ಸೊರಬ: ಬಂಗಾರಪ್ಪ ಅವರು ಸಾರ್ವಜನಿಕ ಜೀವನದಲ್ಲಿ ನೇರ, ನಿಷ್ಠುರತೆ ಮೂಲಕ ಛಾಪು ಮೂಡಿಸಿ ಅಖಂಡ ಕರ್ನಾಟಕದಲ್ಲಿ ಅತ್ಯಂತ ಅಭಿಮಾನಿಗಳನ್ನು ಹೊಂದಿದ ನಾಯಕರಾಗಿದ್ದರು ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಬಂಗಾರ ಧಾಮದಲ್ಲಿ ಬಂಗಾರಪ್ಪ ಫೌಂಡೇಷನ್ ಹಾಗೂ ಬಂಗಾರಪ್ಪ ಅಭಿಮಾನಿ ಬಳಗದಿಂದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ 12ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಬಂಗಾರಪ್ಪ ಸವಿನೆನಪು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಪ್ಪಟ ಸಮಾಜವಾದಿಯಾಗಿದ್ದ ಬಂಗಾರಪ್ಪ ಅವರು, ಅನೇಕರಿಗೆ ರಾಜಕಾರಣದ ಮೆಟ್ಟಿಲಾಗಿದ್ದರು. ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಹೊಸ ಪಕ್ಷ ಕಟ್ಟಿ ಎದೆಗಾರಿಕೆ ಪ್ರದರ್ಶಿಸಿದ ಅಪರೂಪದ ರಾಜಕಾರಣಿ. ಬಡವರನ್ನು ಗಮನದಲ್ಲಿಟ್ಟುಕೊಂಡು ಆಶ್ರಯ, ಆರಾಧನಾ,ವಿಶ್ವ ಯೋಜನೆಗಳನ್ನು ಜಾರಿಗೊಳಿಸಿದ್ದರು. ರಾಜ್ಯ ರಾಜಕಾರಣದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರು ಈ ಹೊತ್ತಿಗೂ ಜನಮಾನಸದಲ್ಲಿ ಉಳಿದಿದ್ದಾರೆ ಅದು ಬಂಗಾರಪ್ಪ ಒಬ್ಬರೆ ಎಂದು ಸ್ಮರಿಸಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 'ಬಂಗಾರಪ್ಪ ಅವರು ಕಾರ್ಯ ಚಟುವಟಿಕೆಯಿಂದಾಗಿ ಹಾಗೂ ವಿಚಾರಧಾರೆಯಿಂದ ನಮ್ಮ ನಡುವೆ ಇನ್ನೂ ಬದುಕಿದ್ದಾರೆ’ ಎಂದು ಹೇಳಿದರು.
‘ಬಂಗಾರಪ್ಪ ಅವರ ಅನುಭವ ಮತ್ತು ಆದರ್ಶದಿಂದಾಗಿ ರಾಜಕಾರಣದಲ್ಲಿ ನಾನು ಈ ಸ್ಥಾನಕ್ಕೆ ಬೆಳೆಯಲು ಸಾಧ್ಯವಾಗಿದೆ’ ಎಂದರು.
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಎಸ್ ಮಧು ಬಂಗಾರಪ್ಪ, ‘ರಾಜ್ಯದ ಲಕ್ಷಾಂತರ ಅಭಿಮಾನಿಗಳಲ್ಲಿ ತಂದೆಯವರನ್ನು ನೋಡುತ್ತಿದ್ದೇನೆ’ ಎಂದು ಭಾವುಕವಾಗಿ ನುಡಿದರು.
ತಂದೆ ಸ್ಮಾರಕವನ್ನು ಕ್ರಿಯಾಶೀಲವಾಗಿಸಲು ಸ್ಮಾರಕ ನೋಡಲು ಬರುವ ಅಭಿಮಾನಿಗಳಿಗೆ ಪ್ರತಿನಿತ್ಯ ಸಿಹಿ ಹಂಚಲಾಗುವುದು. ಬಂಗಾರಧಾಮದ ಹೆಸರಿನಲ್ಲಿ ವಾಟ್ಸ್‌ಆ್ಯಪ್ ನಂಬರ್ 9900099418 ತೆರೆಯಲಾಗಿದ್ದು, ಇಡೀ ರಾಜ್ಯದಲ್ಲಿ ಅವರು ಅಭಿಮಾನಿಗಳ ಜೊತೆಗೆ ಕಳೆದ ದಿನಗಳನ್ನು ಈ ಮೂಲಕ ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ತಂದೆ ಹೆಸರು ಪ್ರಾಮಾಣಿಕವಾಗಿ ಜನರ ಸೇವೆ ಮಾಡುವ ಮೂಲಕ ಉಳಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.
ರಾಜ್ಯದ ಉದ್ದಕ್ಕೂ ಅಭಿಮಾನಿಗಳನ್ನು ಹೊಂದಿದ್ದ ಬಂಗಾರಪ್ಪ ಅವರು ಜನರ ನಾಡಿಮಿಡಿತವನ್ನು ಅರ್ಥಮಾಡಿಕೊಂಡು ಪರಿಹರಿಸಲು ಮುಂದಾಗುತ್ತಿದ್ದ ಅವರ ಸಾಮಾಜಿಕ ಕಾಳಜಿ ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
ಶಿರಸಿ ಶಾಸಕ ಭೀಮಣ್ಣ ನಾಯ್ಕ, ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನ ಕುಮಾರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸುಂದರೇಶ್, ಕಲಗೋಡು ರತ್ನಾಕರ, ರಮೇಶ್, ಎಚ್.ಗಣಪತಿ, ಎಂ.ಡಿ.ಶೇಖರ್, ಕೆ.ವಿ.ಗೌಡ, ಕೆ.ಪಿ.ರುದ್ರಗೌಡ, ವೇಣುಗೋಪಾಲ್, ಉದ್ರಿ ಯಲ್ಲಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.