ADVERTISEMENT

ಭದ್ರಾವತಿ | ನೈಸರ್ಗಿಕ ಕೃಷಿಯಲ್ಲೇ ಸಾಧನೆ

ಹಲವು ಪ್ರಶಸ್ತಿ ಪಡೆದಿರುವ ಭಂಡಾರಹಳ್ಳಿಯ ರೈತ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 6:42 IST
Last Updated 24 ಜುಲೈ 2024, 6:42 IST
ತಮ್ಮ ಭೂಮಿಯಲ್ಲಿ ಬೆಳೆದಿರುವ ಕಾಫಿ ಬೆಳೆ
ತಮ್ಮ ಭೂಮಿಯಲ್ಲಿ ಬೆಳೆದಿರುವ ಕಾಫಿ ಬೆಳೆ   

ಭದ್ರಾವತಿ: ತಾಲ್ಲೂಕಿನ ಭಂಡಾರಹಳ್ಳಿಯ ಪ್ರಗತಿಪರ ರೈತ ಬಿ.ಟಿ. ಶ್ರೀಧರ್ ನೈಸರ್ಗಿಕ ಕೃಷಿ ವಿಧಾನ ಅನುಸರಿಸಿ ಸಮಗ್ರ ಕೃಷಿ ಮಾಡುತ್ತಿದ್ದಾರೆ.

ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ಅಡಿಕೆ, ಕಾಫಿ, ಮೆಣಸು, ಬಾಳೆ, ತೆಂಗು ಬೆಳೆದಿದ್ದಾರೆ. ಮತ್ತೆರಡು ಎಕರೆ ಭೂಮಿ ಗುತ್ತಿಗೆ ಪಡೆದು ಭತ್ತವನ್ನೂ ಬೆಳೆಯುತ್ತಿದ್ದಾರೆ. ಭೂಮಿಯನ್ನು ತೇವಾಂಶದಿಂದ ಕಾಪಾಡಲು ಹಸಿರೆಲೆ ಗೊಬ್ಬರ ಉಪಯೋಗಿಸುತ್ತಿದ್ದಾರೆ. ಹೈನುಗಾರಿಕೆಯಲ್ಲೂ ತೊಡಗಿಕೊಂಡು ನಿತ್ಯ 30 ಲೀಟರ್‌ ಹಾಲು ಉತ್ಪಾದಿಸುತ್ತ ಮಾದರಿಯಾಗಿದ್ದಾರೆ.

ನೈಸರ್ಗಿಕ ಕೃಷಿಗಾಗಿ ಎರೆಹುಳು ಅವಲಂಬಿಸಿದ್ದು, ಅವುಗಳಿಂದ ಬೆಳೆಗಳಿಗೆ ನೈಸರ್ಗಿಕ ಗೊಬ್ಬರ ದೊರೆಯುತ್ತದಲ್ಲದೆ, ರಾಸಾಯನಿಕ ಗೊಬ್ಬರದ ಅವಶ್ಯಕತೆಯೂ ಇರುವುದಿಲ್ಲ. ಇದರಿಂದಾಗಿ ಬೇರು, ಕಾಂಡಗಳಿಗೆ ಬಲಬರುತ್ತದೆ ಎಂಬುದನ್ನು ಇತರ ರೈತರಿಗೂ ತಿಳಿಸುತ್ತಿರುವ ಶ್ರೀಧರ್‌, ಕೃಷಿ ಇಲಾಖೆ ಹಾಗೂ ಸಂಘ–ಸಂಸ್ಥೆಗಳ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

ಪ್ರಶಸ್ತಿಗಳು: ಬಿ.ಟಿ. ಶ್ರೀಧರ್ ಹಲವು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

ADVERTISEMENT

2009-10ನೇ ಸಾಲಿನಲ್ಲಿ ಕೇವಲ 30 ಗುಂಟೆಯಲ್ಲಿ 65 ಟನ್ ಕಬ್ಬು ಬೆಳೆದು ಅಂದಾಜು 17ರಿಂದ 20 ಅಡಿ ಎತ್ತರದ  ಕಬ್ಬು ಬೆಳೆದಿದ್ದು ಇವರ ವಿಶೇಷ ಸಾಧನೆಗಳಲ್ಲೊಂದು. ಈ ಸಾಧನೆಗಾಗಿಯೇ ಕೃಷಿ ಇಲಾಖೆ 2010ರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಸನ್ಮಾನಿಸಿತ್ತು.

