ಶಿವಮೊಗ್ಗ: ಹಳ್ಳಿಗಳಲ್ಲಿ ಎದುರಿಸುತ್ತಿರುವ ನೆಟ್‍ವರ್ಕ್ ಸಮಸ್ಯೆ ಬಗೆಹರಿಸಿ ತರಂಗಗಳ ಸಾಮರ್ಥ್ಯ ಹೆಚ್ಚಿಸಲು 5ಜಿ ಸಂವಹನ ಪೂರಕವಾಗಿ ನಿಲ್ಲಲಿದೆ ಎಂದು ಅಮೆರಿಕದ ಅರೋರ ಇನ್ನೊವೇಷನ್ ಕಂಪನಿಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಡಾ.ಮನೋಹರ ಶ್ರೀಕಾಂತ್ ಅಭಿಪ್ರಾಯಪಟ್ಟರು.
ನಗರದ ಜೆಎನ್‌ಎನ್‌ಸಿ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗ ಹಾಗೂ ಭಾರತ ಸರ್ಕಾರದ ಎಐಸಿಟಿಇ ತರಬೇತಿ ಮತ್ತು ಕಲಿಕಾ ಅಕಾಡೆಮಿಯಿಂದ ಆನ್‌ಲೈನ್‌ನಲ್ಲಿ ಹಮ್ಮಿಕೊಂಡಿದ್ದ ‘ಕ್ಲೌಡ್ ಅಪ್ಲಿಕೇಷನ್‍ಗ ಳಿಗಾಗಿ 5ಜಿ ಸಂವಹನ ನೆಟ್‍ವರ್ಕ್ ಪರಿಣಾಮಕಾರಿ ಬಳಕೆ’ ಐದು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘5ಜಿ ಸಂವಹನದಲ್ಲಿನ ಮೂಲಭೂತ ವಿಷಯಗಳನ್ನು ಪರಿಣಾಮಕಾರಿ ಯಾಗಿ ಅನುಷ್ಠಾನ ಗೊಳಿಸುವ ಮೂಲಕ ಲಭ್ಯ ತರಂಗಗಳ ಗುಣಮಟ್ಟ ಹೆಚ್ಚಿಸುವ ಮತ್ತು ಲಭ್ಯತೆಯೇ ಇಲ್ಲದ ಪ್ರದೇಶಗಳಿಗೆ ಅಗತ್ಯ ತರಂಗ ಸೌಲಭ್ಯ ನೀಡಲು ಪರಿಣಾಮಕಾರಿಯಾಗಿ ನಿಲ್ಲಲಿದೆ’ ಎಂದರು.
ಬಹು ದತ್ತಾಂಶಗಳ ನಿರ್ವಹಣೆ, ಹೊಸ ರೇಡಿಯೊ ತರಂಗಗಳ ಅಭಿವೃದ್ಧಿಯಂತಹ ಪ್ರಯೋಗಗಳು ಪ್ರತಿಯೊಂದು ಪ್ರದೇಶದಲ್ಲಿನ ತರಂಗಗಳ ಬಳಕೆ ಮತ್ತು ಲಭ್ಯತೆಯನ್ನು ಹೆಚ್ಚಿಸಲು ಸಾಧ್ಯವಾಗಲಿದೆ. ಇಂತಹ ಪ್ರಯೋಗಗಳಿಗೆ ಆರ್ಟಿಫಿಶಿಯಲ್ ಇಂಟಲಿಜನ್ಸ್ ತಂತ್ರಜ್ಞಾನ ಸಹಕಾರಿಯಾಗಲಿದೆ. ಇಂದಿನ ದಿನಮಾನದಲ್ಲಿ ಎಐ ರೊಬೊಟಿಕ್ಸ್ ಆಟೊಮೇಷನ್ ಸಾಮಾನ್ಯ ಮಾನವ ಸಹಾಯದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ‘ಇಂದಿನ ಶೈಕ್ಷಣಿಕ ವ್ಯವಸ್ಥೆ ವಿದ್ಯಾರ್ಥಿ ಕೇಂದ್ರಿತ ಅಧ್ಯಯನಕ್ಕೆ ಹೆಚ್ಚು ಪ್ರಾಮುಖ್ಯ ನೀಡುತ್ತಿದೆ. ನಮ್ಮ ದೈನಂದಿನ ಬದುಕಿನ ಪ್ರತಿಯೊಂದು ಜೀವನ ಶೈಲಿ ಆಧುನಿಕ ತಂತ್ರಜ್ಞಾನಗಳ ಆಧಾರಿತವಾಗಿದೆ. ಇಂತಹ ಸಂದರ್ಭದಲ್ಲಿ ನೆಟ್‍ವರ್ಕ್‍ಗಳ ಲಭ್ಯತೆ ಪ್ರಮುಖವಾದ ವಿಚಾರವಾಗಿದ್ದು, 5ಜಿ ಸಂವಹನದ ಕುರಿತು ಮತ್ತಷ್ಟು ಪ್ರಯೋಗಗಳ ಅಗತ್ಯವಿದೆ’ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್ ಎಂಜಿನಿ ಯರಿಂಗ್ ವಿಭಾಗದ ಮುಖ್ಯಸ್ಥೆ ಡಾ.ಎಂ.ವಿ.ಉಷಾದೇವಿ, ಕಾರ್ಯಾಗಾರ ಸಂಯೋಜಕ ಜಿ.ಮಧುಸೂದನ್, ರಶ್ಮೀ ಹುಲ್ಲುಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.