ತೀರ್ಥಹಳ್ಳಿ: ಕಲೆ, ಸಾಹಿತ್ಯ, ಸಂಸ್ಕೃತಿಯ ತವರೂರೆಂದು ಹೆಸರಾಗಿರುವ ತೀರ್ಥಹಳ್ಳಿಯಲ್ಲಿ ಆ.28ರಂದು 5ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ನಾಡು ಕಟ್ಟುವ ಚಳವಳಿ, ಚಿಂತನೆಗೆ ತನ್ನದೇ ಕಾಣಿಕೆ ನೀಡಿರುವ ತೀರ್ಥಹಳ್ಳಿಯ ನೆಲದಲ್ಲಿ ಅನೇಕ ಸಾಂಸ್ಕೃತಿಕ ಪಲ್ಲಟಗಳಿಗೆ ಕಾರಣವಾಗಿದೆ. ಕನ್ನಡದ ಮನಸ್ಸುಗಳು ಬೆಸಗೊಂಡು ಕಹಳೆ ಮೊಳಗಿಸಿದ ಊರಿದು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದುವರೆಗೆ ಸಾಹಿತ್ಯ ಸಮ್ಮೇಳನ, ಮಕ್ಕಳ ಸಾಹಿತ್ಯ ಸಮ್ಮೇಳನ, ದತ್ತಿ ನಿಧಿ ಕಾರ್ಯಕ್ರಮ, ವೈಚಾರಿಕತೆಗೆ ಹಚ್ಚುವ ಹಲವು ಉಪಯುಕ್ತ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಈ ಬಾರಿಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕನ್ನಡ ಪ್ರಾಧ್ಯಾಪಕಿ ಡಾ.ಎಲ್.ಸಿ.ಸುಮಿತ್ರಾ ಅವರು ಆಯ್ಕೆಯಾಗಿದ್ದಾರೆ.
ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದ ಎಂ.ಕೆ.ಇಂದಿರಾ ವೇದಿಕೆಯಲ್ಲಿ ಈ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಈ ಹಿಂದೆ ಶ್ರೀನಿವಾಸ ಉಡುಪ, ಡಾ.ಜೆ.ಕೆ.ರಮೇಶ್, ಕೋಣಂದೂರು ಲಿಂಗಪ್ಪ, ಬಿಳುಮನೆ ರಾಮದಾಸ್ ಕಾರ್ಯನಿರ್ವಹಿಸಿದ್ದರು.
ಚಿತ್ರ ನಟಿ, ವಿಧಾನ ಪರಿಷತ್ ಸದಸ್ಯೆ ಡಾ.ಜಯಮಾಲಾ ಸಮ್ಮೇಳನ ಉದ್ಘಾಟಿಸ ಲಿದ್ದಾರೆ. ವಿವಿಧ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಡಾ.ಯು.ಆರ್. ಅನಂತಮೂರ್ತಿ ಕುರಿತ ಸಾಕ್ಷ್ಯ ಚಿತ್ರ ಪ್ರದರ್ಶನ ಹಾಗೂ ಕವಿ ಗೋಷ್ಠಿ ನಡೆಯಲಿದೆ. ಸ್ಥಳೀಯ ಶಾಸಕರು, ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವರು.
