ಶಿವಮೊಗ್ಗ: ಅಖಿಲ ಭಾರತ ಕವಯಿತ್ರಿ ಸಮ್ಮೇಳನವನ್ನು ನ.22, 23 ಹಾಗೂ 24ರಂದು ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮ್ಮೇಳನದ ಸಂಯೋಜಕಿ ಜಿ.ಎಸ್. ಸರೋಜಾ ತಿಳಿಸಿದರು.
‘ಸಮ್ಮೇಳನದಲ್ಲಿ ಬಹುಭಾಷಾ ಕವಿಗೋಷ್ಠಿ, ಶೋಧಪತ್ರ ಪ್ರಸ್ತುತಿ, ವಿಚಾರ ಸಂಕಿರಣ, ಮಹಿಳಾ ಯುವಗೋಷ್ಠಿ, ಪುಸ್ತಕಗಳ ಬಿಡುಗಡೆ, ಪಾರಂಪರಿಕ ಹಾಗೂ ಆಧುನಿಕ ಸಾಂಸ್ಕೃತಿಕ ಕಾರ್ಯಕ್ರಮ, ವೈವಿಧ್ಯಮಯ ಸಂಸ್ಕೃತಿ ಆಚಾರ ವಿಚಾರಗಳ ಕೊಡುಕೊಳ್ಳುವಿಕೆ, ಭಾಷಾ ಸಾಮರಸ್ಯ, ರಾಷ್ಟ್ರೀಯ ಏಕತೆ ಕುರಿತಾಗಿ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸಮ್ಮೇಳನದಲ್ಲಿ ವಿವಿಧ ರಾಜ್ಯ ಹಾಗೂ ವಿಭಿನ್ನ ಭಾಷೆಗಳ 500ಕ್ಕೂ ಹೆಚ್ಚು ಲೇಖಕಿಯರು ಪಾಲ್ಗೊಳ್ಳಲಿದ್ದಾರೆ. ನೇಪಾಳ, ಬಾಂಗ್ಲಾ, ಕೆನಡಾ, ಇಂಗ್ಲೆಂಡ್, ಆಸ್ಟ್ರೇಲಿಯಾದಿಂದಲೂ ಲೇಖಕಿಯರು ಭಾಗವಹಿಸಲಿದ್ದಾರೆ. ಇದೊಂದು ಶಿವಮೊಗ್ಗದ ಸಾರಸತ್ವ ಲೋಕದ ಇತಿಹಾಸದಲ್ಲಿ ಅಪೂರ್ವ ಸಮಾವೇಶವಾಗಲಿದೆ. ಸಮ್ಮೇಳನದಲ್ಲಿ 24 ಭಾಷೆಯ ಪುಸ್ತಕಗಳು ಹಾಗೂ ಕನ್ನಡದ ವಿವಿಧ ಪ್ರಕಾರಗಳ 24 ಪುಸ್ತಕಗಳು ಬಿಡುಗಡೆಯಾಗಲಿವೆ ಎಂದರು.
ನ.21ರಂದು ಅಕ್ಕಮಹಾದೇವಿಯ ಜನ್ಮಸ್ಥಳ ಉಡತಡಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಸಮ್ಮೇಳನದ ಜ್ಯೋತಿ ಬೆಳಗಿಸಲಿದ್ದಾರೆ. ನ.22ರಂದು ಬೆಳಿಗ್ಗೆ 9.30ಕ್ಕೆ ಶಿವಮೊಗ್ಗದ ಶಿವಮೂರ್ತಿ ವೃತ್ತದಲ್ಲಿ ಎಸ್‌ಪಿ ಮಿಥುನ್‌ಕುಮಾರ್ ಜ್ಯೋತಿಯನ್ನು ಸ್ವಾಗತಿಸಲಿದ್ದಾರೆ. ಅಂದು ಬೆಳಿಗ್ಗೆ 11ಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಮ್ಮೇಳನ ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಜಿಲ್ಲೆಯ ಶಾಸಕರು ಉಪಸ್ಥಿತರಿರುತ್ತಾರೆ ಎಂದರು.
ಸಮ್ಮೇಳನದಲ್ಲಿ 85 ಕವಯಿತ್ರಿಯರಿಗೆ ನಗದು ಬಹುಮಾನ ನೀಡಲಾಗುವುದು. 9 ಜನರಿಗೆ ಸುಲಭ ಸಾಹಿತ್ಯ ಅಕಾಡೆಮಿಯವರು ಸನ್ಮಾನಿಸುವರು. ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಎಸ್.ವಿ.ಚಂದ್ರಕಲಾ, ಕವಯಿತ್ರಿ ಸವಿತಾ ನಾಗಭೂಷಣ್, ಉಷಾ, ಗಾಯತ್ರಿ ದೇವಸಜ್ಜನ್ ಅವರನ್ನು ಸನ್ಮಾನಿಸಲಾಗುವುದು ಎಂದರು.
ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಕವಿಗೋಷ್ಠಿಗಳು ನಡೆದ ಸಂಜೆ 6ರಿಂದ 8ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷೆ ಪ್ರೊ.ಪಿ.ಆರ್. ಮಮತಾ, ಉಪಾಧ್ಯಕ್ಷೆ ಉಷಾ ನಟೇಶ್, ವಾರಿಜಾ ಜಗದೀಶ್, ಖಜಾಂಚಿ ಪಿ.ಎನ್. ಸರಸ್ವತಿ ಪ್ರಮುಖರಾದ ಕವಿತಾ, ಎಚ್.ಕೆ. ಅನುರಾಧಾ, ಮಾಲಿನಿ ಕಾನಡೆ, ಮಾಲಾ ರಾಮಚಂದ್ರ, ವಾಣಿ ಭಂಡಾರಿ, ಜಿ.ಕೆ.ಸಾವಿತ್ರಮ್ಮ, ಭಾರತಿ ರಾಮಕೃಷ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.