ADVERTISEMENT

ಶ್ರೀರಾಂಪುರ: ಅನೈತಿಕ ಚಟುವಟಿಕೆ ತಾಣವಾದ ಶಿಥಿಲ ಕೊಠಡಿ‌

ಕೆಪಿಎಸ್‌ ಶಾಲೆಯ ದುಃಸ್ಥಿತಿ, ಶಿಕ್ಷಕರಿಗೆ ಶುಚಿಯದ್ದೇ ಕೆಲಸ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 5:52 IST
Last Updated 26 ನವೆಂಬರ್ 2024, 5:52 IST
   

ಶ್ರೀರಾಂಪುರ: ಶಾಲೆಯ ಆವರಣಕ್ಕೆ ಬೆಳಿಗ್ಗೆ ಬಂದ ಕೂಡಲೇ ಶಿಕ್ಷಕರಿಗೆ ಒಡೆದ ಮದ್ಯದ ಬಾಟಲಿಗಳು, ಊಟ, ತಿಂಡಿಯ ತ್ಯಾಜ್ಯಗಳ ದರ್ಶನ.. ಸಂಜೆಯಾಗುತ್ತಲೇ ಶಿಥಿಲ ಕಟ್ಟಡ ಹಾಗೂ ಕಾರಿಡಾರ್‌ಗಳಲ್ಲಿ ಅನೈತಿಕ ಚಟುವಟಿಕೆಗಳ ದರ್ಬಾರು.

ಇದು ಇಲ್ಲಿನ ಕೆಪಿಎಸ್‌ ಶಾಲೆಯ ದುಃಸ್ಥಿತಿ. ಶಾಲೆಯ ಆವರಣದಲ್ಲಿ ಕಳೆದ ಒಂದು ದಶಕದಿಂದಲೂ ಉಪಯೋಗಕ್ಕೆ ಬಾರದ ಶಿಥಿಲಗೊಂಡಿರುವ 5ಕ್ಕೂ ಹೆಚ್ಚು ಕೊಠಡಿಗಳಿದ್ದು, ಚಾವಣಿಯ ಹೆಂಚುಗಳು ಒಡೆದು ಹೋಗಿವೆ. ಇದು ಪುಂಡರಿಗೆ ವರದಾನವಾಗಿದ್ದು, ಶಾಲೆಯನ್ನು ಅನೈತಿಕ ಚಟುವಟಿಕೆಯ ತಾಣವಾಗಿಸಿದ್ದಾರೆ.

ಶಾಲೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಕೆಲವು ಶಿಥಿಲ ಕೊಠಡಿಗಳು ಬಯಲು ಶೌಚಾಲಯವಾಗಿ ಮಾರ್ಪಟ್ಟಿವೆ.

ADVERTISEMENT

ವಿದ್ಯಾರ್ಥಿಗಳು ಬಿರುಕು ಬಿಟ್ಟ ಕೊಠಡಿ ಪಕ್ಕದಲ್ಲೇ ಆಟ ಆಡುವುದರಿಂದ ಅಪಾಯ ಸಂಭವಿಸುವ ಮುನ್ನ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬುದು ಪಾಲಕರ ಒತ್ತಾಯವಾಗಿದೆ.

ಸಂಜೆಯಾಗುತ್ತಲೇ ಕೆಲವು ಕೊಠಡಿಗಳಲ್ಲಿ ಅನೈತಿಕ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತವೆ. ಹೊಸ ಕಟ್ಟಡಗಳ ಕಾರಿಡಾರ್ ಕುಡುಕರ ಅಡ್ಡೆಯಾಗಿದೆ. ಬೆಳಿಗ್ಗೆ ಶಾಲೆಗೆ ಬಂದೊಡನೆ ಶಿಕ್ಷಕರಿಗೆ ತ್ಯಾಜ್ಯ ಸ್ವಚ್ಛಗೊಳಿಸುವುದೇ ಕೆಲಸವಾಗಿದೆ. ಮೈದಾನದಲ್ಲೂ ಒಡೆದ ಬಾಟಲಿಗಳ ಚೂರುಗಳು ಮಕ್ಕಳು ಆಟವಾಡುವಾಗ ಕಾಲಿಗೆ ಚುಚ್ಚಿ ಗಾಯಗೊಂಡ ಪ್ರಕರಣಗಳು ಸಾಕಷ್ಟಿವೆ ಎಂದು ಶಿಕ್ಷಕರು ತಿಳಿಸುತ್ತಾರೆ.

