ಹೊಳೆಹೊನ್ನೂರು: ಸಮೀಪದ ಅರಬಿಳಚಿ ವಡ್ಡರಹಟ್ಟಿಯ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ವರದಕ್ಷಿಣೆ ವಿಚಾರದಲ್ಲಿ ಮದುವೆಗೆ ನಿರಾಕರಿಸಿರುವ ವರ ಸುನೀಲ್‌ನನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ವಧುವಿನ ಕಡೆಯವರು ಬುಧವಾರ ಪಟ್ಟಣದ ಪೊಲೀಸ್ ಠಾಣೆ ಮುಂಭಾಗ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪೊಲೀಸರು ಆರೋಪಿಯನ್ನು ಬಂಧಿಸುವುದಾಗಿ ಹೇಳಿದ್ದರು. ಆರೋಪಿಯ ಪತ್ತೆಗಾಗಿ ಬುಧವಾರ ಚನ್ನಗಿರಿ ಭಾಗದಲ್ಲಿ ಹುಡುಕಾಟ ನಡೆಸಿದ್ದರು. ಪೊಲೀಸರಿಗೆ ಆರೋಪಿ ಸುನೀಲ್ ಹಾಗೂ ಆತನ ಅಕ್ಕ ಇರುವ ಜಾಗದ ಬಗ್ಗೆ ಖಚಿತ ಮಾಹಿತಿ ನೀಡಿದ್ದರೂ ಪೊಲೀಸರು ಆರೋಪಿಗಳ ಬಂಧನ ಮಾಡುತ್ತಿಲ್ಲ ಎಂದು ಆರೋಪಿಸಿ ಠಾಣೆ ಎದುರು ಧರಣಿ ನಡೆಸುತ್ತಿದ್ದಾರೆ.
ಪ್ರತಿಭಟನಕಾರೊಂದಿಗೆ ಮಾತನಾಡಿದ ದಲಿತ ಮುಖಂಡ ತಿಮ್ಲಾಪುರದ ಲೊಕೇಶಪ್ಪ, ಪೊಲೀಸರು ಆರೋಪಿ ಸುನೀಲನ ಅಕ್ಕನಿಗೆ ನೋಟಿಸ್ ನೀಡಿದ್ದಾರೆ. ಕೆಲ ದಿನಗಳಲ್ಲೇ ಆರೋಪಿಯನ್ನು ಬಂಧಿಸಲಿದ್ದಾರೆ ಎಂದು ಹೇಳಿ ಪ್ರತಿಭಟನಕಾರರನ್ನು ಮನವೊಲಿಸಿ ವಾಪಸ್ ಕಳಿಸಿದ್ದರು.
ಚನ್ನಗಿರಿ ತಾಲ್ಲೂಕಿನ ಬೆಟ್ಟದ ಕಡೂರು ಗ್ರಾಮದ ಸುನೀಲ್ ಕುಮಾರ್ ಮದುವೆ ಬೇಡವೆನ್ನುತ್ತಿರುವ ಯುವಕ. ಜನವರಿ 18ರಂದು ಬೆಟ್ಟ ಕಡೂರು ಗ್ರಾಮದ ಸುನೀಲ್ ಜತೆ ಅರಬಿಳಚಿ ವಡರಹಟ್ಟಿಯ ಯುವತಿಯ ನಿಶ್ಚಿತಾರ್ಥವಾಗಿತ್ತು. ಇದೇ ಏ.15 ರಂದು ನಾಗತಿಬೆಳಗಲಿನ ನಂಜುಂಡೇಶ್ವರ ಕಲ್ಯಾಣ ಮಂಟಪದಲ್ಲಿ ವಿವಾಹ ನಿಗದಿಯಾಗಿತ್ತು. ಸುನೀಲನಿಗೆ ನಿಶ್ಚಿತಾರ್ಥ ದಿನವೇ ಹುಡುಗಿ ಮನೆಯವರು 30 ಗ್ರಾಂ ತೂಕದ ಬಂಗಾರದ ಬ್ರಾಸ್‌ಲೆಟ್ ಹಾಗೂ 5 ಗ್ರಾಂ ತೂಕದ ಉಂಗುರ ನೀಡಿದ್ದರು.
ಮದುವೆಗೆ ಕೆಲ ದಿನಗಳು ಬಾಕಿ ಇರುವಾಗ ವರನ ಅಕ್ಕ ಹೆಚ್ಚಿನ ವರದಕ್ಷಿಣೆ ಕೊಡುವಂತೆ ಹುಡುಗಿ ತಂದೆಗೆ ಕೇಳಿದ್ದಾಳೆ ಎಂದು ಆರೋಪಿಸಲಾಗಿದೆ. ಮತ್ತೆ ಹಣ ಒಪ್ಪದ ಕಾರಣ ಮದುವೆ ಇಷ್ಟವಿಲ್ಲ ಎಂದು ಹೇಳಿರುವ ವರ, ಕಳೆದ ಹದಿನೈದು ದಿನದಿಂದ ಫೋನ್ ಕರೆ ಸ್ವೀಕರಿಸುತ್ತಿಲ್ಲ. ಯಾರೋಬ್ಬರ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನಲಾಗಿದೆ. ಯುವತಿ ಕಡೆಯವರು ವರನಿಗಾಗಿ ಬೆಟ್ಟಕಡೂರು ಸೇರಿದಂತೆ ನೆಂಟರು, ಸಂಬಂಧಿಕರ ಊರಿನಲ್ಲಿ ಹುಡುಕಾಟ ನಡೆಸಿದರೂ ಪ್ರಯೋಜವಾಗಿರಲಿಲ್ಲ.
ಕೂಲಿ ಮಾಡಿ ಜೀವನ ಮಾಡುತ್ತಿರುವ ಯುವತಿಯ ಪಾಲಕರು, ಇರುವ ಒಬ್ಬ ಮಗಳಿಗೆ ಉತ್ತಮ ಸಂಬಂಧ ನೋಡಿ ಮದುವೆ ಮಾಡಿಕೊಡುವ ಸಲುವಾಗಿ ಸ್ಥಳೀಯರಿಂದ ₹8ರಿಂದ ₹10 ಲಕ್ಷ ಸಾಲ ಮಾಡಿ, ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದರು. ವರ ಸುನೀಲ್ ಹಾಗೂ ವರನ ಅಕ್ಕನ ವಿರುದ್ಧ ಯುವತಿಯ ತಂದೆ ಹೊಳೆಹೊನ್ನೂರು ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದರು.
ಆರೋಪಿ ಸುನೀಲ್‌ನನ್ನು ಬಂಧಿಸಲು ಮುಂದಾಗದ ಪೊಲೀಸರ ನಡೆ ಖಂಡಿಸಿ ಯುವತಿಯ ಕಡೆಯವರು ಎರಡು ದಿನಗಳಿಂದ ಠಾಣೆ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.