ಶಿಕಾರಿಪುರ: ‘ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಅವರದು ಸಾಹಿತ್ಯದ ವ್ಯಕ್ತಿತ್ವ ಮಾತ್ರ ಅಲ್ಲ,ದೇಶದ ಜನರ ಸ್ವಾತಂತ್ರ್ಯ ಹಾಗೂ ಸಮಾನತೆಯನ್ನು ಎತ್ತಿ ಹಿಡಿಯುವಂತಹ ವ್ಯಕ್ತಿತ್ವವನ್ನು ಹೊಂದಿದ್ದರು’ ಎಂದು ವಿಮರ್ಶಕ ಸಾಗರ ಪ್ರೊ.ಟಿ.ಪಿ. ಅಶೋಕ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಕನ್ನಡ ಸ್ನಾತಕ,ಸ್ನಾತಕೋತ್ತರ ಅಧ್ಯಯನ ವಿಭಾಗ, ಇಂಗ್ಲಿಷ್ ವಿಭಾಗ ಹಾಗೂ ಹೆಗ್ಗೋಡು ನೀನಾಸಂ ಪ್ರತಿಷ್ಠಾನ ಆಶ್ರಯದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಷ್ಕೃತ ಸಾಹಿತಿ ಅನಂತಮೂರ್ತಿ ಕುರಿತು ನಡೆದ ಒಂದು ದಿನದ ಸಾಹಿತ್ಯ ಅಧ್ಯಯನ ಶಿಬಿರದಲ್ಲಿ ಅವರು ಮಾತನಾಡಿದರು.
‘ಸಾಹಿತ್ಯ ಕ್ಷೇತ್ರಕ್ಕೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಳ್ಳದ ಅನಂತ ಮೂರ್ತಿ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದ ಬಗ್ಗೆ ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವದ ವ್ಯವಸ್ಥೆಗೆ ಚ್ಯುತಿ ಬಂದಾಗ ಯಾವುದೇ ಪಕ್ಷ ನೋಡದೇ ಟೀಕಿಸಿದ್ದಾರೆ’ ಎಂದರು.
ಅನಂತಮೂರ್ತಿ ಬರವಣಿಗೆಯನ್ನು ವಿಕಾಸ ಕ್ರಮದಲ್ಲಿ ನೋಡಿದಾಗ ವೈಯಕ್ತಿಕ ನೆಲೆಯಿಂದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ನೆಲೆ ಜತೆಗೆ ವಿಶ್ವದ ಎಲ್ಲ ವಿದ್ಯಮಾನಗಳ ಬಗ್ಗೆ ಚಿತ್ರಣ ಸಿಗುತ್ತದೆ. ಅವರಸಂಸ್ಕಾರ ಮತ್ತು ವಂಶವೃಕ್ಷ ಕಾದಂಬರಿ 50 ವರ್ಷ ಪೂರೈಸಿದರೂ, ಪ್ರಸ್ತುತ ಕೂಡ ಓದುಗರ ಆಸಕ್ತಿಯನ್ನು ಉಳಿಸಿಕೊಳ್ಳುವ ಜತೆ, ಹಲವು ಬಗೆಯ ಓದುಗಳಿಗೆ ಕಾರಣವಾಗಿದೆ’
ಎಂದರು.
‘ತಿಳಿದಿರುವ ಸತ್ಯವನ್ನು ಕಥೆಗಳ ರೂಪದಲ್ಲಿ ಹೇಳುವುದು ಸಾಹಿತ್ಯ ಅಲ್ಲ. ತಿಳಿದು ಬರೆಯುವುದು ಮುಖ್ಯ ಅಲ್ಲ, ತಿಳಿಯಲು ಬರೆಯುವುದು ಮುಖ್ಯವಾಗುತ್ತದೆ. ಸಾಹಿತ್ಯ,ಕಲೆ ಕೇವಲ ಮನರಂಜನೆಯ ವಸ್ತು ಆಗಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕನ್ನಡ ವಿಭಾಗ ಮುಖ್ಯಸ್ಥ ಡಾ.ಕುಂಸಿ ಉಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಅನಂತಮೂರ್ತಿ ಅವರ ಬರವಣಿಗೆಯಲ್ಲಿ ಸೈದ್ಧಾಂತಿಕ ವಿಚಾರಗಳು ಅಡಗಿದ್ದವು. ಕರ್ನಾಟಕದ ಎಚ್ಚರದ ಸೂಕ್ಷ್ಮ ಪ್ರಜ್ಞೆ ಆಗಿದ್ದಯು.ಆರ್.ಅನಂತಮೂರ್ತಿ ಮರಣ ಹೊಂದಿದಾಗ ಪಟಾಕಿ ಹಚ್ಚಿ ಸಂಭ್ರಮಿಸಿದ ದುಷ್ಟರನ್ನು ನಾವು ನೋಡಿದ್ದೇವೆ’ ಎಂದರು.
ಪ್ರಾಂಶುಪಾಲ ಡಾ.ಜಿ.ಆರ್. ಹೆಗಡೆ ಅಧ್ಯಕ್ಷತೆ ವಹಿಸಿದ್ದರು.
ಶಿಬಿರದಲ್ಲಿ ಯು.ಆರ್. ಅನಂತಮೂರ್ತಿ ಕುರಿತು ಶಿವಮೊಗ್ಗ ಉಪನ್ಯಾಸಕ ಡಾ.ನಾಗರಾಜರಾವ್ ಮತ್ತು ಶಿವಮೊಗ್ಗ ಚಿಂತಕ ಡಾ.ಸಿರಾಜ್ ಅಹಮದ್ ಮಾತನಾಡಿದರು.
ಕನ್ನಡ ವಿಭಾಗ ಸಹ ಪ್ರಾಧ್ಯಾಪಕರಾದ ಎಚ್.ಚಿನ್ನಪ್ಪ, ಶೈಲಜಾಹೊಸಳ್ಳೇರ್, ಸಮಾಜಶಾಸ್ತ್ರ ವಿಭಾಗ ಸಹ ಪ್ರಾಧ್ಯಾಪಕ ಡಾ.ಶೇಖರ್, ವಿವಿಧ ವಿಭಾಗ ಮುಖ್ಯಸ್ಥರು, ಉಪನ್ಯಾಸಕರು ಉಪಸ್ಥಿತರಿದ್ದರು.
* ಅನಂತ ಮೂರ್ತಿ ಸಾಹಿತ್ಯ ಕ್ಷೇತ್ರಕ್ಕಷ್ಟೇ ಅಲ್ಲ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದ ಬಗ್ಗೆ ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ
ಪ್ರೊ.ಟಿ.ಪಿ. ಅಶೋಕ್
ವಿಮರ್ಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.