ADVERTISEMENT

ಉಡುತಡಿ| 51 ಅಡಿ ಎತ್ತರದ ಅಕ್ಕ ಮಹಾದೇವಿ ಮೂರ್ತಿ ಲೋಕಾರ್ಪಣೆ :ಬಿಎಸ್‌ವೈ ಭಾಗಿ

51 ಅಡಿಯ ಅಕ್ಕಮಹಾದೇವಿ ಪ್ರತಿಮೆ ಲೋಕಾರ್ಪಣೆ

ವೆಂಕಟೇಶ ಜಿ.ಎಚ್.
Published 17 ಮಾರ್ಚ್ 2023, 11:06 IST
Last Updated 17 ಮಾರ್ಚ್ 2023, 11:06 IST

ಶಿರಾಳಕೊಪ್ಪ: ’ಎನ್ನ ಪ್ರಾಣ ಜಂಗಮ, ಜೀವ ಜಂಗಮ, ಪುಣ್ಯದ ಫಲವು ಜಂಗಮ ಎನ್ನ ಹರುಷದ ಮೇರೆ ಚೆನ್ನಮಲ್ಲಿಕಾರ್ಜುನಾ.. ಎಂದು ಸಾರಿದ ಶರಣೆ ಮಹಾದೇವಿ ಅಕ್ಕ, ತನ್ನ ಹುಟ್ಟೂರು, ಶಿಕಾರಿಪುರ ತಾಲ್ಲೂಕಿನ ಉಡುತಡಿಯ ಬಯಲಲ್ಲಿ ಈಗ ಸ್ಥಾವರ ರೂಪಿಯಾಗಿ ಒಡಮೂಡಿದ್ದಾಳೆ.

ಇಷ್ಟಲಿಂಗ ಹಿಡಿದ ಮಂದಸ್ಮಿತೆ ಅಕ್ಕನ (ಅಕ್ಕ ಮಹಾದೇವಿ) 51 ಅಡಿಯ ಪ್ರತಿಮೆಯ ಲೋಕಾರ್ಪಣೆ ಶುಕ್ರವಾರ ನಡೆಯಲಿದೆ. ಅಕ್ಕನ ಮೂಲ ನೆಲೆ ಉದ್ದರಿಸಬೇಕು ಎಂಬ ಬಹುದಿನದ ಕೂಗಿಗೆ ಮುಖ್ಯಮಂತ್ರಿ ಆಗಿದ್ದಾಗ ಓಗೊಟ್ಟ ಕ್ಷೇತ್ರದ ಶಾಸಕ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಅನುಭಾವಿಯೊಬ್ಬಳಿಗೆ ಬೃಹತ್‌ ಪ್ರತಿಮೆಯ ಗೌರವ ನೀಡಿದ ಶ್ರೇಯಕ್ಕೆ ಉಡುತಡಿಯ ಬಯಲು ಸಾಕ್ಷಿಯಾಗಲಿದೆ.

ಪ್ರಗತಿಯಲ್ಲಿ ಕಾಮಗಾರಿ: ಉಡುತಡಿಯಲ್ಲಿ ₹ 69 ಕೋಟಿ ವೆಚ್ಚದಲ್ಲಿ ಅಕ್ಕಮಹಾದೇವಿಯ ಪ್ರತಿಮೆ, ದೆಹಲಿಯ ‘ಅಕ್ಷರ ಧಾಮ’ದ ಮಾದರಿಯಲ್ಲಿ ಉದ್ಯಾನವನ, ಸುತ್ತಲೂ ಕಂದಕ ಅದರಲ್ಲಿ ಬೋಟಿಂಗ್ ವ್ಯವಸ್ಥೆ, ಅಕ್ಕನ ಬದುಕಿನ ಎಂಟು ಕಥನಗಳ ಮೇಲೆ ಬೆಳಕು ಚೆಲ್ಲುವ 600 ಅಡಿ ಉದ್ದದ ಗವಿ, ಕೌಶಿಕ ಮಹಾರಾಜನ ಅರಮನೆಯ ಕೋಟೆ ಗೋಡೆ, 30 ಶರಣರ ಮಂಟಪಗಳ ನಿರ್ಮಿಸಲಾಗುತ್ತಿದೆ. ಇದರಲ್ಲಿ ಪ್ರತಿಮೆ ಹಾಗೂ ಗೋಡೆಯ ಕಾಮಗಾರಿ ಮಾತ್ರ ಪೂರ್ಣಗೊಂಡಿದೆ. ಉಳಿದ ಕೆಲಸಗಳು ಇನ್ನೂ ಪ್ರಗತಿಯಲ್ಲಿವೆ. ‘ಪ್ರಜಾವಾಣಿ’ ಗುರುವಾರ ಸ್ಥಳಕ್ಕೆ ಭೇಟಿ ನೀಡಿದಾಗ ಪ್ರತಿಮೆಗೆ ಬಣ್ಣದ ಅಂತಿಮ ಸ್ಥರ್ಶ ನೀಡುವಲ್ಲಿ ಕೆಲಸಗಾರರು ನಿರತರಾಗಿದ್ದರು.

