ಶಿವಮೊಗ್ಗ: ಭದ್ರಾ ಜಲಾಶಯದಿಂದ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ಬೇಸಿಗೆ ಹಂಗಾಮಿನಲ್ಲಿ ನೀರು ಹರಿಸಲು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ) ಸಿದ್ಧತೆ ನಡೆಸಿದೆ. ಆದರೆ, ಅದಕ್ಕೆ ನೀರಾವರಿ ಸಲಹಾ ಸಮಿತಿಯ (ಐಸಿಸಿ) ಹಸಿರು ನಿಶಾನೆಗಾಗಿ ಕಾದು ಕುಳಿತಿದ್ದು, ಜನವರಿ 5ಕ್ಕೆ ಐಸಿಸಿ ಸಭೆ ನಿಗದಿಯಾಗಿದೆ.
ಅಂದು ಇಲ್ಲಿನ ಮಲವಗೊಪ್ಪದ ಕಾಡಾ ಕಚೇರಿಯಲ್ಲಿ ಸಭೆ ನಡೆಯಲಿದ್ದು, ಐಸಿಸಿ ಅಧ್ಯಕ್ಷರೂ ಆದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಭೆಯ ನೇತೃತ್ವ ವಹಿಸಲಿದ್ದಾರೆ.
ಭದ್ರಾ ಜಲಾಶಯದಲ್ಲಿ ಸೋಮವಾರ 151.4 ಅಡಿ ನೀರಿನ ಸಂಗ್ರಹವಿದೆ. ಈ ನೀರನ್ನು ಬೇಸಿಗೆಯಲ್ಲಿ (ಮೇ ಅಂತ್ಯದವರೆಗೆ) ಕುಡಿಯಲು ಹಾಗೂ ಕೃಷಿ ಚಟುವಟಿಕೆ ಬಳಸಲು ಹಂಚಿಕೆ ಮಾಡುವ ಹೊಣೆ ಐಸಿಸಿ ಹೆಗಲಿಗೇರಿದೆ. ಜೊತೆಗೆ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳ ಹಾದಿಯಲ್ಲಿ ಭದ್ರೆಯ ನೀರು ಆಶ್ರಯಿಸಿರುವ ಸಾವಿರಾರು ಎಕರೆ ಅಡಿಕೆ–ತೆಂಗಿನ ತೋಟಗಳ ಭವಿಷ್ಯವೂ ಇದರಲ್ಲಿ ಅಡಗಿದೆ.
’ಭದ್ರಾ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 71.535 ಟಿಎಂಸಿ ಅಡಿ. ಜಲಾಶಯದಲ್ಲಿ ಸದ್ಯ 26.90 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಇದರಲ್ಲಿ ಡೆಡ್ ಸ್ಟೋರೇಜ್ (8.50 ಟಿಎಂಸಿ ಅಡಿ) ಹೊರತುಪಡಿಸಿದರೆ ಉಳಿದ ನೀರು ಬಳಕೆಗೆ ಲಭ್ಯವಾಗಲಿದೆ‘ ಎಂದು ಕಾಡಾ ಅಧಿಕಾರಿಯೊಬ್ಬರು ತಿಳಿಸಿದರು.
