ಹೊಳೆಹೊನ್ನೂರು: ಈ ಬಾರಿ ಸುರಿದ ಮಳೆ ಸಮೀಪದ ಡಣಾಯಕಪುರದಲ್ಲಿನ ಪುಟ್ಟದೊಂದು ಕುಟುಂಬಕ್ಕಿದ್ದ ನೆಲೆಯನ್ನೇ ಕಸಿದುಕೊಂಡಿದೆ. ಕೂಲಿ ಮಾಡಿ ಜೀವನದ ಬಂಡಿ ನೂಕುತ್ತಿದ್ದ ಕುಟುಂಬ ಸದಸ್ಯರಿಗೆ ಇದರಿಂದ ದಿಕ್ಕೇ ತೋಚದ ಸ್ಥಿತಿ ಎದುರಾಗಿದೆ.
ಸಂತ್ರಸ್ತರ ನೋವನ್ನು ಯಾರೂ ಕೇಳುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಪುಷ್ಪಾ–ಮಾರುತಿ ಅವರ ಕುಟುಂಬದ ಸ್ಥಿತಿ ಇದು. ಈಗ 10 ದಿನಗಳ ಹಿಂದೆ ಮಳೆಯಿಂದ ಮನೆ ಕುಸಿದಿದ್ದರಿಂದ ಮನೆಯವರೆಲ್ಲ ಬಾಡಿಗೆ ಮನೆಯಲ್ಲಿ ದಿನದೂಡುವಂತಾಗಿದೆ.
ಒಂದೇ ಕುಟುಂಬಕ್ಕೆ ಕಾಳಜಿ ಕೇಂದ್ರ ತೆರೆಯುವುದು ಹೇಗೆ ಎಂದು ಆರಂಭದ ದಿನಗಳಲ್ಲಿ ಅಧಿಕಾರಿ ವರ್ಗ ಸಬೂಬು ಹೇಳಿತ್ತು. ಆದರೆ, ಭದ್ರಾ ನದಿಯ ಪ್ರವಾಹದ ಕಾರಣಕ್ಕೆ ಗ್ರಾಮದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಅಲ್ಲಿಗೆ ಕೆಲವು ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಆದರೆ, ಮಾರುತಿ ಅವರ ಮನೆಯು ಪ್ರವಾಹಪೀಡಿತ ಪ್ರದೇಶ ವ್ಯಾಪ್ತಿಯಲ್ಲಿ ಇಲ್ಲ ಎಂಬ ಕಾರಣದಿಂದ ಆ ಕುಟುಂಬ ಸದಸ್ಯರನ್ನು ಕಾಳಜಿ ಕೇಂದ್ರಕ್ಕೆ ಕಳುಹಿಸಲು ಅಧಿಕಾರಿ ವರ್ಗ ಮೀನ–ಮೇಷ ಎಣಿಸುತ್ತಿದೆ.
ರಾಜಸ್ವ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿ ಸರ್ಕಾರದಿಂದ ಮನೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದರೂ, ತಕ್ಷಣಕ್ಕೆ ಯಾವುದೇ ನೆರವು ನೀಡಿಲ್ಲ. ಸಮಸ್ಯೆ ಬಗ್ಗೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ. ಸಂತ್ರಸ್ತ ಕುಟುಂಬದ ಬಗ್ಗೆ ಕಾಳಜಿ ವಹಿಸದೇ ಅಧಿಕಾರಿಗಳು ವಾಪಸಾಗಿದ್ದಾರೆ ಎಂಬುದು ಸಾರ್ವಜನಿಕರು ಆಕ್ರೋಶಕ್ಕೆ ಕಾರಣವಾಗಿದೆ.
35 ವರ್ಷಗಳ ಹಿಂದೆ ಸರ್ಕಾರದ ₹ 20,000 ಅನುದಾನದಲ್ಲಿ ಈ ಕುಟುಂಬ ಮನೆ ನಿರ್ಮಿಸಿಕೊಂಡಿತ್ತು. ಮಾರುತಿ ಅವರು ದಿನನಿತ್ಯ ಶಿವಮೊಗ್ಗಕ್ಕೆ ಹೋಗಿ ದಿನಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು, ಸೂರು ಕುಸಿದಿದ್ದರಿಂದ ಈಗ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿದ್ದಾರೆ. ಜನಪ್ರತಿನಿಧಿಗಳು ಸಂತ್ರಸ್ತರ ನೆರವಿಗೆ ಧಾವಿಸಿ ಅವರ ಕಷ್ಟಗಳನ್ನು ನೀಗಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ನಾವು ಬಾಡಿಗೆ ಹಣ ಪಾವತಿಸಲಾರದ ಸ್ಥಿತಿಯಲ್ಲಿದ್ದೇವೆ. ಸರ್ಕಾರ ಹಾಗೂ ಜಿಲ್ಲಾಡಳಿತ ಕೂಡಲೇ ನೆರವಿಗೆ ಧಾವಿಸಬೇಕುಮಾರುತಿ, ಸೂರು ಕಳೆದುಕೊಂಡವರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.