ಶಿವಮೊಗ್ಗ: ‘ತೋಚಿದ್ದನ್ನು ಗೀಚುವುದೆಲ್ಲ ಕವನವಲ್ಲ ಎನ್ನುತ್ತಾರೆ ಅನುಭವಿಗಳು. ಆದರೆ, ನಾನು ಬರೆದದನ್ನು ‘ಗೀಚಿದ್ದು’ ಹೆಸರಲ್ಲೇ ಕವನ ಸಂಕಲನ ಮಾಡುತ್ತಿದ್ದೇನೆ. ಗೀಚುವುದು ಎಂದರೆ ಅದು ಚಿಕ್ಕದು, ಕಡಿಮೆ ಎಂಬ ಭಾವನೆ ಅಲ್ಲ’ ಎಂದು ಪತ್ರಕರ್ತ ಎಸ್.ಕೆ. ಗಜೇಂದ್ರಸ್ವಾಮಿ ಪ್ರತಿಪಾದಿಸಿದರು.
ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರ ನಡೆದ ಕವಿಗೋಷ್ಠಿಯನ್ನು ಕವನ ವಾಚಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಹೊತ್ತುಗೊತ್ತು ನಿಗದಿ ಇಲ್ಲದೇ ಒಮ್ಮೆ ಬರುವ ಸಾವಿಗೆ ಭಯವೇಕೆ? ಬಂದರೆ ಬಂದೀತು....
ಎಂದು ಕವನ ವಾಚಿಸುವ ಮೂಲಕ ಸಾವು ಎಲ್ಲರಿಗೂ ಸಹಜ, ಆದರೆ, ಸಾವಿಗೂ ಮುನ್ನ ನಾವು ಮಾಡುವ ಕೆಲಸ ಮುಖ್ಯ ಎನ್ನುವ ಸಂದೇಶ ಸಾರಿದರು.
‘ನಾನು ಬರೆಯುತ್ತೇನೆ ಯಾರನ್ನೋ ದ್ವೇಷಿಸುವುದಕ್ಕಲ್ಲ. ನನ್ನನ್ನು ನಾನು ಸಂತೈಸಿಕೊಳ್ಳಲು’ ಎನ್ನುವ ಸಾಲುಗಳ ಮೂಲಕ ಕವನ ವಾಚನ ಆರಂಭಿಸಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟೆಲೆಕ್ಸ್ ರವಿ ತುಳಿತಕ್ಕೆ ಒಳಗಾದ ಸಮುದಾಯಗಳ ಮೇಲಿನ ದೌರ್ಜನ್ಯ, ಕ್ರೌರ್ಯ, ಶೋಷಣೆ ಚಿತ್ರಣ ಕಟ್ಟಿಕೊಟ್ಟರು.
ಸಾಗರ ಇಂದಿರಾಗಾಂಧಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾ ಕೋಳಿವಾಡ ವಾಚಿಸಿದ ‘ಮುಖವಾಡ’ ಕವನ ಜನರು, ಅಧಿಕಾರಿಗಳು, ರಾಜಕಾರಣಿಗಳ ಮುಖವಾಡದ ಬದುಕಿಗೆ ಕನ್ನಡಿಯಾಗಿತ್ತು.
‘ರಾಜಕಾರಣಿಗಳಿಗೆ ಚೀಲಗಟ್ಟಲೆ ಮುಖವಾಡ ಬೇಕು. ಸಮಯಕ್ಕೆ ತಕ್ಕಂತೆ ಬದಲಾಯಿಸಲು... ಮುಖವಾಡದ ಸಂತೆಯಲ್ಲಿ ನೈಜತೆ ಕಳೆದಿದೆ’ ಎನ್ನುವ ಸಾಲು ಪ್ರಸ್ತುತ ರಾಜಕಾರಣ ಅಣಕವಾಗಿತ್ತು.
ಕೆ.ಹರ್ಷಿತಾ ಅವರು ಅಕ್ಕಮಹಾದೇವಿ ಕುರಿತು ಬರೆದ ಆಧ್ಯಾತ್ಮಿಕ ಕವನ ಮಹಿಳೆಯರ ದೃಢ ಮನೋಸ್ಥಿತಿ, ಅಲೌಕಿಕ ದಾರಿಯಲ್ಲಿ ಸಾಗುತ್ತಲೇ ವಾಸ್ತವ ಬದುಕು ನೋಡಿದ ಪರಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ರಾಜಶೇಖರ ಪಾಟೀಲ ಅವರ ‘ಧನ್ಯೋಸ್ಮಿ’ ಕವಿತೆ ಪೌರಾಣಿಕ ಪ್ರಸಂಗಗಳ ಜತೆ ಹಳೆಯ ನೆನಪುಗಳ ಬಿಚ್ಚಿಟ್ಟಿತು.
