ಶಿಕಾರಿಪುರ: `ಹಲವು ವಚನಕಾರಿಗೆ ಜನ್ಮ ನೀಡಿದ ಈ ತಾಲ್ಲೂಕು ವಚನ ಚಳವಳಿಗೆ ಸಾಕಷ್ಟು ಕಾಣಿಕೆ ನೀಡಿದೆ' ಎಂದು 4ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾದ ಪ್ರೊ.ಸ.ಉಷಾ ಹೇಳಿದರು.
ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ನಡೆದ 4ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಜಗಣ್ಣ ಮುಕ್ತಾಯಕ್ಕ ವೇದಿಕೆಯಲ್ಲಿ ಅವರು ಮಾತನಾಡಿದರು.
`ತಾಲ್ಲೂಕಿನ ಬಳ್ಳಿಗಾವಿಯ ಅಲ್ಲಮಪ್ರಭು, ಉಡುತಡಿಯ ಅಕ್ಕಮಹಾದೇವಿ, ಮುತ್ತಿಗೆಯ ಅಜಗಣ್ಣ ಮುಕ್ತಾಯಕ್ಕರ ವಚನಗಳು ವಚನ ಸಾಹಿತ್ಯಕ್ಕೆ ತಾಲ್ಲೂಕಿನ ಕೊಡುಗೆಯಾಗಿವೆ. ಆಧುನಿಕ ಸಾಹಿತ್ಯ ಚರಿತ್ರೆಯಲ್ಲಿ ಪ್ರವಾಸೋದ್ಯಮಕ್ಕೂ ತಾಲ್ಲೂಕಿನಲ್ಲಿ ಸಾಕಷ್ಟು ಅವಕಾಶ ಇದ್ದು, ಐತಿಹಾಸಿಕ ಸ್ಮಾರಕಗಳು, ಉಡುತಡಿಯ ಪರದೇಶಿ ಮಲ್ಲಪ್ಪನ ಕಟ್ಟೆ, ಮಹಾದೇವಿಯಕ್ಕನ ಸ್ಮಾರಕ, ಬಳ್ಳಿಗಾವೆ, ಮಾಳಗೊಂಡನಕೊಪ್ಪ, ಶಿವಳ್ಳಿ ಕಾನಳ್ಳಿಯ ರಾಮಯ್ಯನ ಸಮಾಧಿ ಗುಡಿ, ಹಳೇ ಮುತ್ತಿಗೆಯಲ್ಲಿ ಅಜಗಣ್ಣ ಮುಕ್ತಾಯಕ್ಕನ ಗುಡಿ, ಹಿರೇಜಂಬೂರಿನ ಸತ್ಯಕ್ಕನ ಗುಡಿ ಸೇರಿದಂತೆ ಹಲವು ಐತಿಹಾಸಿಕ ಸ್ಥಳಗಳಿದ್ದಾವೆ. ಈ ಭಾಗದಲ್ಲಿ ಸಹಜವಾಗಿ ಬೆಳೆಯುವ ಮಾವಿನ ಹಣ್ಣುಗಳ ಸಂರಕ್ಷಣೆಗೆ ಶೀತಲಿಕರಣ ಘಟಕದ ಅವಶ್ಯಕತೆ ಇದೆ' ಎಂದು ಹೇಳಿದರು.
ತಾಲ್ಲೂಕಿನಲ್ಲಿ ಹಟ್ಟಿಹಬ್ಬ, ದೀಪಾವಳಿ ಉತ್ಸವಗಳು, ಅಂಟಿಕೆ-ಪಿಂಟಿಕೆ ಎಂದು ದೀಪಾವಳಿಯ ಸಂದರ್ಭದಲ್ಲಿ ಹಾಡುತ್ತ ಬರುವ ಹೆಣ್ಣುಮಕ್ಕಳು ಜನಪದ ಸಂಸ್ಕೃತಿಯನ್ನು ಉಳಿಸಿ-ಬೆಳೆಸಿಕೊಂಡು ಹೋಗುತ್ತಿರುವುದು ಹೆಮ್ಮೆಯ ವಿಚಾರ. ಹಲವು ವೈಶಿಷ್ಟ್ಯ ಹೊಂದಿರುವ ಈ ತಾಲ್ಲೂಕಿನ ಸಾಂಸ್ಕೃತಿಕ ಬದುಕನ್ನು ಯುವಪೀಳಿಗೆ ಉಳಿಸಿಕೊಂಡು ಹೋಗಬೇಕಾಗಿದೆ ಎಂದು ಕರೆ ನೀಡಿದರು.
ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, `ತಾಂತ್ರಿಕ ಯುಗದಲ್ಲಿ ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗಿ, ಕನ್ನಡ ಭಾಷೆ ಮರೆಯುತ್ತಿರುವ ಯುವ ಸಮುದಾಯಗಳಲ್ಲಿ ಕನ್ನಡದ ಬಗ್ಗೆ ಅರಿವು ಮೂಡಿಸುವಲ್ಲಿ ಸಾಹಿತ್ಯ ಸಮ್ಮೇಳನಗಳು ಸಹಕಾರಿಯಾಗಿವೆ.
