ADVERTISEMENT

ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆಗೆ ಯತ್ನ ಆರೋಪ: ಆರೋಪಿ ಕಾಲಿಗೆ ಗುಂಡೇಟು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2024, 7:33 IST
Last Updated 25 ಮಾರ್ಚ್ 2024, 7:33 IST
   

ಶಿವಮೊಗ್ಗ: ಕೊಲೆ ಯತ್ನ ಪ್ರಕರಣದಲ್ಲಿ ಬಂಧಿಸಲು ಬಂದಿದ್ದ ಪೊಲೀಸರ ಮೇಲೆ ದಾಳಿ ಮಾಡಲು ಯತ್ನಿಸಿದವನ ಕಾಲಿಗೆ ಇಲ್ಲಿನ ತುಂಗಾ ನಗರ ಠಾಣೆ ಪೊಲೀಸರು ಸೋಮವಾರ ಗುಂಡು ಹೊಡೆದು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಇಲ್ಲಿನ ಟಿಪ್ಪು ನಗರದ ನಿವಾಸಿ ಪರ್ವೇಜ್ ಅಲಿಯಾಸ್ ಪರು ಗುಂಡೇಟು ತಿಂದು ಗಾಯಗೊಂಡವನು. ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಮಾರ್ಚ್ 18ರಂದು ಟಿಪ್ಪುನಗರದಲ್ಲಿ ನಾಸೀರ್, ಮೊಹಮ್ಮದ್ ತಂಜೀಮ್ ಮತ್ತು ಅಫ್ತಾಬ್ ಎಂಬುವರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಮಧ್ಯಪ್ರವೇಶಿಸಿದ್ದ ಪರ್ವೇಜ್, ತನ್ನ ಸಹಚರರೊಂದಿಗೆ ಸೇರಿ ತಂಜೀಮ್‌ಗೆ ಚಾಕುವಿನಿಂದ ಇರಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದನು.

ADVERTISEMENT

ತೀವ್ರ ಗಾಯಗೊಂಡ ತಂಜೀಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಘಟನೆ ಹಿನ್ನೆಲೆಯಲ್ಲಿ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.

'ಟಿಪ್ಪು ನಗರದ ಗಲಾಟೆ ನಂತರ ತಲೆಮರೆಸಿಕೊಂಡಿದ್ದ ಪರ್ವೇಜ್, ಸಮೀಪದ ಮಲ್ಲಿಗೇನಹಳ್ಳಿಯ ರುದ್ರಭೂಮಿ ಬಳಿಯ ಶೆಡ್‌ನಲ್ಲಿ ಮಲಗಿರುವ ಮಾಹಿತಿ ತಿಳಿದು, ಪೊಲೀಸರು ಬಂಧಿಸಲು ತೆರಳಿದ್ದರು. ಈ ವೇಳೆ ಪರ್ವೇಜ್ ತುಂಗಾ ನಗರ ಠಾಣೆ ಕಾನ್‌ಸ್ಟೆಬಲ್ ನಾಗಪ್ಪ ಅವರಿಗೆ ಚಾಕುವಿನಿಂದ ಇರಿಯಲು ಯತ್ನಿಸಿದ್ದಾನೆ. ಆಗ ಅಲ್ಲಿಯೇ ಇದ್ದ ಶಿವಮೊಗ್ಗ ಗ್ರಾಮಾಂತರ ವೃತ್ತದ ಇನ್‌ಸ್ಪೆಕ್ಟರ್ ಸತ್ಯನಾರಾಯಣ ಆತ್ಮರಕ್ಷಣೆಗಾಗಿ ಸರ್ವಿಸ್ ರಿವಾಲ್ವರ್‌ನಿಂದ ಪರ್ವೇಜ್ ಕಾಲಿಗೆ ಎರಡು ಸುತ್ತು ಗುಂಡು ಹಾರಿಸಿದ್ದಾರೆ' ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಮಾಧ್ಯಮದವರಿಗೆ ತಿಳಿಸಿದರು.

ಆರೋಪಿ ಪರ್ವೇಜ್ ವಿರುದ್ಧ ಕೊಲೆ, ಕೊಲೆಯತ್ನ, ಗಾಂಜಾ ಮಾರಾಟ, ಸುಲಿಗೆ ಸೇರಿದಂತೆ ಆರು ಪ್ರಕರಣಗಳು ತುಂಗಾ ನಗರ ಪೊಲೀಸ್ ಠಾಣೆಯಲ್ಲೇ ಈ ಮೊದಲು ದಾಖಲಾಗಿವೆ ಎಂದು ಎಸ್ಪಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.