2021- 22ನೇ ಸಾಲಿನಲ್ಲಿ ಹೆಕ್ಟೆರ್‌ಗೆ 78 ಕ್ವಿಂಟಲ್ ಭತ್ತ ಬೆಳೆದು ತಾಲ್ಲೂಕಿನ ‘ಅತ್ಯುತ್ತಮ ರೈತ’ ಪ್ರಶಸ್ತಿಗೆ ಪಾತ್ರರಾಗಿದ್ದರು. 

ಇವರ ಸಮಗ್ರ ಕೃಷಿ ಪದ್ಧತಿ ಪರಿಗಣಿಸಿ ಪ್ರಸಕ್ತ ವರ್ಷದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಇವರನ್ನು ಗೌರವಿಸಲು ಕೃಷಿ ಇಲಾಖೆ ಆಹ್ವಾನ ನೀಡಿದೆ.

ಶ್ರೀಧರ್‌ ಅವರು ವಿವಿಧ ಬಗೆಯ ಬೆಳೆ ಬೆಳೆದು ಇತರ ರೈತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇಲಾಖೆ ಆಯೋಜಿಸುವ ತರಬೇತಿ ಕಾರ್ಯಕ್ರಮಗಳಲ್ಲಿ ತಪ್ಪದೆ ಭಾಗವಹಿಸುತ್ತಾರೆ. ಇಲಾಖೆಯಿಂದ ಇವರಿಗೆ ಟಾರ್ಪಲ್ ಸ್ಪಿಂಕ್ಲರ್‌ ಬಿತ್ತನೆ ಬೀಜ ಹಾಗೂ ಕೃಷಿ ಉಪಕರಣಗಳನ್ನು ಸಹಾಯಧನ ಯೋಜನೆ ಅಡಿ ನೀಡಲಾಗಿದೆ.
ಸೌಮ್ಯಾ, ಸಹಾಯಕ ಕೃಷಿ ಅಧಿಕಾರಿ
ಭಂಡಾರಹಳ್ಳಿಯ ಪ್ರಗತಿಪರ ರೈತ ಶ್ರೀಧರ್‌ 30 ಗುಂಟೆ ಭೂಮಿಯಲ್ಲಿ 65 ಟನ್ ಕಬ್ಬು ಬೆಳೆದಿರುವುದು ಯುವ ರೈತರಿಗೆ ಸ್ಪೂರ್ತಿ.
ರಮೇಶ್, ಕಬ್ಬು ಬೆಳೆಗಾರರ ಸಂಘದ ತಾಲ್ಲೂಕು ಘಟಕದ ಉಪಾಧ್ಯಕ್ಷ
ಗುತ್ತಿಗೆ ಪಡೆದಿರುವ ಭೂಮಿಯಲ್ಲಿ ನಾಟಿ ಮಾಡಿರುವುದು
ತಾಲ್ಲೂಕು ಕೃಷಿ ಇಲಾಖೆಯಿಂದ ನೀಡಿರುವ ಪ್ರಶಸ್ತಿ ಪತ್ರ
ಬಿ.ಟಿ ಶ್ರೀಧರ್
ಎಂಪಿಎಂ ( ಕಾಗದ ) ಕಾರ್ಖಾನೆಯಿಂದ ಪ್ರಶಸ್ತಿ ಪತ್ರ
ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿಯಿಂದ ನೀಡಿರುವ ಪ್ರಶಸ್ತಿ ಪತ್ರ
ತರಕಾರಿ ಗಿಡಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.