ಶಿವಮೊಗ್ಗ: ಮಲೆನಾಡಿನಲ್ಲಿ ಸುರಿಯುತ್ತಿರುವ ಪುನರ್ವಸು ಮಳೆಗೆ ಶಿವಮೊಗ್ಗದ ಹೃದಯ ಭಾಗದಲ್ಲಿ ಹಾದು ಹೋಗುವ ತುಂಗೆ (ತುಂಗಾ ನದಿ) ಆರ್ಭಟಿಸುತ್ತಿದ್ದಾಳೆ. ಮೈದುಂಬಿ ಬೀಗುತ್ತಿದ್ದಾಳೆ. ಆದರೆ ಆಕೆಯ ಬಿಗುಮಾನ ಕಣ್ತುಂಬಿಕೊಳ್ಳಲು ಜನರು ಸ್ಮಾರ್ಟ್ ಸಿಟಿ ಅಂಬೋ ದೊಣ್ಣೆ ನಾಯಕನ ಮರ್ಜಿಗೆ ಕಾಯಬೇಕಿದೆ. ಅದೂ ಒಬ್ಬರಿಗೆ ₹20 ಕಪ್ಪ (ಶುಲ್ಕ) ಕೊಟ್ಟು ಟಿಕೆಟ್ ಪಡೆದು ನದಿಯ ದಂಡೆಗೆ ಪ್ರವೇಶ ಪಡೆದುಕೊಳ್ಳಬೇಕಿದೆ.
ತುಂಗಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ನದಿ ದಡದಲ್ಲಿನ ಕೋರ್ಪಾಲಯ್ಯನ ಛತ್ರ ಮಂಟಪ ಮುಳುಗಡೆಯಾಗಿದೆ. ವಿಷಯ ತಿಳಿದುನದಿಯ ಹಾದಿ ಕಣ್ತುಂಬಿಕೊಳ್ಳಲು ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಜನರು ತಂಡೋಪತಂಡವಾಗಿ ಬರುತ್ತಿದ್ದಾರೆ. ಕೆಲವರು ಮಂಟಪದ ಬಳಿಯ ಮೆಟ್ಟಿಲಿನ ಹತ್ತಿರ ಪೂಜೆ ಸಲ್ಲಿಸುವ ಇರಾದೆಯೊಂದಿಗೆ ಕುಟುಂಬ ಸಮೇತ ಬರುತ್ತಿದ್ದಾರೆ. ಆದರೆ ಇಲ್ಲಿ ಟಿಕೆಟ್ ಪಡೆಯಬೇಕಿರುವುದನ್ನು ಕಂಡು ಸ್ಮಾರ್ಟ್ ಸಿಟಿ ಸಂಸ್ಥೆಗೆ, ನಗರದ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ದುಬಾರಿ ಟಿಕೆಟ್ ದರ ಎಂದು ಕೆಲವರು ವಾಪಸ್ ಮರಳುತ್ತಿದ್ದಾರೆ.
‘ನಮ್ಮೂರಿನ ನದಿ ನೋಡಲು ನಾವು ಹಣ ಕೊಟ್ಟು ಟಿಕೆಟ್ ಪಡೆಯಬೇಕಿದೆ. ಇದು ಸ್ಮಾರ್ಟ್ ಸಿಟಿ ಯೋಜನೆಯಲ್ಲ ಬದಲಿಗೆ ಜನರ ಪಾಲಿಗೆ ಶೇವ್ ಸಿಟಿ’ ಎಂದು ಶುಕ್ರವಾರ ಅಲ್ಲಿ ‘ಪ್ರಜಾವಾಣಿ’ಗೆ ಎದುರಾದ ಹೊಳೆಬೆನವಳ್ಳಿಯ ವಿಮಾ ಪ್ರತಿನಿಧಿ ಷಣ್ಮುಖಪ್ಪ ವ್ಯಂಗ್ಯವಾಡಿದರು.
ಅಲ್ಲಿ ತುಂಗಾ ನದಿ ದಂಡೆಗೆ ಪ್ರವೇಶ ಪಡೆಯುವವರು ಬೈಕ್‌ಗೆ ₹10, ಕಾರ್, ಜೀಪ್‌ಗೆ ₹30 ಹಾಗೂ ಬಸ್ ನಿಲುಗಡೆಗೆ ₹100 ಪಾರ್ಕಿಂಗ್ ಶುಲ್ಕ ಪಾವತಿಸಬೇಕಿದೆ.
ಜನರು ಕಟ್ಟುವ ಕಂದಾಯದ ಹಣದಿಂದಲೇ ಸ್ಮಾರ್ಟ್ ಸಿಟಿ ಯೋಜನೆಯಡಿ ಸವಲತ್ತುಗಳ ಕಲ್ಪಿಸಲಾಗಿದೆ. ಬಡವರು–ಶ್ರೀಮಂತರು ಬೇಧವಿಲ್ಲದೇ ಯೋಜನೆಯ ಉಪಯೋಗ ಎಲ್ಲರೂ ಪಡೆಯಬೇಕು. ಆಗ ಮಾತ್ರ ಉದ್ಯಾನವನದ ನಿರ್ಮಾಣ ಸಾರ್ಥಕವಾಗುತ್ತದೆ. ಪ್ರವೇಶ ಶುಲ್ಕ, ಪಾರ್ಕಿಂಗ್ ಶುಲ್ಕ ಇಷ್ಟೊಂದು ದುಬಾರಿ ಆದರೆ ಹೇಗೆ ಎಂದು ಪ್ರಶ್ನಿಸುತ್ತಾರೆ.
