ಸಾಗರ: ತಾಲ್ಲೂಕಿನಲ್ಲಿ ಇತ್ತೀಚಿಗೆ ಮೂರು ಮಂಗನ ಕಾಯಿಲೆ ಪ್ರಕರಣ ಕಾಣಿಸಿಕೊಂಡಿದ್ದು, ಸೋಂಕು ಹರಡದಂತೆ ತಡೆಯಲು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ತಿಳಿಸಿದರು.
ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮಂಗನ ಕಾಯಿಲೆ ತಡೆ ಕುರಿತು ನಡೆದ ಕೆಎಫ್‌ಡಿ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಗಲ್, ಉಳ್ಳೂರು, ತಡಗಳಲೆ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ತಲಾ ಒಂದು ಕೆಎಫ್‌ಡಿ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರು ಗುಣಮುಖರಾಗಿದ್ದಾರೆ ಎಂದರು.
ಮಂಗನ ಕಾಯಿಲೆ ಪ್ರಕರಣಗಳು ಈ ಹಿಂದಿನ ವರ್ಷಗಳಲ್ಲಿ ಯಾವ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದೆಯೋ ಅಂತಹ ಕಡೆ ಗ್ರಾಮಸ್ಥರಿಗೆ ರೋಗ ನಿರೋಧಕ ಲಸಿಕೆಯನ್ನು ಕಡ್ಡಾಯವಾಗಿ ನೀಡಲಾಗುವುದು. ಸೋಂಕು ಪೀಡಿತ ಪ್ರದೇಶದಲ್ಲಿ ಗ್ರಾಮಸ್ಥರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಸೂಚನಾ ಫಲಕ ಅಳವಡಿಸಲಾಗುವುದು ಎಂದರು.
ಏಪ್ರಿಲ್ 28ಕ್ಕೆ ನಗರದ ಗಾಂಧಿ ಮೈದಾನದಲ್ಲಿ ಆರೋಗ್ಯ ಮೇಳ ಏರ್ಪಡಿಸಲಾಗಿದೆ. ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ನೀಡಲು ನುರಿತ ತಜ್ಞರು ಬರುತ್ತಿದ್ದಾರೆ. ಸ್ಥಳದಲ್ಲಿಯೇ ಆಯುಷ್ಮಾನ್ ಆರೋಗ್ಯ ಕಾರ್ಡ್ ವಿತರಿಸಲಾಗುವುದು ಎಂದರು.
ಉಪವಿಭಾಗಾಧಿಕಾರಿ ಡಾ. ನಾಗರಾಜ್ ಎಲ್., ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ರಾಯ್ಕರ್, ತಹಶೀಲ್ದಾರ್ ಮಲ್ಲೇಶ್ ಬಿ.ಪೂಜಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪುಷ್ಪಾ ಕಮ್ಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಪರಪ್ಪ, ಅರಣ್ಯ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.