ಆನಂದಪುರ: ಆಧುನಿಕ ಯುಗದಲ್ಲಿ ಯುವಕರು ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗುತ್ತಿರುವ ಸಂದರ್ಭದಲ್ಲಿ ತಮ್ಮ ಹಳ್ಳಿಯಲ್ಲಿಯೇ ಉತ್ತಮ ಕೃಷಿ ಮಾಡಿರುವ ಯುವ ರೈತ ಗಣೇಶ್ ಸಾಧನೆಯ ಹಾದಿಯಲ್ಲಿದ್ದಾರೆ.
ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಕೆರೆಹಿತ್ಲು ಗ್ರಾಮದ ಕೃಷಿಕ ಗಣೇಶ್ ಕೃಷಿಯಲ್ಲಿ ತೊಡಗಿಕೊಳ್ಳುವ ಮೂಲಕ ಆದಾಯ ಮೂಲವನ್ನು ಕಂಡುಕೊಂಡಿದ್ದಾರೆ. ಕೃಷಿಯಲ್ಲಿಯೂ ಉತ್ತಮ ಸಾಧನೆ ಮಾಡಿ ಕೈತುಂಬ ಆದಾಯ ಪಡೆಯಬಹುದು ಎಂಬುದನ್ನು ತೋರಿಸುವ ಮೂಲಕ ಸದಾ ಕೆಲಸದಲ್ಲೇ ತಮ್ಮ ಜೀವನ ಕಳೆಯುವ ನಗರ ಉದ್ಯೋಗಿಗಳ ಮುಂದೆ ನೆಮ್ಮದಿಯ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.
ಮೊದಲು ವಿವಿಧ ರೀತಿಯ ಸ್ವಂತ ಉದ್ಯೋಗಗಳಿಗೆ ಕೈ ಹಾಕಿದರು. ಇದರಿಂದ ಸಮಯಕ್ಕೆ ಸರಿಯಾಗಿ ಹೂಡಿದ ಬಂಡವಾಳ ಸಹ ಸಿಗಲಿಲ್ಲ. ಕೆಲವರು ಹಣ ನೀಡದೆ ದಿನ ಮುಂದೂಡುತ್ತಾ ಹೋದರು. ಸಾಲದ ಸುಳಿಗೆ ಸಿಲುಕುವ ಸಂದರ್ಭದಲ್ಲಿ ಅವರ ಬದುಕು ಕೃಷಿಯಿಂದ ಹಸನಾಯಿತು.
ಎರಡು ವರ್ಷಗಳಿಂದ ಪಪ್ಪಾಯ ಬೆಳೆಯುವ ಮೂಲಕ ಯಶಸ್ಸು ಕಂಡಿದ್ದಾರೆ. ಮೊದಲು ಒಂದು ಎಕರೆಯಲ್ಲಿ ಪಪ್ಪಾಯ ಬೆಳೆದಿದ್ದರು. ಇದರಿಂದ ಉತ್ತಮ ಆದಾಯ ಪಡೆದ ಕಾರಣ ಪ್ರಸ್ತುತ 4 ಎಕರೆಯಲ್ಲಿ ಪಪ್ಪಾಯ ಬೆಳೆದಿದ್ದಾರೆ. ಜತೆಗೆ ಅಡಿಕೆ ಗಿಡಗಳನ್ನು ಸಹ ನೆಟ್ಟಿದ್ದಾರೆ.
‘ದಾವಣಗೆರೆಯಿಂದ ಒಂದು ಗಿಡಕ್ಕೆ ₹ 18ಕ್ಕೆ ಖರೀದಿ ಮಾಡಿ ತಂದಿದ್ದೇವೆ. ಕೊಳವೆಬಾವಿ ಸೇರಿ ಸುಮಾರು ₹ 4 ಲಕ್ಷ ಖರ್ಚು ಮಾಡಲಾಗಿದೆ. ಕೃಷಿ ಮಾಡಿದ 10 ತಿಂಗಳಿಂದ ಸುಮಾರು 3 ವರ್ಷದವರೆಗೆ ನಿರಂತರ ಆದಾಯ ಸಿಗುತ್ತದೆ’ ಎಂದು ಗಣೇಶ್ ವಿವರಿಸಿದರು.
‘ಪಪ್ಪಾಯಿಯ ಒಂದು ಕಾಯಿಸುಮಾರು 2ರಿಂದ 3 ಕೆ.ಜಿ. ಬರುತ್ತದೆ. ತಿಂಗಳಿಗೆ 8ರಿಂದ 10 ಕ್ವಿಂಟಲ್ ಸಿಗುತ್ತದೆ. ಒಂದು ಕೆ.ಜಿ.ಗೆ ₹ 10 ಸಿಗುತ್ತದೆ. ವ್ಯಾಪಾರಸ್ಥರು ತೀರ್ಥಹಳ್ಳಿಯಿಂದ ಮನೆಬಾಗಿಲಿಗೆಬಂದು ಪಪ್ಪಾಯ ತೆಗೆದುಕೊಂಡು ಹೋಗುವುದರಿಂದ ಮಾರಾಟದ
ಸಮಸ್ಯೆ ಇಲ್ಲದಂತಾಗಿದೆ’ಎನ್ನುವರು ಗಣೇಶ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.