ದಾವಣಗೆರೆ: ದೇಶದ ಸಮಸ್ಯೆಗಳ ಬಗ್ಗೆ ಕವಿ, ಸಾಹಿತಿಗಳು ಸ್ಪಂದಿಸುತ್ತಿಲ್ಲ ಎಂದು ಸಾಹಿತಿ ಡಾ.ಜಿ. ಕೃಷ್ಣಪ್ಪ ವಿಷಾದಿಸಿದರು. ರೈತರ ಭೂಮಿಯನ್ನು ಬಂಡವಾಳ ಶಾಹಿಗಳು ಕಿತ್ತುಕೊಂಡು ಅವರನ್ನು ನಿರ್ಗತಿಕರನ್ನಾಗಿ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ಶನಿವಾರ ನಡೆದ ‘ದ.ರಾ. ಬೇಂದ್ರೆ ನೆನಪಿನೊಂದಿಗೆ’ ಕಾರ್ಯಕ್ರಮದಲ್ಲಿ ಬೇಂದ್ರೆ ಅವರ ಕಾವ್ಯ ಕುರಿತು ಉಪನ್ಯಾಸ ನೀಡಿದರು.
ಬಡತನದ ಹಿನ್ನೆಲೆಯಿಂದ ಬಂದ ದ.ರಾ.ಬೇಂದ್ರೆ ಅವರು, ಬಡವ – ಶ್ರೀಮಂತರ ನಡುವಿನ ಕಂದಕದಂತಹ ಸಾಮಾಜಿಕ ಸಮಸ್ಯೆಗಳ ಬಗ್ಗೆಯೂ ಚಿಂತನೆ ಹೊಂದಿದ್ದರು. ನಿರ್ಗತಿಕರಿಗೆ ಬೆಲೆ ಇಲ್ಲವಾಗುತ್ತಿದೆ ಎನ್ನುವ ಅಂಶವನ್ನು ಕಾವ್ಯದಲ್ಲಿ ಹಲವು ರೂಪಕಗಳ ಮೂಲಕ ವಿವರಿಸಿದ್ದಾರೆ ಎಂದರು.
ಜಗತ್ತಿನ ಶ್ರೇಷ್ಠ ಕವಿಗಳ ಸಾಲಿನಲ್ಲಿ ಬೇಂದ್ರೆ ಕೂಡ ನಿಲ್ಲುತ್ತಾರೆ. ಮಾನವೀಯ ಮೌಲ್ಯ, ಶಾಂತಿಯನ್ನು ಕಾವ್ಯದ ಮೂಲಕ ಅನುಷ್ಠಾನಗೊಳಿಸುವ ಪ್ರಯತ್ನ ಮಾಡಿದರು ಎಂದು ಶ್ಲಾಘಿಸಿದರು.
ಕನ್ನಡದ ಕವಿಗಳು ಬೇಂದ್ರೆ ಅವರನ್ನು ಅಧ್ಯಯನ ಮಾಡಿದರೆ ರಸಾನೂಭೂತಿ, ರಮಣೀಯ ಭಾವ, ಆನಂದ, ಪ್ರೇಮ ಕುರಿತ ಕಾವ್ಯದ ಚೆಲುವು ಸವಿಯಬಹುದು ಎಂದರು. ಪ್ರೇಮ, ಪ್ರೀತಿ ಅವರ ಕಾವ್ಯದಲ್ಲಿ ಮೇಳೈ ಸಿರುವುದರಿಂದ ಅವರ ಸಾಹಿತ್ಯ ಶ್ರೇಷ್ಠ ವಾಗಿ ಉಳಿದುಕೊಂಡಿದೆ. ವಿಶ್ವದ ವ್ಯಾಪಕತೆ ಹಲವು ಕವನಗಳಲ್ಲಿ ಕಾಣಬಹುದು. ಹಾಗಾಗಿ ಯುವ ಕವಿಗಳು ಬೇಂದ್ರ ಸಾಹಿತ್ಯ ಅಧ್ಯಯನಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಜನಪದ ನುಡಿಯನ್ನು ಕಾವ್ಯ ಪ್ರಕಾರಕ್ಕೆ ಸಮರ್ಪಕವಾಗಿ ಬಳಸಿ ಕೊಂಡರು. ನಿಜದಂತೆ ಒಲವು ಇರಲಿ. ಚೆಲುವಿನಂತೆ ಬದುಕಿರಲಿ ಎನ್ನುವ ಅವರ ಕವನದ ಸಾಲುಗಳು ಎಲ್ಲ ಕಾಲಮಾನಕ್ಕೂ ಅನ್ವಯ ಎಂದು ಅಭಿಪ್ರಾಯಪಟ್ಟರು.
ಸಾಮಾನ್ಯರಿಗೆ ಅವರು ‘ವರ ಕವಿ’ (ಶ್ರೇಷ್ಠ ಕವಿ)ಯಾಗಿದ್ದರು. ಸತ್ವಯುತ ಬೀಜದ ಹೆಮ್ಮರವಾಗಿ ಅವರ ಕಾವ್ಯ ಬೆಳೆದಿದೆ. ನೆಲದ ಸಂಸ್ಕೃತಿಯ ಸೂಕ್ಮತೆಯನ್ನು ಅವರ ಕಾವ್ಯದಲ್ಲಿ ಕಾಣಬಹುದು ಎಂದರು.
ಜಗತ್ತಿನ ಯಾವ ಕವಿಯೂ ತನ್ನ ತಾಯಿ ಹೆಸರನ್ನು ಕಾವ್ಯನಾಮವನ್ನಾಗಿ ಇಟ್ಟುಕೊಂಡಿಲ್ಲ. ಆದರೆ, ಬೇಂದ್ರೆ ಅವರು, ಅಂಬಿಕಾತನಯದತ್ತ ಎಂದು ತನ್ನ ತಾಯಿ ಹೆಸರನ್ನು ಕಾವ್ಯ ನಾಮ ವನ್ನಾಗಿ ಇಟ್ಟುಕೊಂಡು ಸ್ತ್ರೀ ಸ್ವಾತಂತ್ರ್ಯ, ಗೌರವಕ್ಕೆ ಬೆಲೆ ನೀಡಿದ ಕೆಲ ಕವನಗಳ ಸಾಲುಗಳನ್ನು ಉಲ್ಲೇಖಿಸಿದರು.
ಇದೇ ಸಂದರ್ಭದಲ್ಲಿ ಕಾವ್ಯ ವಾಚನ ಮತ್ತು ಕಾವ್ಯ ಗಾಯನ ನಡೆಯಿತು. ಚಿತ್ರದುರ್ಗ ಕೋಟೆ ಸ್ಮಾರಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರೊ.ಎಚ್.ಶ್ರೀಶೈಲ ಆರಾಧ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎ.ಆರ್. ಉಜ್ಜನಪ್ಪ, ಪ್ರಾದೇಶಿಕ ಸಾರಿಗೆ ಅಧಿಕಾರಿ ಎಚ್.ಜಿ.ತೆಂಬದ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.