ADVERTISEMENT

‘ಭಾಷೆಯ ಭಾವೋದ್ವೇಗ ಅನಾರೋಗ್ಯದ ಲಕ್ಷಣ’

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2015, 5:26 IST
Last Updated 7 ಮಾರ್ಚ್ 2015, 5:26 IST

ಶಿವಮೊಗ್ಗ: ಭಾಷೆ ಕಟ್ಟುವ ಕಾರ್ಯದಲ್ಲಿ ಕಾಳಜಿ ಮುಖ್ಯ. ಭಾಷೆಯ ಬಗ್ಗೆ ಯಾರಾದರೂ ಉದ್ವೇಗದಿಂದ, ಕೋಪದಿಂದ ಮಾತನಾಡಿದರೆ ಅವರ ಆರೋಗ್ಯದಲ್ಲಿ ಏನೋ ತೊಂದರೆ ಆಗಿದೆ ಎಂಬ ಅನುಮಾನ ಮೂಡುತ್ತದೆ ಎಂದು ವಿಧಾನ ಪರಿಷತ್‌ ಸಭಾಪತಿ ಡಿ.ಎಚ್. ಶಂಕರಮೂರ್ತಿ ಹೇಳಿದರು.

ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ನಡೆದ 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಕಟ್ಟೋಣ ಹೊಸನಾಡು’ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಾಷೆಯ ಬಗ್ಗೆ ಆವೇಶದಿಂದ ಮಾತನಾಡುವ ಬದಲು ವಾಸ್ತವ ಸಂಗತಿ  ಅರಿಯಬೇಕು. ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡ ಭಾಷೆ ನಾಶವಾಗುತ್ತದೆ ಎನ್ನುವುದು ತಪ್ಪು ಅಭಿಪ್ರಾಯ ಎಂದರು.

ಕನ್ನಡ ಭಾಷೆಯ ಬಗ್ಗೆ ಅಭಿಮಾನ ಹಾಗೂ ನಂಬಿಕೆ ಇದ್ದಾಗ ಮಾತ್ರ ಹೊಸ ನಾಡು ಕಟ್ಟಬಹುದು. ನಾಡಿನ ಹಲವು ಜನರು ಭಾಷೆಯ ಬೆಳವಣಿಗೆಗೆ ಶ್ರಮಿಸಿದ್ದಾರೆ. ವಿಜ್ಞಾನ ಹಾಗೂ ಕಾನೂನು ಕ್ಷೇತ್ರದಲ್ಲಿ ಕನ್ನಡ ಪುಸ್ತಕ ಹಾಗೂ ಆಕರ ಗ್ರಂಥಗಳು ಪ್ರಕಟವಾಗಬೇಕು ಎಂದು ಅನಿಸಿಕೆ ಹಂಚಿಕೊಂಡರು.

ಎಲ್ಲ ಅಘಾತಗಳನ್ನು ಎದುರಿಸುವ ಮೂಲಕ ಕನ್ನಡ ಭಾಷೆ ಮುಂದೆ ಬರುತ್ತದೆ. ಪ್ರತಿಷ್ಠೆಗಾಗಿ ಇಂಗ್ಲಿಷ್ ಬಗ್ಗೆ ಪೋಷಕರು ಆಸಕ್ತಿ ವಹಿಸಿದ್ದಾರೆ. ಮುಂದಿನ ವರ್ಷಗಳಲ್ಲಿ ಕನ್ನಡ ಭಾಷೆ ಕಲಿಯದಿದ್ದರೆ ಉದ್ಯೋಗ ದೊರೆಯುವುದಿಲ್ಲ ಎಂಬ ಕಾನೂನು ಮಾಡಬೇಕಿದೆ ಎಂದರು.

‘ಕಾನೂನು-–ಕನ್ನಡ ಪುಸ್ತಕಗಳ ಕೊರತೆ’ವಿಷಯ ಕುರಿತು ಧಾರಾವಾಡ ನಿವೃತ್ತ ನ್ಯಾಯಾಧೀಶ ಮಿಠಲ್ ಕೋಡ್ ಮಾತನಾಡಿ, ಕಾನೂನು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಆಕರ ಗ್ರಂಥಗಳ ಕೊರತೆ ಇದೆ. ನ್ಯಾಯಾಧೀಶರಿಗೆ ಕನ್ನಡದಲ್ಲಿ ತೀರ್ಪು ನೀಡಲು ಅವಕಾಶ ಮಾಡಿಕೊಟ್ಟಿದೆ.

ರಾಜ್ಯದ ಹಲವು ನ್ಯಾಯಾಧೀಶರು ಕನ್ನಡದಲ್ಲಿ ತೀರ್ಪು ನೀಡಿದ್ದಾರೆ. ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರದ ಮೂಲಕ ಕನ್ನಡ ಭಾಷಾ ತಜ್ಞರ ಸಮಿತಿ ರಚಿಸಿ, ಕನ್ನಡ ತೀರ್ಪುಗಳ ಒಟ್ಟು ಸಂಕಲನದ ಸಂಪುಟ ರಚಿಸಬೇಕು ಎಂದು ಮನವಿ ಮಾಡಿದರು.

‘ಉನ್ನತ ಶಿಕ್ಷಣ-– ಕನ್ನಡದ ಆಕರ ಗ್ರಂಥಗಳು’ ವಿಷಯ ಕುರಿತು ಹಿರಿಯ ಸಾಹಿತಿ ಮೈಸೂರಿನ ಡಾ.ಪ್ರಧಾನ ಗುರುದತ್ತ ಮಾತನಾಡಿ, ಒಂದು ವಿಷಯದ ಅಧ್ಯಯದ ಮೂಲ ಆಕರ- ಗ್ರಂಥಗಳಲ್ಲಿ ಲಭ್ಯವಾಗುತ್ತದೆ.

ಪ್ರಾಚೀನ ಕಾಲದಿಂದಲೂ ಕನ್ನಡ ಭಾಷೆಯಲ್ಲಿ ಚರಕ ಸಂಹಿತೆ, ಮನು ಧರ್ಮಶಾಸ್ತ್ರ, ಸುಶೃತ ಸಂಹಿತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಆಕರ- ಗ್ರಂಥಗಳಿವೆ. ಆದರೆ, ವೈದ್ಯಕೀಯ ಕ್ಷೇತ್ರ ಹಾಗೂ ಕಾನೂನು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕನ್ನಡ ಭಾಷೆಯಲ್ಲಿ ಆಕರ- ಗ್ರಂಥಗಳ ಮುದ್ರಣ ಆಗಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.