ಕನ್ನಡ ಭಾಷೆಯ ನೆಲ, ಭಾಷೆ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸೇವೆ ಸಲ್ಲಿಸುತ್ತಿದೆ. ತಾಲ್ಲೂಕು ಹಲವು ವರ್ಷಗಳ ಹಿಂದಿನಿಂದಲೂ ವಿದ್ಯಾಕೇಂದ್ರವಾಗಿ ಹೆಸರು ಮಾಡಿದ್ದು, ಹಲವು ವಚನಕಾರರಿಗೆ ಜನ್ಮನೀಡಿದೆ. ತಾಲ್ಲೂಕಿನ ಯಾವುದೇ ಕಲ್ಲನ್ನು ಎಡವಿದರೂ ಒಂದು ಶಾಸನವಾಗಿರುತ್ತದೆ ಎಂದು ಹಿರಿಯರು ಈ ತಾಲ್ಲೂಕಿನ ಇತಿಹಾಸದ ಬಗ್ಗೆ ಹೇಳಿದ್ದಾರೆ ಎಂದು ನುಡಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಅಧಿಕಾರವಧಿಯಲ್ಲಿ ಕನ್ನಡ ಭಾಷೆಯ ಆಭಿವೃದ್ಧಿಗಾಗಿ ಹಲವು ಯೋಜನೆ ನೀಡಿದ್ದು, ಐತಿಹಾಸಿಕವಾಗಿ ಪ್ರಖ್ಯಾತಿ ಹೊಂದಿರುವ ತಾಲ್ಲೂಕಿನ ಅಭಿವೃದ್ಧಿಗಾಗಿ ಹಲವು ಕಾರ್ಯಗಳನ್ನು ಮಾಡಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಡಿ.ಮಂಜುನಾಥ್ ಮಾತನಾಡಿ, `ನಮ್ಮ ಮಕ್ಕಳಿಗೆ ಹಾಗೂ ಯುವ ಸಮುದಾಯಕ್ಕೆ ಸಾಹಿತ್ಯದ ಅರಿವು ಮೂಡಿಸುವ ಆಶಯವನ್ನು ಹೊಂದುವ ಮೂಲಕ ಸಮ್ಮೇಳನಗಳು ಜನತೆಯಲ್ಲಿ ಹೊಸ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿವೆ' ಎಂದರು.
ನಿಕಟಪೂರ್ವ ಸಮ್ಮೇಳನ ಸರ್ವಾಧ್ಯಕ್ಷರಾದ ಎಸ್.ಆರ್.ಕೃಷ್ಣಪ್ಪ ಮಾತನಾಡಿ, `ಕನ್ನಡ ಸಾಹಿತ್ಯ ಪರಿಷತ್ತು ನಿರಂತರ ಚಟುವಟಿಕೆ ನಡೆಸಲು ಕನ್ನಡ ಭವನ ನಿರ್ಮಿಸುವ ನಿಟ್ಟಿನಲ್ಲಿ ನಮ್ಮ ಜನಪ್ರತಿನಿಧಿಗಳು ಗಮನ ಹರಿಸಬೇಕು' ಎಂದು ಹೇಳಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಸುದರ್ಶನ್ ಮಾತನಾಡಿದರು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಎಸ್. ಹನುಮಂತಪ್ಪ, ತಹಶೀಲ್ದಾರ್ ಪ್ರಕಾಶ್ ಗಣಚಾರಿ, ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಚಂದ್ರಶೇಖರ್, ಪುರಸಭೆ ಮುಖ್ಯಾಧಿಕಾರಿ ಮನೋಹರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಸಿದ್ದಲಿಂಗಪ್ಪ, ಜಿಲ್ಲಾ ವಾರ್ತಾಧಿಕಾರಿ ಹಿಮಂತ್‌ರಾಜು, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಹುಚ್ಚರಾಯಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಿನ್ನಪ್ಪ ಕಸಾಪ ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ್ ಶೇರೆಗಾರ್, ಶಿರಾಳಕೊಪ್ಪ ಘಟಕ ಅಧ್ಯಕ್ಷ ನಾಗರಾಜ್, ಪದಾಧಿಕಾರಿಗಳಾದ ಚಿನ್ನಪ್ಪ ಓಬಳೇರ್, ನಾಗರಾಜ್ ಆಚಾರ್, ಸತ್ಯನಾರಾಯಣ್, ಎಸ್.ಬಿ.ಅರುಣ್, ಹಿರೇಕಸವಿ ಸುಧಾಕರ್, ತಾಳಗುಂದ ಮಹಾದೇವಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.