ADVERTISEMENT

ಸಾಹಿತ್ಯದ ಕೆಲಸದಲ್ಲಿ ವ್ಯಕ್ತಿ ಆರಾಧನೆ ಸಲ್ಲ: ನಾ.ಡಿಸೋಜ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2016, 6:29 IST
Last Updated 3 ಅಕ್ಟೋಬರ್ 2016, 6:29 IST

ಸಾಗರ:  ‘ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟ ಕೆಲಸಗಳಲ್ಲಿ ವ್ಯಕ್ತಿ ಆರಾಧನೆ ಸಲ್ಲ’ ಎಂದು ಸಾಹಿತಿ ನಾ.ಡಿಸೋಜ ಹೇಳಿದರು.
ಗಾಂಧಿ ಮೈದಾನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮೂರು ದಿನಗಳ ಕಾಲ ಆಯೋಜಿಸಿದ್ದ 6ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.

‘ಸಾಹಿತ್ಯ ಸಮ್ಮೇಳನಗಳಲ್ಲಿ ಅದರ ಅಧ್ಯಕ್ಷರು ಹಾಗೂ ಭಾಷಣಕಾರರಾಗಿ ಬರುವ ಸಾಹಿತಿಗಳ ಮಾತಿಗೆ ಹೆಚ್ಚಿನ ಪ್ರಾತಿನಿಧ್ಯ ದೊರಕಬೇಕು. ಆದರೆ ಹೆಚ್ಚಿನ ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತ್ಯದ ಗಂಧ ಗಾಳಿ ಇಲ್ಲದ  ರಾಜಕಾರಣಿಗಳಿಗೆ ವೇದಿಕೆಗಳಲ್ಲಿ ಹೆಚ್ಚಿನ ಮನ್ನಣೆ ದೊರಕುತ್ತಿದೆ. ಈ ಪ್ರವೃತ್ತಿ ದೂರವಾಗಬೇಕು’ ಎಂದರು.

‘ಕನ್ನಡ ಮಾತನಾಡುವ ಜನರಿಂದ ಭಾಷೆ ಉಳಿದಿರುವ ಜೊತೆಗೆ ಕನ್ನಡ ಬರಹಗಾರರಿಂದ ಅದು ಶ್ರೀಮಂತ ಗೊಂಡಿದೆ. ಇಂಗ್ಲಿಷ್ ಸೇರಿದಂತೆ ಇತರ ಭಾಷೆಗಳನ್ನು ದ್ವೇಷಿಸದೆ ನಮ್ಮದು ಎನ್ನುವ ಕಾರಣಕ್ಕೆ ಕನ್ನಡ ಭಾಷೆಯನ್ನು ಪ್ರೀತಿಸಿ, ಗೌರವಿಸಿ ಉಳಿಸಿಕೊಳ್ಳಬೇಕಾದ ತುರ್ತು ನಮ್ಮ ಎದುರು ಇದೆ’ ಎಂದು ಹೇಳಿದರು.

‘ಮನುಷ್ಯನ ಮನಸ್ಸನ್ನು ಅರಳಿಸುವ ಶಕ್ತಿ ಇರುವುದು ಸಾಹಿತ್ಯದ ಹೆಚ್ಚು ಗಾರಿಕೆಯಾಗಿದೆ.  ಬದುಕಿನ ಬಗ್ಗೆ ಚಿಂತನೆ ಮೂಡಿಸುವುದೇ ಸಾಹಿತ್ಯದ ಮೂಲ ಉದ್ದೇಶವಾಗಿದೆ. ಬದುಕಿನ ಅಂತಃಸತ್ವವನ್ನು ಹಿಡಿದಿಡುವ ಲೇಖಕ ಮಾತ್ರ ಪ್ರಭಾವಶಾಲಿಯಾಗಬಲ್ಲ’ ಎಂದು ಅಭಿಪ್ರಾಯಪಟ್ಟರು.

‘ಮಲೆನಾಡಿನಲ್ಲಿ ಈ ಹಿಂದೆ ವರ್ಷಕ್ಕೆ 360 ಇಂಚು ಮಳೆ ಆಗುತ್ತಿತ್ತು.  ಈಗ ಅದರ ಪ್ರಮಾಣ 70 ಇಂಚಿಗೆ ಇಳಿದಿದೆ. ಈ ಬಗ್ಗೆ ಕಾರಣಗಳನ್ನು ಕಂಡು ಕೊಳ್ಳುವ ಕುರಿತು ಸರ್ಕಾರ ಸಂಶೋಧನೆ ನಡೆಸುವ ಬದಲು ಮಳೆ ತರಿಸಲು ಹೋಮ ಹವನ, ಮೋಡ ಬಿತ್ತನೆ ಯಂತಹ ನಿರರ್ಥಕ ಕಾರ್ಯದಲ್ಲಿ ತೊಡಗಿರುವುದು ವಿಷಾದದ ಸಂಗತಿ’ ಎಂದರು.