ಡಿ.ಬಿ.ನಾಗರತ್ನಾ ಅವರ ಕವಿತೆ ಹೊಸ ವರ್ಷದ ದಿಗಿಲು ಸಂಭ್ರಮಾ ಚರಣೆಯ ಹೆಸರಲ್ಲಿ ಆದ ಎಡವಟ್ಟುಗಳನ್ನು ಕಟ್ಟಿಕೊಡುವಲ್ಲಿ ಸಫಲವಾಗಿತ್ತು. ಟಿ.ಎಲ್.ಸುಬ್ರಹ್ಮಣ್ಯ ಅಡಿಗ ಅವರ ‘ಕಾಲೇಜಿನ ಮೂವರು ಹುಡುಗಿಯರು’ ಕವನ ಸಭಿಕರನ್ನು ನಗೆಗಡಲಲ್ಲಿ ತೇಲಿಸಿತು. ಎಂ.ಗೀತಾ ಅವರ ಕವನ ‘ಕೆಲಸದವಳು’, ಮನೆ ಒಡತಿಯ ಮನೋಸ್ಥಿತಿಯ ಬಿಂಬವಾಗಿತ್ತು.
ಸದಾನಂದ ವಿ.ಗೌಡ ಅವರು ದೇವರಿಗಿಂತ ತಾಯಿಯೇ ಶ್ರೇಷ್ಠ ಎಂದು ಕವನದ ಮೂಲಕ ಪ್ರತಿಪಾದಿಸಿದರು. ನವೀನ್ ಮಂಡಗದ್ದೆ ವಾಚಿಸಿದ ಕವನ ಪರಿಸರ ಜತೆ ಪ್ರೀತಿ ಬೆಸದ ಕಂಪು ನೀಡಿತು. ಪ್ರಕಾಶ್ ಶೇಟ್ ಕೆ.ಎಸ್. ನರಸಿಂಹಸ್ವಾಮಿ ಅವರನ್ನು ನೆನಪು ಮಾಡಿಕೊಂಡರು. ನಾಗೇಶ ವಾಡಲ್ ಅವರ ‘ನಿನಗೆ ಪ್ರೀತಿ ಮುಖ್ಯನಾ, ಸ್ನೇಹ ಮುಖ್ಯನಾ’ ಕವಿತೆ ಹಾಸ್ಯ, ವಿಂಡಬನೆ ಮಿಶ್ರಣವಾಗಿತ್ತು.
ಎಚ್.ತಿಮ್ಮಪ್ಪ ಕವನದ ಮೂಲಕ ಯೋಧರ ನೆನಪು ಕಟ್ಟಿಕೊಟ್ಟರು. ಪಿ.ಸಿ. ಶಿವಕುಮಾರ್ ಅವರು ಮನುಷ್ಯನ ಜನನ, ನಂತರದ ಬದುಕಿನ ನೋಟ ಬಿಚ್ಚಿಟ್ಟರು. ಆಶಾರಾಣಿ ಅವರ ‘ಜ್ಯೋತಿ’ ಕವನ ಬದುಕಿನ ದಾರಿದೀಪ ತೋರಿತು.
ರವಿ ತೇಜ ಅವರ ‘ನನ್ನ ಹೊಲದ ಏರಿಯ ಮೇಲೆ ಒಣಗಿದ ಮರ’... ಬದುಕಿನ ಚಿತ್ರಣ ಕಟ್ಟಿಕೊಟ್ಟಿತು. ಕೆ.ರಾಮಚಾರಿ ಅವರ ‘ನಾನು ಅಳುತಾ ಬರುವಾಗ ಜಗ ನಗುತಲಿತ್ತು’ ಕವನ ಗಮನ ಸೆಳೆಯಿತು. ಪ್ರಕಾಶ್ ಆರ್. ಕಮ್ಮಾರ್ ಅವರ ‘ಮತ್ತೇನು?’ ಕವನ ನೋಟು ರದ್ದತಿಯ ಸಮಸ್ಯೆಗಳ ಬಿಚ್ಚಿಟ್ಟಿತು.
ನಾಗರಾಜ್ ನಾಯ್ಕ ಅವರು ಬಡವರು, ಶೋಷಿತರ ನೋವಿಗೆ ಕವನದ ಮೂಲಕ ಧ್ವನಿ ತುಂಬಿದರು. ಸೋಮಶೇಖರಪ್ಪ ದಿಗ್ಗೇನಹಳ್ಳಿ ನೇತ್ರದಾನದ ಮಹತ್ವ ಸಾರಿದರು.
ವಿಸ್ಮಯ ಅವರು ಹೆಣ್ಣಿನ ಅಪಮಾನದ ಬದುಕಿನ ಚಿತ್ರ ಕಟ್ಟಿಕೊಟ್ಟರು. ಸತ್ಯನಾರಾಯಣ ಸಾಗರ, ಗುರುರಾಜ್ ಆಚಾರ್ಯ, ಗಂಗಾಧರಯ್ಯ, ಸಹನಾ, ತನುಜಾ ಅವರು ಮಲೆನಾಡಿನ ಅರಣ್ಯ, ಪರಿಸರ ನಾಶ, ವಿಜ್ಞಾನ, ಅಭಿವೃದ್ಧಿ ತಂದ ಸಮಸ್ಯೆ, ಬರದ ಛಾಯೆಯ ಕುರಿತು ಕವನ ವಾಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.