ADVERTISEMENT

ಎರಡು ದಶಕಗಳ ಹೋರಾಟ: ‘ಉಡುತಡಿ ಅಂತರರಾಷ್ಟ್ರೀಯ ಮನ್ನಣೆಯ ಕ್ಷೇತ್ರವಾಗಬೇಕು ಎಂಬ ನಮ್ಮ ಆಶಯ ಎರಡು ದಶಕಗಳ ನಂತರ ಈಡೇರುತ್ತಿದೆ. ಸಂಸ್ಥೆ ಪ್ರವಾಸಿ ತಾಣವಾಗುವ ಜೊತೆಗೆ ಇಲ್ಲಿ ಅಕ್ಕನ ತಾತ್ವಿಕತೆಯೂ ಉಳಿಯಬೇಕು. ಅದಕ್ಕೆ ಅಗತ್ಯವಿರುವ ಎಲ್ಲ ಕಾರ್ಯ ಕೈಗೆತ್ತಿಕೊಳ್ಳಲಾಗುವುದು’ ಎಂದು ಉಡುತಡಿಯ ಅಕ್ಕಮಹಾದೇವಿ ಸಮಿತಿ ಅಧ್ಯಕ್ಷರೂ ಆದ ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಹೇಳಿದರು.

‘20 ವರ್ಷಗಳ ಹಿಂದೆ ನಾನು ಇಲ್ಲಿಗೆ ಬಂದಾಗ ಇದು ಕಗ್ಗಾಡು ಆಗಿತ್ತು. ಒತ್ತುವರಿಗೆ ತುತ್ತಾಗಿತ್ತು. 10 ಎಕರೆ ಭೂಮಿಯನ್ನು ರಕ್ಷಿಸಿಕೊಂಡು ಬಂದಿದ್ದೆವು. ಅದು ಈಗ ಅಭಿವೃದ್ಧಿಯ ಘಮಲು ಕಂಡಿರುವುದು ಸಂತಸ ಮೂಡಿಸಿದೆ’ ಎಂದು ಲೀಲಾದೇವಿ ಹೇಳಿದರು. ಅವರ ಒತ್ತಾಸೆಯ ಫಲವಾಗಿ ಉಡುತಡಿಯಲ್ಲಿ ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರ ಕೂಡ ಆರಂಭವಾಗಿದೆ.

ಮಹಾದೇವಿ ಶಿಲ್ಪಿ, ಶಿವಮೊಗ್ಗದ ಶ್ರೀಧರ ಮೂರ್ತಿ:

ಬೀದರ್‌ ಜಿಲ್ಲೆ ಬಸವ ಕಲ್ಯಾಣದಲ್ಲಿ 108 ಅಡಿಯ ಬಸವೇಶ್ವರ ಪ್ರತಿಮೆ, ಮುರುಡೇಶ್ವರದಲ್ಲಿ 108 ಅಡಿಯ ಶಿವನ ಪ್ರತಿಮೆ ತಯಾರಿಸಿರುವ ಶಿವಮೊಗ್ಗದ ಶಿಲ್ಪಿ ಶ್ರೀಧರಮೂರ್ತಿ, ಅಕ್ಕಮಹಾದೇವಿಯ ಪ್ರತಿಮೆಯನ್ನು ಸಿಮೆಂಟ್‌ ಕಾಂಕ್ರೀಟ್‌ನಲ್ಲಿ ನಿರ್ಮಿಸಿದ್ದಾರೆ.

51 ಅಡಿಯ ಪ್ರತಿಮೆಯ ರಕ್ಷಣೆಗೆ 14 ಅಡಿಯ ಸ್ತಂಭ ನಿರ್ಮಿಸಲಾಗಿದೆ. ಅದಕ್ಕೆ ಕಂಚಿನ ಬಣ್ಣ ಬಳಿದಿದ್ದು ಪ್ರತಿಮೆ ಒಟ್ಟು 500 ಟನ್ ಭಾರವಿದೆ. ‘ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಒಂದೂವರೆ ವರ್ಷ ಸಮಯ ತೆಗೆದುಕೊಂಡಿದ್ದೇವೆ. ಇಲ್ಲಿನ ಎಲ್ಲ ಕಾಮಗಾರಿ ಸಂಪೂರ್ಣವಾಗಿ ಪೂರ್ಣಗೊಳ್ಳಲು ಇನ್ನೂ ಮೂರು ತಿಂಗಳು ಕಾಲಾವಕಾಶ ಬೇಕಿದೆ’ ಎಂದು ಕಾಮಗಾರಿ ಉಸ್ತುವಾರಿ ವಹಿಸಿಕೊಂಡಿರುವ ಎಂಜಿನಿಯರ್ ನಾಗಭೂಷಣ್ ತಿಳಿಸಿದರು.

ಉಡುತಡಿ ಕಂದಕಕ್ಕೆ ತುಂಗಭದ್ರೆ ನೀರು:

ಅಕ್ಕಮಹಾದೇವಿಯ ಪುತ್ಥಳಿ ಹಾಗೂ ಉಡುತಡಿಯ ಪರಿಸರದ ಸುತ್ತಲೂ ನಿರ್ಮಿಸಿರುವ ಕಂದಕಕ್ಕೆ ತುಂಗಭದ್ರೆಯ ನೀರು
ಹರಿಸಲಾಗುತ್ತಿದೆ.

ಹಿರೇಕೆರೂರು ತಾಲ್ಲೂಕಿನ ಪುರದಕೆರೆಯ ಬಳಿ ತುಂಗಾಭದ್ರಾ ನದಿಯಿಂದ ಏತನೀರಾವರಿ ಮೂಲಕ ತಾಳಗುಂದ, ಉಡುಗಣಿ, ಹೊಸೂರು ಹೋಬಳಿಯ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಅಲ್ಲಿಂದ ಪೈಪ್‌ಲೈನ್ ಮೂಲಕ ನಿರಂತರವಾಗಿ ಕಂದಕಕ್ಕೆ ನೀರು ಹರಿಸುವ ವ್ಯವಸ್ಥೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.