ಸೊರಬ: ಪಟ್ಟಣದ ಹೊರ ವಲಯದಲ್ಲಿರುವ ಎಸ್.ಬಂಗಾರಪ್ಪ ಕ್ರೀಡಾಂಗಣ ಅಗತ್ಯ ಸೌಲಭ್ಯವಿಲ್ಲದೆ ಸೊರಗುತ್ತಿದೆ.
ಮಾಜಿ ಮುಖ್ಯಮಂತ್ರಿ, ದಿವಂಗತ ಎಸ್.ಬಂಗಾರಪ್ಪ ಅವರ ಹೆಸರಿನ ಈ ಕ್ರೀಡಾಂಗಣವು 10 ಎಕರೆ ವಿಸ್ತೀರ್ಣ ಹೊಂದಿದೆ. ವಿಶಾಲವಾದ ಮೈದಾನದಲ್ಲಿ ಯಾವುದೇ ಮೂಲ ಸೌಲಭ್ಯಗಳನ್ನು ಒದಗಿಸಿಲ್ಲ. ಇದರಿಂದ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಹಿನ್ನೆಡೆಯಾಗಿದೆ.
ಈ ಬಾರಿ ಸುರಿದ ಭಾರಿ ಮಳೆಗೆ ಕ್ರೀಡಾಂಗಣ ಜಲಾವೃತಗೊಂಡು, ಆಟ ಆಡುವುದೇ ಕಷ್ಟವಾಗಿತ್ತು. ಎಚ್ಚೆತ್ತುಕೊಂಡ ಅಧಿಕಾರಿಗಳು 100 ಮೀ. ಸುತ್ತಳತೆಯಲ್ಲಿ ಟ್ರ್ಯಾಕ್ ನಿರ್ಮಿಸಲು ಮುಂದಾಗಿದ್ದಾರೆ. ವ್ಯಾಯಾಮ ಶಾಲೆ ನಿರ್ಮಾಣ ಹಂತದಲ್ಲಿದೆ. ಆದರೆ, ಇದರಿಂದ ಒಳಾಂಗಣ ಕ್ರೀಡೆ ಸೇರಿ ಯಾವ ಕ್ರೀಡೆಗಳನ್ನು ಆಡಲೂ ಉಪಯೋಗವಾಗುತ್ತಿಲ್ಲ.
ತಾಲ್ಲೂಕು ಮಟ್ಟದಲ್ಲಿ ಆಟಕ್ಕೆ ಬೇರೆ ಮೈದಾನ ಇಲ್ಲದಿರುವುದರಿಂದ ಕ್ರೀಡಾಪಟುಗಳು ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಪೂರ್ವಸಿದ್ಧತೆ ನಡೆಸಲು ಈ ಕ್ರೀಡಾಂಗಣವನ್ನೇ ಅವಲಂಬಿಸಬೇಕಿದೆ. ಕಳೆದ 15 ವರ್ಷಗಳಿಂದ ಹೋಬಳಿ, ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ಸೇರಿ ವಿವಿಧ ಕ್ರೀಡೆಗಳು ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇಲ್ಲಿ ನಡೆಸಲಾಗುತ್ತಿದೆ. ಉಳಿದಂತೆ ಪ್ರತಿದಿನ ಬೆಳಿಗ್ಗೆ ವಾಯುವಿಹಾರಕ್ಕೆಂದು ಬರುವ ಜನರಿಗೆ ಇಲ್ಲಿ ವ್ಯಾಯಾಮ ಮಾಡಲು ಅನುಕೂಲವಾಗಿದೆ. ಅಲ್ಲದೇ ಶನಿವಾರ, ಭಾನುವಾರ ಹಾಗೂ ರಜಾ ದಿನಗಳಲ್ಲಿ ಯುವಕರು ಮೈದಾನದಲ್ಲಿ ಕ್ರಿಕೆಟ್ ಆಡುವುದನ್ನು ಕಾಣಬಹುದು.
ಮೈದಾನದ ಸುತ್ತಲೂ ಪೊದೆ ಬೆಳೆದು ಹಾಳು ಕೊಂಪೆಯಾಗಿದೆ. ಇಲ್ಲಿ ಕ್ರೀಡಾಪಟುಗಳಿಗಿಂತ ಜಾನುವಾರುಗಳ ಸಂಖ್ಯೆಯೇ ಹೆಚ್ಚು. ಜೊತೆಗೆ ಅಗತ್ಯ ಸೌಲಭ್ಯವಿಲ್ಲದೆ ಪಾಳು ಬಿದ್ದಿರುವ ಪರಿಣಾಮ ಸಂಜೆ ನಂತರ ಮದ್ಯ ವ್ಯಸನಿಗಳ ಅಡ್ಡೆಯಾಗಿ ಮಾರ್ಪಡುತ್ತದೆ. ಅನೈತಿಕ ಚಟುವಟಿಕೆಯ ತಾಣವಾಗಿ ಪರಿಣಮಿಸಿದೆ.