‘ತಾಲ್ಲೂಕು  ಕೇಂದ್ರವೊಂದರಲ್ಲಿ ಮೂರು ದಿನಗಳ ಕಾಲ ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ನಡೆದಿರುವುದು ಸಾಮಾನ್ಯ ಸಂಗತಿ ಯಲ್ಲ. ಅರ್ಥಪೂರ್ಣ ಗೋಷ್ಠಿಗಳು ಸಮ್ಮೇಳನದ ಮಹತ್ವವನ್ನು ಹೆಚ್ಚಿಸಿವೆ. ಸಮ್ಮೇಳನದಲ್ಲಿ ಊಟದ ವ್ಯವಸ್ಥೆ ಮಾಡದೆ ಇರುವುದರಿಂದ ಒಳ್ಳೆಯದೇ ಆಗಿದೆ’ ಎಂದು ಹೇಳಿದರು.

ಸಮ್ಮೇಳನದ ಸರ್ವಾಧ್ಯಕ್ಷ ಪ. ಬಂಗಾರಿ ಭಟ್ಟ, ಜಿಲ್ಲಾ ಪಂಚಾಯ್ತಿ ಸದಸ್ಯ ಕಾಗೋಡು ಅಣ್ಣಪ್ಪ, ಸದಸ್ಯ ರಾಜಶೇಖರ ಗಾಳಿಪುರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಉಪಾಧ್ಯಕ್ಷ ಪರಶುರಾಮ ಕೆ.ಎಚ್., ನಗರಸಭೆ ಅಧ್ಯಕ್ಷೆ ಎನ್.ಉಷಾ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜೂರ್ ಆಲಿ ಖಾನ್, ಸದಸ್ಯ ಐ.ಎನ್.ಸುರೇಶ್ ಬಾಬು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ವಿ. ಹಿತಕರ ಜೈನ್, ಜಿಲ್ಲಾ ಘಟಕದ ಉಪಾಧ್ಯಕ್ಷ ತಿರುಮಲ ಮಾವಿನಕುಳಿ ಸೇರಿದಂತೆ ಇತರರು  ಹಾಜರಿದ್ದರು. ಆಯೀಷಾ ಬಾನು ಸ್ವಾಗತಿಸಿದರು, ವೈ. ಮೋಹನ್ ವಂದಿಸಿದರು. ದೀಪಕ್ ಸಾಗರ್ ನಿರೂಪಿಸಿದರು.

ಸಮ್ಮೇಳನದ ನಿರ್ಣಯಗಳು
*5ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕಡ್ಡಾಯ

*ಪರಿಸರ ಸಂರಕ್ಷಣೆಗಾಗಿ ಜಲ ಮೂಲಗಳನ್ನು ಪುನಶ್ಚೇತನಗೊಳಿಸಿ
*ರೈತರ, ಕೃಷಿ ಕಾರ್ಮಿಕರ ಹಿತರಕ್ಷಣೆಗಾಗಿ ಅಗತ್ಯ ನೀತಿ ರೂಪಿಸಬೇಕು.
*ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯಲ್ಲಿ ಕನ್ನಡ ಭಾಷೆಯ ಅಂಕಗಳನ್ನು ಪರಿಗಣಿಸಬೇಕು.
*ಜೋಗ ಜಲಪಾತದ ನೈಸರ್ಗಿಕತೆಗೆ ಧಕ್ಕೆ ಬರದಂತೆ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು.
*ಬಹುರಾಷ್ಟ್ರೀಯ ಕಂಪೆನಿಗಳು ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ನೀಡುವಂತಾಗಬೇಕು.
*ಸಾಹಿತ್ಯ, ಸಂಸ್ಕೃತಿಗೆ ಸಂಬಂಧಪಟ್ಟ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪರಿಷತ್ತಿನ ಪ್ರಾತಿನಿಧ್ಯವಿರಬೇಕು.
*ಸಾಹಿತಿ ನಾ.ಡಿಸೋಜ ಅವರಿಗೆ ನೃಪತುಂಗ ಪ್ರಶಸ್ತಿ ಜೊತೆಗೆ ರಾಷ್ಟ್ರ ಕವಿ ಎಂದು ಬಿರುದು ನೀಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT