ಆನಂದಪುರ (ಶಿವಮೊಗ್ಗ ಜಿಲ್ಲೆ): ಸಮೀಪದ ಮಲಂದೂರಿನಲ್ಲಿರುವ ಮಹಂತಿನ ಮಠದ ಕಲ್ಯಾಣಿಯಲ್ಲಿ ಈಜಲು ಹೋಗಿದ್ದ ಬೆಂಗಳೂರಿನ ಹೆರೋಹಳ್ಳಿ ಕ್ರಾಸ್ ನಿವಾಸಿ ಕುಶಾಲ್ (22) ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಕುಶಾಲ್ ತನ್ನಿಬ್ಬರ ಸ್ನೇಹಿತರ ಜೊತೆ ಪ್ರವಾಸಕ್ಕಾಗಿ ಐತಿಹಾಸಿಕ ಸ್ಥಳವಾದ ಮಹಂತಿನ ಮಠಕ್ಕೆ ಬಂದಿದ್ದರು. ನಂತರ ಕುಪ್ಪಳ್ಳಿಯ ಕುವೆಂಪು ಮನೆಗೆ ಹೊಗಲು ಯೋಜನೆ ರೂಪಿಸಿದ್ದರು. ಕುಶಾಲ್ ಮಠದ ಕಲ್ಯಾಣಿಯಲ್ಲಿ ಈಜಲು ಹೋದಾಗ ಈ ಅವಘಡ ಸಂಭವಿಸಿದೆ.
ಹಲವಾರು ವರ್ಷಗಳಿಂದ ಪಾಳು ಬಿದ್ದಿದ್ದ ಮಹಂತಿನ ಮಠವನ್ನು ಅನೇಕ ಸಂಘ– ಸಂಸ್ಥೆಯವರು ಹಾಗೂ ನಟ ಯಶ್ ಅವರ ಯಶೋಮಾರ್ಗದಿಂದ ಅಭಿವೃದ್ಧಿ ಕಂಡಿತ್ತು. ಅಭಿವೃದ್ಧಿಯ ನಂತರ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿತ್ತು. ವಿವಾಹ ಪೂರ್ವ ಫೋಟೊಶೂಟ್‌ಗಾಗಿ ಇಲ್ಲಿಗೆ ವಿವಿಧ ಜಿಲ್ಲೆಗಳಿಂದ ಬರುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಮಹಂತಿನ ಮಠದ ಬಗ್ಗೆ ವಿವರಣೆ ಪಡೆದ ಯುವಕರು ಶುಕ್ರವಾರ ಬೆಳಿಗ್ಗೆ ಮಠಕ್ಕೆ ಬಂದಿದ್ದರು.
ಇನ್ನಿಬ್ಬರು ಸ್ನೇಹಿತರಿಗೆ ಈಜು ಬಾರದ ಕಾರಣ ದಡದ ಮೇಲೆಯೇ ಕುಳಿತು ಫೋಟೊ ತೆಗೆಯುತ್ತಿದ್ದರು. ಕುಶಾಲ್ ಮುಳುಗುತ್ತಿರುವುದನ್ನು ಕಂಡು ಸ್ನೇಹಿತರು ಕಾಪಾಡಲು ಹೋದರೂ ಸಾಧ್ಯವಾಗಲಿಲ್ಲ. ತಕ್ಷಣ ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಶವವನ್ನು ಹೊರತೆಗೆದರು. ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ವಿನಾಯಕ ಎಂ ಹೆಗ್ಗನಾಯ್ಕ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಆನಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.