ಬಳಕೆಗೆ ಲಭ್ಯವಾಗುವ ನೀರಿನಲ್ಲಿ 6.5 ಟಿಎಂಸಿ ಅಡಿ ಕಡ್ಡಾಯವಾಗಿ ಕುಡಿಯುವ ನೀರಿಗೆ ಬಳಕೆ ಮಾಡಿಕೊಳ್ಳಬೇಕಿದೆ. ಈ ನೀರು ಜಲಾಶಯದ ಬಳಿಯ ಸಿಂಗನಮನೆಯಿಂದ ಮೊದಲುಗೊಂಡು ಭದ್ರಾವತಿ, ಚನ್ನಗಿರಿ, ದಾವಣಗೆರೆ, ವಿಜಯನಗರ ಜಿಲ್ಲೆಯ ಹರಪನಹಳ್ಳಿವರೆಗಿನ ನೂರಾರು ಹಳ್ಳಿ, ಪಟ್ಟಣಗಳ ದಾಹ ನೀಗಿಸುತ್ತದೆ. ಉಳಿದ 12 ಟಿಎಂಸಿ ಅಡಿಯಷ್ಟು ನೀರನ್ನು ಕೃಷಿ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲು ಅವಕಾಶವಾಗಲಿದೆ. ಅದನ್ನು ಜನವರಿಯಿಂದ ಮೇ ತಿಂಗಳವರೆಗೆ ಐದು ತಿಂಗಳ ಕಾಲ ತಿಂಗಳಿಗೆ 10 ದಿನದಂತೆ ಕಾಲುವೆಗೆ ಹರಿಸಲು ಯೋಜನೆ ರೂಪಿಸಲಾಗುತ್ತಿದೆ. ಆದರೆ ಈ ಬಗ್ಗೆ ಐಸಿಸಿ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.
ಸಭೆಗೆ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಗಳ ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳು ಕೊಡುವ ಅಂಕಿ–ಅಂಶ ಆಧರಿಸಿ ಕಾಲುವೆಗೆ ನೀರು ಹರಿಸುವ ಪ್ರಮಾಣ, ಬೆಳೆಗಳ ಭವಿಷ್ಯ ನಿರ್ಧರಿಸಲಾಗುತ್ತಿದೆ ಎಂದರು.
ಬೇಸಿಗೆ ಹಂಗಾಮಿನಲ್ಲಿ ಜಲಾಶಯದಲ್ಲಿ ಈಗ ಲಭ್ಯವಿರುವ ನೀರಿನ ಸದ್ಭಳಕೆಗೆ ಯೋಜನೆ ರೂಪಿಸುತ್ತಿದ್ದೇವೆ. ಜನವರಿ 5ರಂದು ನಡೆಯುವ ಐಸಿಸಿ ಸಭೆ ಅಂತಿಮ ತೀರ್ಮಾನ ಕೈಗೊಳ್ಳಲಿದೆ.ಸುಜಾತಾ, ಸೂಪರಿಟೆಂಡೆಂಟ್ ಎಂಜಿನಿಯರ್ ಭದ್ರಾ ಕಾಡಾ ಶಿವಮೊಗ್ಗ
ಭದ್ರಾ ಜಲಾಶಯಕ್ಕೆ ಜನವರಿ 1ರಂದು ಒಳಹರಿವು 201 ಕ್ಯುಸೆಕ್ ಇದ್ದು ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. 186 ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಈಗ 151.4 ಅಡಿ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ 182.4 ಅಡಿ ನೀರಿನ (67 ಟಿಎಂಸಿ ಅಡಿ) ಸಂಗ್ರಹವಿತ್ತು. ಈ ಬಾರಿ ಮಳೆಯ ಕೊರತೆಯಿಂದ ಜಲಾಶಯದಲ್ಲಿ ನೀರಿನ ಸಂಗ್ರಹ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಕಳೆದ ವರ್ಷಕ್ಕಿಂತ 30 ಅಡಿಯಷ್ಟು ಕಡಿಮೆ ಇದೆ. ಪ್ರತೀ ಬೇಸಿಗೆ ಹಂಗಾಮಿನಲ್ಲಿ ಜಲಾಶಯದಿಂದ 2.42 ಲಕ್ಷ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸಲಾಗುತ್ತಿತ್ತು. ಈ ಬಾರಿ ಐಸಿಸಿ ನಿರ್ಧಾರದಲ್ಲಿ ಮೂರು ಜಿಲ್ಲೆಗಳ ರೈತರ (ಶಿವಮೊಗ್ಗ ದಾವಣಗೆರೆ ಚಿಕ್ಕಮಗಳೂರು) ರೈತರ ಭವಿಷ್ಯ ಅಡಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.