ಕ್ರೀಡಾಂಗಣದ ಸುತ್ತ ಕಾಂಪೌಂಡ್ ನಿರ್ಮಿಸಿ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ರಾಜ್ಯ ಹಾಗೂ ವಿಶ್ವವಿದ್ಯಾಲಯ ಮಟ್ಟದಲ್ಲಿ ನಡೆಯುವ ಕ್ರೀಡಾಕೂಟ ಹಾಗೂ ಅಂತರ್ ಕಾಲೇಜು ಮಟ್ಟದ ಕ್ರೀಡಾಕೂಟಗಳಿಗೆ ವಿದ್ಯಾರ್ಥಿಗಳು ಇದೇ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುತ್ತಾರೆ. ಆದರೆ, ಇಂತಹ ಪ್ರತಿಭೆಗಳು ಕ್ರೀಡೆಯಲ್ಲಿ ಮಹೋನ್ನತ ಸಾಧನೆ ಮಾಡಲು ಕ್ರೀಡಾಂಗಣದ ಸ್ಥಿತಿ ತೊಡಕಾಗಿದೆ. ಅನೇಕ ಕ್ರೀಡಾ ಪ್ರತಿಭೆಗಳ ಬದುಕಿಗೆ ಸಹಕಾರಿ ಆಗಬೇಕಿದ್ದ ಮೈದಾನದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಸೌಲಭ್ಯ ಮರೀಚಿಕೆ
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ಕ್ರೀಡಾಪಟುಗಳ ಹಿತದೃಷ್ಟಿಯಿಂದ ಪಟ್ಟಣದ ಹಿರೇಶಕುನದ ಸರ್ವೆ ನಂಬರ್– 113ರಲ್ಲಿ ನೂರಾರು ಎಕರೆ ಜಾಗ ಕಾಯ್ದಿರಿಸಿ ಈ ಭಾಗದಲ್ಲಿ ಸಾರ್ವಜನಿಕ ಆಸ್ಪತ್ರೆ ಪೊಲೀಸ್ ವಸತಿಗೃಹ ಅಗ್ನಿಶಾಮಕ ಠಾಣೆ ಕಚೇರಿ ಕೈಗಾರಿಕಾ ವಸಾಹತು ಕೇಂದ್ರ ಕ್ರೀಡಾಂಗಣ ಸೇರಿ ವಿವಿಧ ಕಟ್ಟಡಗಳ ನಿರ್ಮಾಣಕ್ಕೆ ನೂರಾರು ಎಕರೆ ಮೀಸಲಿಟ್ಟಿದ್ದರು. ಅಭಿವೃದ್ಧಿ ಹಾಗೂ ಜನಪರ ಕಾಳಜಿ ಹೊಂದಿದ್ದ ಎಸ್.ಬಂಗಾರಪ್ಪ ಅವರ ಹೆಸರನ್ನೇ ಕ್ರೀಡಾಂಗಣಕ್ಕೆ ನಾಮಕರಣ ಮಾಡಲಾಗಿದೆ. ತಮ್ಮ ವಿಶಿಷ್ಟ ವ್ಯಕ್ತಿತ್ವದ ಮೂಲಕ ಜನರ ಮನಸ್ಸು ಗೆದ್ದ ಬಂಗಾರಪ್ಪ ಅವರ ಹೆಸರಿನ ಕ್ರೀಡಾಂಗಣ ಅಭಿವೃದ್ಧಿಪಡಿಸಲು ಮುಂದಾಗಿಲ್ಲ. ಒಳಾಂಗಣ ಕ್ರೀಡಾಂಗಣ ಹೊರತುಪಡಿಸಿದರೆ ಮತ್ಯಾವುದೇ ಅಭಿವೃದ್ಧಿ ಕಾರ್ಯ ಕಂಡಿಲ್ಲ ಎಂಬುದು ಕ್ರೀಡಾಸಕ್ತರ ಆರೋಪ.
ಕ್ರೀಡಾಂಗಣವನ್ನು ಸಂಪೂರ್ಣ ಅಭಿವೃದ್ಧಿಪಡಿಸಲು ₹ 1.66 ಕೋಟಿ ಅನುದಾನ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಾಮಗಾರಿ ಪ್ರಾರಂಭಿಸಲಾಗುವುದುರೇಖ್ಯಾ ನಾಯಕ್, ಸಹಾಯಕ ನಿರ್ದೇಶಕ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ
ಅಭ್ಯಾಸ ಮಾಡಲು ಸಮತಟ್ಟಾದ ಕ್ರೀಡಾಂಗಣವಿಲ್ಲದೆ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ತಾಲ್ಲೂಕಿನಲ್ಲಿ ಸುಸಜ್ಜಿತ ಮೈದಾನ ಮಾಡಲು ಆಡಳಿತ ಮುಂದಾಗಬೇಕು.ಧೀರಜ್ ಡಿ, ಕಬಡ್ಡಿ ಆಟಗಾರ
ರಾಜ್ಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆಗಳು ಬೆಳೆಯಲು ಕ್ರೀಡಾ ವಾತಾವರಣ ಸೃಷ್ಟಿಸಬೇಕು.ಅಬ್ದುಲ್ ರಶೀದ್, ಸಮಾಜ ಸೇವಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.