ಶಿವಮೊಗ್ಗ: ಅತಿ ಹೆಚ್ಚು ಮಳೆಯಾಗುವ ಪ್ರದೇಶಗಳ ಜಿಲ್ಲೆ ಎನಿಸಿಕೊಂಡಿದ್ದ ಶಿವಮೊಗ್ಗ ಆ ಪಟ್ಟವನ್ನು ಉಡುಪಿಗೆ ಬಿಟ್ಟುಕೊಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ದತ್ತಾಂಶದ ಪ್ರಕಾರ 2015ರಿಂದ 2021ರ ಅವಧಿಯಲ್ಲಿ ಐದು ವರ್ಷ ಉಡುಪಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮಳೆ ದಾಖಲಾಗಿದೆ.
ಕರ್ನಾಟಕದ ಚಿರಾಪುಂಜಿ ಎಂದೇ ಖ್ಯಾತವಾಗಿದ್ದ, ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಆ ಸ್ಥಾನವನ್ನು ಕಳೆದುಕೊಳ್ಳುವಂತೆ ಪ್ರಕೃತಿ ಬದಲಾಗಿರುವುದರ ಸೂಚನೆ ಇದು.
ಉಡುಪಿ ತಾಲ್ಲೂಕಿನ ಬೈರಂಪಳ್ಳಿಯಲ್ಲಿ 2016ರಲ್ಲಿ 59.16 ಸೆಂ.ಮೀ. ಮಳೆಯಾಗಿತ್ತು. ಆ ವರ್ಷ ರಾಜ್ಯದಲ್ಲೇ ದಾಖಲಾದ ಅತಿ ಹೆಚ್ಚು ಮಳೆ ಇದು. 2017ರಲ್ಲಿ ಕಾರ್ಕಳ ತಾಲ್ಲೂಕಿನ ಶಿರ್ಲಾಲುವಿನಲ್ಲಿ ಅತಿ ಹೆಚ್ಚು ಅಂದರೆ 69.39 ಸೆಂ.ಮೀ. ಮಳೆಯಾಯಿತು. 2019ರಲ್ಲಿ ಹೆಬ್ರಿಯಲ್ಲಿ 93.40 ಸೆಂ.ಮೀ.ನಷ್ಟು ಮಳೆ ಸುರಿದು, ಆ ವರ್ಷದ ಅಧಿಕ ಮಳೆಯಾದ ಸ್ಥಳ ಎಂದೆನಿಸಿಕೊಂಡಿತು. 2020ರಲ್ಲಿ ಉಡುಪಿಯ ಇನ್ನಂಜೆಯಲ್ಲಿ ಅಧಿಕ, ಅಂದರೆ 79.88 ಸೆಂ.ಮೀ. ಮಳೆ ಸುರಿಯಿತು. ಅದರ ಮರುವರ್ಷ ಕಾರ್ಕಳದ ಮುದ್ರಾಡಿಯಲ್ಲಿ 79.49 ಸೆಂ.ಮೀ ನಷ್ಟು ಅಧಿಕ ಮಳೆಯಾಗಿತ್ತು.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಕೆರೆ ಎಂಬಲ್ಲಿ 52.99 ಸೆಂ.ಮೀ. ಮಳೆ 2015ರಲ್ಲಿ ದಾಖಲಾಗಿದ್ದು, ಇದು ರಾಜ್ಯದಲ್ಲೇ ಹೆಚ್ಚು. ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕಿನ ಕೊಡಕಣಿಯಲ್ಲಿ 2018ರಲ್ಲಿ 79.78 ಸೆಂ.ಮೀ. ಮಳೆ ದಾಖಲಾಗಿತ್ತು. ಈ ಎರಡೂ ಜಿಲ್ಲೆಗಳೂ ಪಶ್ಚಿಮ ಘಟ್ಟದ ಭಾಗಗಳೇ.