₹103 ಕೋಟಿ ವೆಚ್ಚ: ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ ಶೇ 50 ಅನುದಾನದಲ್ಲಿ ಕೆಲಸ ನಡೆದಿದೆ. ತುಂಗಾ ರಿವರ್ ಫ್ರಂಟ್ ಪ್ರಾಜೆಕ್ಟ್ ₹103 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಉದ್ಘಾಟನೆ ಆಗಿ ಐದು ದಿನಗಳ ಕಾಲ ಜನರಿಗೆ ಉಚಿತ ಪ್ರವೇಶ ನೀಡಲಾಗಿತ್ತು. ಕಳೆದ ಮಾರ್ಚ್ 13ರಿಂದ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಪ್ರವೇಶ ಶುಲ್ಕ ವಸೂಲಿ ಕಾರ್ಯ ಖಾಸಗಿಯವರಿಗೆ ಗುತ್ತಿಗೆ ನೀಡಲಾಗಿದೆ.
‘ಉಚಿತ ಪ್ರವೇಶ ಕೊಟ್ಟರೆ ಒಳಗೆ ಬಂದವರು ನದಿ ದಂಡೆಯ ಉದ್ಯಾನವನದ ಪರಿಕರಗಳ ಹಾಳುಗೆಡವುತ್ತಾರೆ ಎಂದು ಸ್ಮಾರ್ಟ್ ಸಿಟಿಯವರು ಹೇಳುತ್ತಾರೆ. ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿ ಹಾನಿ ಮಾಡುವವರ ಗುರುತಿಸಿ ಶಿಕ್ಷಿಸಲಿ. ಹಾಗೆಂದು ಅದರ ಹೊರೆ ಬೇರೆ ಜನರ ಮೇಲೆ ಹಾಕುವುದು ಬೇಡ. ನಾವು ಸಂಪೂರ್ಣ ಉಚಿತವಾಗಿ ಒಳಗೆ ಬಿಡಲು ಕೇಳುತ್ತಿಲ್ಲ. ₹2 ಇಲ್ಲವೇ ₹5 ಪ್ರವೇಶ ಶುಲ್ಕು ನಿಗದಿಪಡಿಸಲಿ’ ಎಂದು ವಿನೋಬಾ ನಗರದ ಶಿಕ್ಷಕಿ ಸುವರ್ಣಾ ಪ್ರಕಾಶ್ ಹೇಳುತ್ತಾರೆ.
ಪ್ರವೇಶ ಶುಲ್ಕ ದುಬಾರಿ ಎಂಬ ಆರೋಪವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಗಾಯತ್ರಿ ಮಂದಿರದ ಬಳಿಯಿಂದ ಮಂಟಪದ ಹತ್ತಿರ ಉಚಿತವಾಗಿ ತೆರಳಬಹುದು ಎಂದು ಸಾರ್ವಜನಿಕರ ಮಾಹಿತಿಗೆ ಬೋರ್ಡ್ ಹಾಕಲಿದ್ದೇವೆ- ಹಾಲೇಶ್, ಎಂಜಿನಿಯರ್ ಸ್ಮಾರ್ಟ್ ಸಿಟಿ ಯೋಜನೆ ಶಿವಮೊಗ್ಗ
ಇಲ್ಲಿ ಶುಲ್ಕ ಕೊಡಬೇಕು ಎಂದು ಸೇತುವೆ ಬಳಿ ತೆರಳಿ ತುಂಗಾ ನದಿ ನೋಡುತ್ತೇವೆ. ಇಲ್ಲಿ ಜನರು ಬರಲಿಲ್ಲವೆಂದು ಅವರು (ಸ್ಮಾರ್ಟ್‌ಸಿಟಿ) ನಾಳೆ ಅಲ್ಲಿಯೂ ಪ್ರವೇಶ ನಿಷೇಧಿಸಬಹುದು-ಬಸವರಾಜಪ್ಪ, ರೈತ ಲಕ್ಕವಳ್ಳಿ
ವೇಶ ಶುಲ್ಕ ದುಬಾರಿ ಆಯ್ತು. ಕಡಿಮೆ ಮಾಡಲಿ. ಅಲ್ಲಿ ಸೌಕರ್ಯ ಕೂಡ ಕಡಿಮೆ ಇದೆ. ಇನ್ನಷ್ಟು ಹೆಚ್ಚಳಗೊಳಿಸಿ ಸ್ಮಾರ್ಟ್‌ಸಿಟಿಯವರು ಅದನ್ನು ಪ್ರವಾಸಿ ತಾಣವಾಗಿ ರೂಪಿಸಲಿಪ್ರವಸಂತಕುಮಾರ್, ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆ ಸಂಚಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.