‘ಸಮ್ಮೇಳನದ ಅಂಗವಾಗಿ ಪಟ್ಟಣದ ಕೊಪ್ಪ ವೃತ್ತ ಹಾಗೂ ಮಸೀದಿ ರಸ್ತೆಗಳಲ್ಲಿ ಡಾ.ಯು.ಆರ್.ಅನಂತಮೂರ್ತಿ, ತ್ಯಾನಂದೂರು ಪುಟ್ಟಣ್ಣ ಮಹಾದ್ವಾ ರವನ್ನು ನಿರ್ಮಿಸ ಲಾಗುವುದು. ಕನ್ನಡ ಸಾಹಿತ್ಯ ಸಮ್ಮೇಳದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು’ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೆಂಪೆ ದೇವರಾಜ್, ಕಾರ್ಯದರ್ಶಿ ಟಿ.ಕೆ.ರಮೆಶ್ ಶೆಟ್ಟಿ ಸೇರಿದಂತೆ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಸರ್ವಾಧ್ಯಕ್ಷರ ಸಾಹಿತ್ಯ ಕೃಷಿ
ಡಾ.ಎಲ್.ಸಿ ಸುಮಿತ್ರಾ ಅವರು ಲೇಖಕಿಯಾಗಿದ್ದು, ಈಗಾಗಲೇ ಅವರು 7 ಕೃತಿಗಳನ್ನು ರಚಿಸಿ, ಪ್ರಕಟಿಸುವ ಮೂಲಕ ಕನ್ನಡ ಸಾಹಿತ್ಯ ಕೃಷಿಯಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿದ್ದಾರೆ.
ತಾಲ್ಲೂಕಿನ ಬಸವಾನಿ ಸಮೀಪ ಲಕ್ಷ್ಮೀಪುರದಲ್ಲಿ ಜನಿಸಿದ ಅವರು ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಕನ್ನಡ ಎಂ.ಎ. ಶಿಕ್ಷಣದ ನಂತರ ‘ಕುವೆಂಪು ಮತ್ತು ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಪ್ರಕೃತಿ’ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದರು. ಪರಿಸರ ಚಿಂತನೆ, ವಿಮರ್ಶೆಗಳಲ್ಲಿ ಕೆಚ್ಚು ಆಸಕ್ತಿ ಬೆಳೆಸಿಕೊಂಡ ಅವರು ಕಥೆ, ಕವಿತೆಗಳನ್ನು ಬರೆಯುವ ಮೂಲಕ ಸಾಹಿತಿ ಎನಿಸಿಕೊಂಡರು. ಕೇಂದ್ರ ಸಾಹಿತ್ಯ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿಯ ವಿಚಾರ ಸಂಕಿರಣ ಮತ್ತು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದ ಸುಮಿತ್ರಾ ಅವರ ಕಥೆಗಳು ಇಂಗ್ಲಿಷ್, ಮಲೆಯಾಳಂ ಭಾಷೆಗಳಿಗೆ ಅನುವಾದವಾಗಿವೆ.
ಡಾ.ಎಸ್.ಸಿ. ಸುಮಿತ್ರಾ ಅವರ ಕವಿತೆಗಳು ಬೆಂಗಳೂರು ಮತ್ತು ಮಂಗಳೂರು ವಿಶ್ವವಿದ್ಯಾಯಲದಲ್ಲಿ ಪದವಿ ಪಠ್ಯ ಪುಸ್ತಕದಲ್ಲಿ ಸೇರಿವೆ. ‘ವಿಭಾವ’, ‘ನಿರುಕ್ತ’, ‘ಕಾಡು’ ‘ಕಡಲು’ (ವಿಮರ್ಶೆಗಳು), ‘ಗುಬ್ಬಿಹಳ್ಳದ ಸಾಕ್ಷಿಯಲ್ಲಿ’ (ಕಥೆಗಳು) ‘ಬಕುಲದ ದಾರಿ’ (ಕವಿತೆಗಳು), ‘ಪಿಂಜರ್’ (ಅಮೃತಾ ಪ್ರೀತಂ ಕಾದಂಬರಿಯ ಅನುವಾದ), ‘ಹೂ ಹಸಿರಿನ ಮಾತು’ (ಪಶ್ಚಿಮ ಘಟ್ಟದ ಹೂ ಬಿಡುವ ಸಸ್ಯಗಳು) ಅವರ ಪ್ರಮುಖ ಕೃತಿಗಳು.
ಪ್ರಸ್ತುತ ಸುಮಿತ್ರ ಅವರು ತೀರ್ಥಹಳ್ಳಿ ತುಂಗಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ಹಾಗೂ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.