ಕೋಣಂದೂರು: ತಮ್ಮ ಜಮೀನಿನಲ್ಲಿ ಸಮಗ್ರ ಕೃಷಿ ಅಳವಡಿಸಿಕೊಂಡಿದ್ದಲ್ಲದೆ, ‘ಶ್ರೀ’ ಎಂಬ ಹೆಸರಿನ ನರ್ಸರಿ ಮತ್ತು ಫಾರಂ ಉದ್ಯಮದ ಮೂಲಕ ಮಾದರಿ ಕೃಷಿಕರಾಗಿದ್ದಾರೆ ಜಾಗಟಗಾರು ಮುರಳಿ.
ಡಿಪ್ಲೊಮಾ ಓದಿರುವ ಮುರಳಿ, ಕೋಣಂದೂರು ಸಮೀಪದ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾಗಟಗಾರಿನಲ್ಲಿರುವ 5 ಎಕರೆ ಜಮೀನನ್ನು ಹೊಸಹೊಸ ಪ್ರಯೋಗಗಳ ಶಾಲೆಯನ್ನಾಗಿಸಿದ್ದಾರೆ. ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಯ ಜೊತೆಗೆ ಉಪ ಬೆಳೆಗಳಾಗಿ ಏಲಕ್ಕಿ, ಕಾಳುಮೆಣಸು, ಜಾಯಿಕಾಯಿ, ಅಂಜೂರ, ಲವಂಗ, ಚಿಕ್ಕಿ, ರಂಬುಟಾನ್, ಚೆರ್ರಿ, ಡ್ರ್ಯಾಗನ್ ಫ್ರೂಟ್, ಬಟರ್ ಫ್ರೂಟ್, ಲಕ್ಷ್ಮಣ ಫಲ, ಹನುಮಾನ್ ಫಲ, ಥೈಲ್ಯಾಂಡ್ ಪಿಂಕ್, ಅಂಥೋರಿಯಂ, ಸರ್ವ ಸಾಂಬಾರು ಗಿಡ, ಮೆಕಡೊಮೀಯಾ, ಮಿರಾಕಲ್ ಫ್ರೂಟ್, ಅಪ್ಪೆ ಮಿಡಿ ಇತ್ಯಾದಿ ಗಿಡಗಳನ್ನು ಬೆಳೆದಿದ್ದಾರೆ. ತಮ್ಮ ‘ಶ್ರೀ’ ನರ್ಸರಿಯ ಮೂಲಕ ಗ್ರಾಹಕರಿಗೆ ಉತ್ತಮ ಸಸಿಗಳನ್ನೂ ಪೂರೈಸುತ್ತಿದ್ದಾರೆ.
ನರ್ಸರಿಯಲ್ಲಿ ವಿವಿಧ ತರಹದ ಸಸಿಗಳನ್ನು ಬೆಳೆಸಿ ಪೋಷಣೆ ಮಾಡುತ್ತಿದ್ದು, ಉತ್ತಮ ಆದಾಯ ಪಡೆಯುತ್ತಿದ್ದಾರೆ. ನೀರಿಗಾಗಿ ಕೊಳವೆಬಾವಿ ಆಶ್ರಯಿಸಿದ್ದಾರೆ. ಸಾವಯವ ಕೃಷಿಯ ಜೊತೆಗೆ ಅಲ್ಪ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರವನ್ನೂ ಬಳಸುತ್ತಾರೆ. ‘4 ಕಾಯಂ ಕೆಲಸಗಾರರ ಜೊತೆ ಪತ್ನಿ ಸರ್ವಾಣಿ, ಮಕ್ಕಳಾದ ವೈಷ್ಣವಿ ಮತ್ತು ವಿಭವ್ ಅವರೂ ಕೃಷಿ ಮತ್ತು ನರ್ಸರಿ ಕಾರ್ಯದಲ್ಲಿ ಕೈ ಜೋಡಿಸುತ್ತಾರೆ’ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.
ಅಡಿಕೆ ತೋಟದ ಉತ್ಪನ್ನಗಳನ್ನು ಸಾಗಿಸಲು ತೋಟದಲ್ಲೇ ರಸ್ತೆ ನಿರ್ಮಿಸಲಾಗಿದೆ. ಅಡಿಕೆ ಸುಲಿಯುವ ಮತ್ತು ಪಾಲಿಶ್ ಮಾಡುವ ಯಂತ್ರಗಳೂ ಇವೆ. ಜೂನ್‌ನಿಂದ ಅಕ್ಟೋಬರ್
ವರೆಗೆ ನರ್ಸರಿ ಸಸಿಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ಅವುಗಳಲ್ಲಿ ಅಡಿಕೆ ಗಿಡ, ಕಾಳು ಮೆಣಸು ಸಸಿಗಳಿಗೆ ಅತಿ ಹೆಚ್ಚು ಬೇಡಿಕೆ ಇದೆ. ಉಳಿದಂತೆ ಅಡಿಕೆ ತೋಟದ ಸುತ್ತ ಹಾಗೂ ಮಧ್ಯದಲ್ಲಿ ಉಪ ಬೆಳೆಯಾಗಿ ಬೆಳೆಸಲು ರೈತರು ಹಲಸು, ಲಿಂಬೆ ಹಾಗೂ ಇತರ ಗಿಡಗಳನ್ನು ತೆಗೆದುಕೊಂಡು ಹೋಗುತ್ತಾರೆ.
ಹಳೆಯ ಅಡಿಕೆ ಗಿಡಗಳನ್ನು ಕಡಿದು ಅದೇ ಜಾಗದಲ್ಲಿ ಹೊಸದಾಗಿ ಗಿಡಗಳನ್ನು ನೆಡುವ ಮೂಲಕ ಒಂದು ಹೊಸ ಪ್ರಯತ್ನಕ್ಕೆ ಹಂತಹಂತವಾಗಿ ಕೈ ಹಾಕಿರುವುದಾಗಿ ಹೇಳುವ ಅವರು, ಮೊದಲ ಹಂತವಾಗಿ ಕಡಿದ ಜಾಗದಲ್ಲಿ ಸುಮಾರು 270 ಅಡಿಕೆ ಗಿಡಗಳನ್ನು ನೆಟ್ಟಿರುವುದಾಗಿ ವಿವರಿಸಿದ್ದಾರೆ.
.........
ಉಪ ಬೆಳೆ ಅಗತ್ಯ
ಅಡಿಕೆ ಬೆಳೆಗೆ ಈಚೆಗೆ ಕಾಣಿಸಿಕೊಳ್ಳುತ್ತಿರುವ ಎಲೆ ಚುಕ್ಕಿ ರೋಗ, ಚಂಡೆ ರೋಗಗಳಿಂದ ಮಲೆನಾಡಿಗರ ಕೃಷಿ ಆತಂಕ ಎದುರಿಸುತ್ತಿದೆ. ಆದ್ದರಿಂದ ರೈತರು ಉಪ ಬೆಳೆಗಳು, ಬದಲಿ ಬೆಳೆಗಳನ್ನು ಬೆಳೆಯುವ ಮೂಲಕ ಕಾಲಕಾಲಕ್ಕೆ ಉಂಟಾಗುವ ಆತಂಕದಿಂದ ಪಾರಾಗಬಹುದು.
– ಜಾಗಟಗಾರು ಮುರಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.