ಹೊಸನಗರ: ಮಲೆನಾಡಿನಾದ್ಯಂತ ನಂಬಿದ ಭೂತಾರಾಧನೆಯ ಪ್ರಾಣಿ ಬಲಿಯ ದೀಪಾವಳಿ ಬೂರೆ ಹಬ್ಬದ ದಿನ (ಮೊದಲ ದಿನ) ‘ನೋನಿ’ ಹಬ್ಬದ ಸಂಭ್ರಮ ಎಲ್ಲೆಡೆ ಬುಧವಾರ ನಡೆಯಿತು.
ಮುಂಗಾರು ಕೃಷಿಗೆ ಮುನ್ನಾ ಉತ್ತಮ ಬೆಳೆ ನಿರೀಕ್ಷೆಯಲ್ಲಿ ಆದ್ರೆ ಮಳೆ ನೋನಿ ಹಾಗೂ ದೀಪಾವಳಿ ನೋನಿ ಹೀಗೆ ವರ್ಷಕ್ಕೆ ಎರಡು ಬಾರಿ ನಡೆಯುವ ಭೂತಾರಾಧನೆಯ ಈ ಹಬ್ಬವು ಜಾತಿ, ಧರ್ಮ ಮೀರಿ ನಡೆಯುತ್ತದೆ ಎಂಬುದು ವಿಶೇಷ.
ಕಾಡಿನ ಮಧ್ಯೆ, ಬ್ಯಾಣ, ಹಾಡಿಗಲ್ಲಿ ಇರುವ ಬನ, ಗುಡಿಗಳಲ್ಲಿ ತಮ್ಮ ಪೂರ್ವಿಕರು ನಂಬಿ ನಡೆದುಕೊಂಡು ಬಂದ ಭೂತ, ದಯ್ಯ, ರಣ, ಚಂಡಿ, ಯಕ್ಷಿ, ಚೌಡಿ, ನಾಗನ ಆರಾಧನೆ ವಿಶಿಷ್ಟ ರೀತಿಯಲ್ಲಿ ಪೂಜೆ ನಡೆಯಿತು.
ದೊಡ್ಡ ಮರದ ಬುಡದಲ್ಲಿರುವ ಭೂತದ ಕಲ್ಲುಗಳಿಗೆ ಮೊದಲು ಅಭಿಷೇಕ, ಹೂವು, ಮಂಗಳಾರತಿ ಹಣ್ಣು ಕಾಯಿ ನೇವೇದ್ಯ ನಡೆಯುತ್ತದೆ. ನಂತರ ಬಲಿ ಕಲ್ಲಿನ ಬಳಿ ಕೋಳಿ, ಕುರಿಗಳನ್ನು ಬಲಿಕೊಡುವ ಮೂಲಕ ಪ್ರಾಣಿ ಬಲಿಯ ಪೂಜೆ ವ್ಯವಸ್ಥಿತವಾಗಿ ನೆರವೇರಿತು.
ಭೂತಾಳಿಕೆ: ಭೂತ, ಯಕ್ಷಿ, ಚೌಡಿಗಳು ಭೂತ ಪಾತ್ರಿಗಳ ಮೈಮೇಲೆ ಆಳಿಕೆ ಆಗುತ್ತದೆ. ಆಗ ಭಕ್ತರು ತಮ್ಮ ವೈಯಕ್ತಿಕ ಸಮಸ್ಯೆ, ಗ್ರಾಮದ ಕುಂದು ಕೊರತೆ ಬಗ್ಗೆ ಪ್ರಶ್ನೆ ಕೇಳಿ ಸೂಕ್ತ ಉತ್ತರ ಪಡೆಯುವ ಮೂಲಕ ಮಾನಸಿಕ ನೆಮ್ಮದಿಗೆ ಮೊರೆ ಹೋಗುತ್ತಾರೆ.
ಭೂತದ ಬನದ ಮರಗಳ ರೆಂಬೆಕೊಂಬೆ ಮೇಲೆ ಚೀಲದಲ್ಲಿ ಕಾಲು ಕಟ್ಟಿದ ಕೋಳಿಗಳು ನೇತಾಡುತ್ತಿದ್ದರೆ, ಮರದ ಬುಡದಲ್ಲಿ ಕುರಿಗಳನ್ನು ಬಲಿಗಾಗಿ ಕಟ್ಟಿ ಹಾಕಲಾಗಿರುತ್ತದೆ. ಇವುಗಳನ್ನು ಸಾರ್ವಜನಿಕವಾಗಿ ವಧೆ ಮಾಡುವುದು ಈ ಹಬ್ಬದ ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.