ಸಾಗರ: ಭ್ರಷ್ಟಾಚಾರದ ಆರೋಪ ಕುರಿತಂತೆ ಶಾಸಕ ಎಚ್.ಹಾಲಪ್ಪ ಹರತಾಳು ಹಾಗೂ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ನಡುವೆ ಮಂಗಳವಾರವೂ ವಾಕ್ಸಮರ ಮುಂದುವರಿದಿದೆ.
‘ಹಾಲಪ್ಪ ಅವರು ಮರಳು ಸಾಗಣೆದಾರರು, ಗುತ್ತಿಗೆದಾರರು, ಮಟ್ಕಾ ದಂಧೆಯವರಿಂದ ಹಣ ಪಡೆಯುತ್ತಿದ್ದಾರೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಬೇಳೂರು ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಹಾಲಪ್ಪ ಅವರು, ‘ನಾನು ಪಡೆಯುತ್ತಿರುವುದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಸವಾಲು ಹಾಕಿದ್ದರು.
ಮಂಗಳವಾರ ತಾಲ್ಲೂಕು ಕಚೇರಿ ನೂತನ ಕಟ್ಟಡ ಕಾಮಗಾರಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹಾಲಪ್ಪ ಹರತಾಳು, ‘ನನ್ನ ಮಗನಿಗೆ ಮಾಸಿಕ ₹ 4.90 ಲಕ್ಷ ಸಂಬಳ ಬರುತ್ತದೆ. ನಾನು ತೆರಿಗೆ ಕಟ್ಟುವ ಆದಾಯದ ಹಣವೇ ದಿನಕ್ಕೆ ₹ 20 ಸಾವಿರದಿಂದ ₹ 30 ಸಾವಿರದಷ್ಟಿದೆ. ಹೀಗಿರುವಾಗ ಲಂಚದ ಹಣಕ್ಕೆ ಕೈಚಾಚುವ ಅಗತ್ಯವೇ ಇಲ್ಲ’ ಎಂದರು.
‘ಈ ಹಿಂದೆ ಶಾಸಕರಾಗಿದ್ದವರು (ಬೇಳೂರು) ಗಣಪತಿ ಗುಡಾಜಿ ಎಂಬ ಸರ್ಕಲ್ ಇನ್‌ಸ್ಪೆಕ್ಟರ್ ಮೂಲಕ ಯಾವ ರೀತಿ ಭ್ರಷ್ಟಾಚಾರ ನಡೆಸಿದ್ದರು ಎಂಬುದು ಕ್ಷೇತ್ರದ ಜನರಿಗೆ ಗೊತ್ತಿದೆ. ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಮರಳಿನ ಬೆಲೆ ಎಷ್ಟಿತ್ತು, ಈಗ ಎಷ್ಟಿದೆ ಎಂಬುದನ್ನು ಗಮನಿಸಿದರೆ ಯಾರ ಅವಧಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿತ್ತು ಎಂಬುದು ಸ್ಪಷ್ಟವಾಗುತ್ತದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅಕ್ರಮ ಮರಳು ಸಾಗಾಣಿಕೆ ಹೆಸರಿನಲ್ಲಿ 300 ಜನರನ್ನು ಜೈಲಿಗೆ ಕಳುಹಿಸಿದ್ದೇ ಆ ಪಕ್ಷದ ಮುಖಂಡರ ಸಾಧನೆಯಾಗಿದೆ’ ಎಂದು ಟೀಕಿಸಿದರು.
‘ಯಾವುದೇ ಕಾಮಗಾರಿಯನ್ನು ಗುಣಮಟ್ಟದಿಂದ ನಿರ್ವಹಿಸಿ ಎಂದು ಗುತ್ತಿಗೆದಾರರಿಗೆ ಹೇಳಿದರೆ ನಾನು ಕಮಿಷನ್ ಕೇಳಿದೆ ಎಂದು ಆರೋಪಿಸುವುದು ಸಾಮಾನ್ಯ ಸಂಗತಿಯಾಗಿದೆ. ಅಧಿಕಾರವಿದ್ದಾಗ ಮಲದಲ್ಲಿ ಬಿದ್ದ ದುಡ್ಡನ್ನು ನೆಕ್ಕಿದವರು ನನ್ನ ವಿರುದ್ಧ ವೃಥಾ ಆರೋಪ ಮಾಡುತ್ತಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.