2015ರಿಂದ 2021ರ ಅವಧಿಯಲ್ಲಿ ಆಗುಂಬೆಗಿಂತ ನಾಲ್ಕು ಬಾರಿ ಹೊಸನಗರ ತಾಲ್ಲೂಕಿನ ಹುಲಿಕಲ್‌ನಲ್ಲಿ ಅತಿ ಹೆಚ್ಚು ಮಳೆಯಾಗಿದೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ವಿಜ್ಞಾನಿ ಟಿ.ವಿ. ರಾಮಚಂದ್ರ ಅವರ ಪ್ರಕಾರ ‘ಏಕವಿಧದ ಮರಗಳನ್ನು ಬೆಳೆಸುವ ಸಂಸ್ಕೃತಿ ಹೆಚ್ಚಾಗಿರುವುದು ಹಾಗೂ ಅರಣ್ಯ ಸಂಪತ್ತು ಕ್ಷೀಣಿಸಿರುವುದೇ ಮಳೆ ಪ್ರಮಾಣದ ಈ ಏರುಪೇರಿಗೆ ಕಾರಣ. ಕರ್ನಾಟಕದಲ್ಲಿ ಒಟ್ಟು ನಿರೀಕ್ಷಿತ ಶೇ 33ರಷ್ಟು ಅರಣ್ಯ ಪ್ರದೇಶ ಇರಬೇಕಿತ್ತು. ಆದರೆ ಇರುವುದು ಶೇ 20ರಷ್ಟು ಮಾತ್ರ. ಪಶ್ಚಿಮ ಘಟ್ಟದ ಕಾಡುಗಳ ಪ್ರಮಾಣ ಶೇ 18ರಷ್ಟು ಮಾತ್ರ ಇದೆ. ಒಂದು ದಶಕದಲ್ಲಿ ಶೇ 10ರಷ್ಟು ಅರಣ್ಯ ಪ್ರದೇಶ ಕಡಿಮೆಯಾಗಿದೆ.’
ಮುಂದಿನ ತಲೆಮಾರಿನವರು ಮಳೆ ಪ್ರಮಾಣದ ಏರುಪೇರಿನಿಂದಾಗಿ ನೀರಿನ ಸಮಸ್ಯೆ ಎದುರಿಸಲಿದ್ದಾರೆ. ಅಕಾಲಿಕ ಮಳೆಯಿಂದ ಕೃಷಿ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಮೂರ್ನಾಲ್ಕು ತಿಂಗಳಲ್ಲಿ ಸುರಿಯಬೇಕಾದ ಮಳೆ ಕೆಲವು ಕಡೆ ಮೂರ್ನಾಲ್ಕು ದಿನಗಳಲ್ಲೇ ಸುರಿದು ನೆರೆ ಉಂಟುಮಾಡುತ್ತಿದೆ. ಇದು ಬೆಳೆಗಳ ಪ್ರಮಾಣ ಕುಸಿಯಲು ಕಾರಣವಾಗಲಿದೆ. ಶ್ರೀಲಂಕಾದಂತೆ ಬೇರೆ ದೇಶಗಳ ಮೇಲೆ ಆಹಾರ ಉತ್ಪನ್ನಗಳಿಗೆ ಅವಲಂಬಿಸಬೇಕಾದ ಪರಿಸ್ಥಿತಿ ಭಾರತಕ್ಕೂ ಮುಂದೆ ತಲೆದೋರಬಹುದು ಎಂದು ಅವರು ಎಚ್ಚರಿಸಿದರು.
ಇತ್ತೀಚಿನ ವರ್ಷಗಳಲ್ಲಿ ಜಗತ್ತಿನ ವಿವಿಧೆಡೆ ಮಳೆಯ ಏರುಪೇರಿನ ಸಮಸ್ಯೆ ಉಲ್ಬಣಿಸಿದೆ. ಕಳೆದ ವರ್ಷ ಅಕ್ಟೋಬರ್–ಡಿಸೆಂಬರ್ ಅವಧಿಯಲ್ಲಿನ ಮಳೆ ಪ್ರಮಾಣ ಕರ್ನಾಟಕದಲ್ಲಿ ಶೇ 60ರಷ್ಟು ಕಡಿಮೆಯಾಗಿದೆ. ಮಳೇ ಸುರಿಯುವ ಹದದಲ್ಲಿ ವ್ಯಾಪಕವಾದ ಬದಲಾವಣೆ ಆಗಿರುವುದಕ್ಕೆ ಇದೇ ಉದಾಹರಣೆ ಎನ್ನುತ್ತಾರೆ ಹವಾಮಾನ ತಜ್ಞ ಹಾಗೂ ಪಶ್ಚಿಮ ಘಟ್ಟ ಕಾರ್ಯಪಡೆಯ ಮಾಜಿ ಸದಸ್ಯ ಬಿ.ಎಂ. ಕುಮಾರಸ್ವಾಮಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.