ಕೋಣಂದೂರು: ವೈದ್ಯನಾಗಬೇಕೆಂಬ ಕಸನು ಕಂಡಿದ್ದ ಬಾಲಕನೊಬ್ಬನಿಗೆ ಹುಟ್ಟಿನಿಂದಲೇ ಕಾಡುತ್ತಿರುವ ತಲಸೇಮಿಯಾ ಕಾಯಿಲೆ ಆ ಕನಸನ್ನು ಕಮರಿಸಿದೆ.
ಸಮೀಪದ ದೇಮ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋರೇಬೈಲು ಗ್ರಾಮದ ಕಾನುಕೊಪ್ಪದ ಟಿ.ಕೆ.ಪ್ರಭಾಕರ್ ಮತ್ತು ಕವಿತಾ ದಂಪತಿಯ ಪುತ್ರ ಟಿ.ಪಿ. ನೂತನ್ ರೋಗಕ್ಕೆ ತುತ್ತಾದವನು.
ಮಗು ಹುಟ್ಟಿದ 6 ತಿಂಗಳಿನಿಂದ ಪ್ರಾರಂಭವಾಗಿರುವ ತಲಸೇಮಿಯಾ ಇಂದಿಗೂ ಗುಣವಾಗಿಲ್ಲ. ಚಿಕಿತ್ಸೆಗೆ ಅಂದಾಜು ₹ 31 ಲಕ್ಷ ಬೇಕಾಗಿದ್ದು, ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.
ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪತ್ತಿ ಪ್ರಮಾಣ ಕ್ರಮೇಣ ಕಡಿಮೆ ಆಗುವುದರಿಂದ ವ್ಯಕ್ತಿಗೆ ಸುಸ್ತು, ಊಟ ಸೇರದಿರುವುದು, ಮೈಕೈ ಬಿಳಿಚಿಕೊಳ್ಳುವುದು, ಊತ ಕಾಣಿಸಿಕೊಳ್ಳುವುದು ಈ ಕಾಯಿಲೆಯ ಲಕ್ಷಣ. ಪ್ರತಿ ತಿಂಗಳಿಗೊಮ್ಮೆ ಹೊಸ ರಕ್ತವನ್ನು ದೇಹಕ್ಕೆ ಸೇರಿಸುವುದರಿಂದ ವ್ಯಕ್ತಿ ಸಾಮಾನ್ಯರಂತೆ ನಡೆದಾಡಲು ಸಾಧ್ಯವಾಗುತ್ತದೆ. ಇದನ್ನು ಶಾಶ್ವತವಾಗಿ ಗುಣಪಡಿಸಬಹುದು. ಆದರೆ, ಅದಕ್ಕೆ ತಲುಗುವ ವೆಚ್ಚ ದುಬಾರಿ.
ಈ ಕಾಯಿಲೆಯನ್ನು ಸ್ಟೆಮ್ ಥೆರಪಿ ಅಥವಾ ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ ಮೂಲಕ ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ಹಿಂದೆಯೇ ಬೆಂಗಳೂರಿನ ಸೇಂಟ್ ಜಾನ್ ಆಸ್ಪತ್ರೆಯ ವೈದ್ಯರು ಸಲಹೆ ನೀಡಿದ್ದರು. ಆದರೆ, ಮಗನಿಗೆ ಈಗ 18 ವರ್ಷ ಆದರೂ ಚಿಕಿತ್ಸೆ ನೀಡಲು ಸಾದ್ಯವಾಗಿಲ್ಲ. ಬಡತನದ ಕಾರಣ ನೂತನ್ ಕುಟುಂಬಕ್ಕೆ ಅಷ್ಟೊಂದು ಹಣ ಹೊಂದಿಸುವುದು ಕಷ್ಟವಾಗಿದೆ.
ಇದೇ ಕಾಯಿಲೆಯಿಂದ ಹುಟ್ಟಿನಲ್ಲೇ ಒಬ್ಬ ಮಗಳನ್ನು ಕಳೆದುಕೊಂಡಿರುವ ಕುಟುಂಬ ಇರುವ ಒಬ್ಬ ಮಗನನ್ನಾದರೂ ಉಳಿಸಿಕೊಳ್ಳಬೇಕೆಂದು ಹಂಬಲಿಸುತ್ತಿದೆ. ಆದರೆ ಪ್ರತಿ 15 ದಿನಕ್ಕೊಮ್ಮೆ ರಕ್ತ ಹಾಕಿಸುವುದು ಬಡ ಕುಟುಂಬಕ್ಕೆ ಕಷ್ಟಕರವಾಗಿದೆ.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಈಗ ಉಚಿತವಾಗಿ ರಕ್ತ ಹಾಕಿಸಲಾಗುತ್ತದೆ. ಆದರೆ, ಬಡತನದ ಕಾರಣ ಹಳ್ಳಿಯಿಂದ ಆಟೊದಲ್ಲಿ ಹೋಗಿ ಬಸ್‌ಗೆ ಶಿವಮೊಗ್ಗಕ್ಕೆ ಹೋಗಲು ನೂತನ್ ಪಾಲಕರಿಗೆ ಆಗುತ್ತಿಲ್ಲ.
‘ಈಗಾಗಲೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ, ಮಣಿಪಾಲ, ಬೆಂಗಳೂರಿನ ನಾರಾಯಣ ಹೃದಯಾಲಯ, ಸಾಗರದ ಆಸ್ಪತ್ರೆಯಲ್ಲಿ ತೋರಿಸಿದ್ದು, ದುಡಿದ ಹಣವನ್ನೆಲ್ಲಾ ಮಗನ ಚಿಕಿತ್ಸೆಗೆ ಸುರಿದಿದ್ದೇವೆ. ವೈದ್ಯನಾಗಬೇಕೆಂಬ ಆಸೆ ಹೊತ್ತಿದ್ದ ಮಗನಿಗೆ 10ನೇ ತರಗತಿಯನ್ನೂ ಪೂರ್ಣಗೊಳಿಸಲಾಗಲಿಲ್ಲ ಎಂಬ ಕೊರಗು ಕಾಡುತ್ತಿದೆ’ ಎಂದು ನೂತನ್ ತಾಯಿ ಕವಿತಾ ಅಳಲು ತೋಡಿಕೊಂಡರು.
ಚಿಕಿತ್ಸೆ ಪಡೆಯಲು ಈ ಕುಟುಂಬಕ್ಕೆ ಸಹಾಯ ಮಾಡಲು ಬಯಸುವ ಉದಾರಿಗಳು ಮೊಬೈಕಲ್ ದೂರವಾಣಿ ಸಂಖ್ಯೆ 9448242515, 9482906958 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.