೆ ಕುವೆಂಪು ಅವರ ಅಪ್ಪಟ ಅಭಿಮಾನಿ ವೆಂಕಟೇಶ್.

`ಜಿಲ್ಲಾಡಳಿತದ ಜತೆ ಈ ಕುರಿತು ಚರ್ಚಿಸಲಾಗಿದೆ. 18ರಂದೇ ಮುಖ್ಯಮಂತ್ರಿ ಅವರಿಂದ ಅನಾವರಣ ಗೊಳಿಸುವಂತೆ ಕೇಳಿಕೊಳ್ಳಲಾಗುತ್ತಿದೆ. ಜನರು ಪದೇಪದೇ ಈ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ಪ್ರತಿಮೆ ಅನಾವರಣಕ್ಕೆ ಎಲ್ಲಾ ಸಿದ್ಧತೆ ಮುಗಿದಿವೆ~ ಎನ್ನುತ್ತಾರೆ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.