ಹೊಸದುರ್ಗ ಪಟ್ಟಣ ಹೊರತುಪಡಿಸಿದರೆ ಅತಿ ಹೆಚ್ಚು ದಾಖಲಾತಿ ಹೊಂದಿರುವ ಸರ್ಕಾರಿ ಶಾಲೆ ಎಂಬ ಹೆಗ್ಗಳಿಕೆಗೆ ಈ ಶಾಲೆ ಪಾತ್ರವಾಗಿದೆ. ಎಲ್.ಕೆ.ಜಿ.ಯಿಂದ ಪಿಯುಸಿವರೆಗೆ 1,000ಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಸುಸಜ್ಜಿತ ಆಟದ ಮೈದಾನ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಹೆಚ್ಚಿದೆ. ಇದರ ಮಧ್ಯೆ ಕಿಡಿಗೇಡಿಗಳ ಅನೈತಿಕ ಚಟುವಟಿಕೆಗಳಿಂದ ಶಾಲೆ ನಲುಗುತ್ತಿದೆ ಎಂದು ಗ್ರಾಮದ ಮಂಜುನಾಥ್‌ ದೂರಿದರು.

ವಿದ್ಯಾರ್ಥಿಗಳು ಆಟವಾಡುತ್ತಾ ಕೆಲವೊಮ್ಮೆ ಅರಿವಿಲ್ಲದೆ ಶಿಥಿಲಗೊಂಡ ಕಟ್ಟಡದೊಳಗೆ ಹೋಗುತ್ತಾರೆ. ಕಟ್ಟಡಗಳನ್ನು ತೆರವುಗೊಳಿಸಿದರೆ ಆ ಜಾಗದಲ್ಲಿ ಹೊಸ ಕಟ್ಟಡಗಳನ್ನು ಕಟ್ಟಲು ಅವಕಾಶ ವಾಗುತ್ತದೆ. ಆದರೆ, ಅವುಗಳನ್ನು ತೆರವುಗೊಳಿಸದೇ ಆಟದ ಮೈದಾನದಲ್ಲಿ ಇರುವ ಜಾಗದಲ್ಲಿ ಹೊಸಕಟ್ಟಡ ಕಟ್ಟುವ ಪ್ರಸ್ತಾವ ಇದೆ. ಇದರಿಂದ ಮುಂದಿನ ದಿನಗಳಲ್ಲಿ ಆಟದ ಮೈದಾನಕ್ಕೆ ಕೊರತೆ ಯಾಗುತ್ತದೆ. ಅಧಿಕಾರಿಗಳು ಶಿಥಿಲ ಕಟ್ಟಡಗಳನ್ನು ತೆರವುಗೊಳಿಸಬೇಕು. ವಿಶಾಲ ಮೈದಾನವನ್ನು ಉಳಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಶ್ರೀರಾಂಪುರ ಕೆಪಿಎಸ್ ಶಾಲೆಯಲ್ಲಿನ ಶಿಥಿಲ ಕೊಠಡಿಗಳನ್ನು ತೆರವುಗೊಳಿಸುವ ಕುರಿತು ಇಲಾಖೆಗೆ ಪ್ರಸ್ತಾವ ಕಳುಹಿಸಲಾಗಿದೆ. ಶೀಘ್ರ ಕಟ್ಟಡಗಳನ್ನು ತೆರವುಗೊಳಿಸಲು ಕ್ರಮ ವಹಿಸಲಾಗುವುದು.
ಸೈಯದ್ ಮೋಸಿನ್, ಬಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.