ADVERTISEMENT

ಶಿವಮೊಗ್ಗ: ಜಾತಿ-ಮತ ಬಿಡಿ, ಮಾನವತೆಗೆ ಜೀವ ಕೊಡಿ

ಡಾ.ಬಿ.ಆರ್. ಅಂಬೇಡ್ಕರ್ ಆಶಯ ಪುನರುಚ್ಚರಿಸಿದ ಪ್ರೊ.ಮಹಾದೇವಸ್ವಾಮಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2023, 9:45 IST
Last Updated 15 ಏಪ್ರಿಲ್ 2023, 9:45 IST
ಶಿವಮೊಗ್ಗದಲ್ಲಿ ಶುಕ್ರವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹಾಗೂ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಉದ್ಘಾಟಿಸಿದರು
ಶಿವಮೊಗ್ಗದಲ್ಲಿ ಶುಕ್ರವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹಾಗೂ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಉದ್ಘಾಟಿಸಿದರು   

ಶಿವಮೊಗ್ಗ: ಜಾತಿ, ಮತ ಬಿಡಿ. ಮಾನವತೆಗೆ ಜೀವ ಕೊಡಿ ಎನ್ನುವ ಮೂಲಕ ಡಾ.ಬಿ.ಆರ್. ಅಂಬೇಡ್ಕರ್‌ ಅವರು ಜಾತಿ-ಮತ ಮೀರಲು ಅವಶ್ಯಕವಾದ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಕುರಿತು ಸ್ಪಷ್ಟ ಚಿತ್ರಣ ನೀಡಿದ್ದರು ಎಂದು ಸಹ್ಯಾದ್ರಿ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಮಹಾದೇವಸ್ವಾಮಿ ತಿಳಿಸಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.

‘ಮೂಲ ನಿವಾಸಿ, ಅನ್ಯ ನಿವಾಸಿಗಳಿಬ್ಬರ ನಡುವಿನ ಸಾಮಾಜಿಕ ಅಂತರವೇ ಜಾತಿ. ಮತ ಎನ್ನುವುದು ಮನುಷ್ಯನನ್ನು ಮನುಷ್ಯನನ್ನಾಗಿ ನೋಡುವುದೇ ವಿನಾ ಪ್ರಾಣಿಗಳಿಗಿಂತ ಕೀಳಾಗಿ ಕಾಣುವುದಲ್ಲ. ಪರಸ್ಪರ ವ್ಯಕ್ತಿ ಗೌರವ, ಆರ್ಥಿಕ, ಸಾಮಾಜಿಕ ಸಮಾನತೆ ನೀಡುವುದೇ ಉತ್ತಮ ಶಿಕ್ಷಣ’ ಎಂದರು.

ADVERTISEMENT

‘ಜಾತಿ, ಮತದಾಚೆ ಬದುಕಲು ಕಲಿಸುವುದೇ ಸಂಘಟನೆ. ನೈತಿಕತೆ ಎಂಬುದು ನಾವು ರೂಢಿಸಿಕೊಳ್ಳುವ ವಿಧಾನ. ಆರ್ಥಿಕ, ಸಾಮಾಜಿಕ ಜನತಂತ್ರ ರೂಪುಗೊಳ್ಳಲು ನೈತಿಕ ವಿಧಾನದಲ್ಲಿ ಸಮಾಜ ಕಟ್ಟುವ ಕೆಲಸವೇ ಹೋರಾಟ’ ಎಂದಿದ್ದರು ಅಂಬೇಡ್ಕರ್.

ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಮಾತನಾಡಿ, ‘ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ನಮ್ಮ ಜನತಂತ್ರ ವ್ಯವಸ್ಥೆ ಇಷ್ಟು ಗಟ್ಟಿಯಾಗಿರಲು ಕಾರಣ ಅಂಬೇಡ್ಕರ್ ಅವರು. ಅವರು ಕೇವಲ ನಮಗೆ ಸಂವಿಧಾನ ಮಾತ್ರ ನೀಡಿಲ್ಲ ಸದೃಢ ಅರ್ಥವ್ಯವಸ್ಥೆ ಬಗ್ಗೆ ಮುಂದಾಲೋಚನೆ ಮಾಡಿ ಒಳನೋಟವನ್ನು ನೀಡಿದ್ದಾರೆ’ ಎಂದರು.

‘ಸಂವಿಧಾನ ಜಾರಿಯಾದ ಮೊದಲ ದಿನವೇ ಎಲ್ಲರಿಗೂ ಸಮಾನವಾಗಿ ಮತದಾನದ ಹಕ್ಕನ್ನು ನೀಡಲಾಗಿದೆ. ಇದೊಂದು ದೊಡ್ಡ ಸಾಧನೆಯೇ ಸರಿ. ಏಕೆಂದರೆ ಎಷ್ಟೋ ಮುಂದುವರಿದ ರಾಷ್ಟ್ರಗಳು ಮಹಿಳೆಯರಿಗೆ ಮತದಾನದ ಹಕ್ಕು ನೀಡಿರಲಿಲ್ಲ. ಆದರೆ ನಮ್ಮ ಸಂವಿಧಾನ ಜಾರಿಯಾದಾಗಿನಿಂದ ಎಲ್ಲರಿಗೂ ಸಮಾನವಾಗಿ ಮತದಾನದ ಹಕ್ಕನ್ನು ನೀಡಿದೆ. ನಾವೆಲ್ಲರೂ ಇದರ ಉಪಯೋಗ ಪಡೆಯಬೇಕು’ ಎಂದರು.

ಎಸ್‌ಪಿ ಜಿ.ಕೆ. ಮಿಥುನ್ ಕುಮಾರ್ ಮಾತನಾಡಿ, ‘ಅಂಬೇಡ್ಕರ್‌ ಅವರ ಬಗ್ಗೆ ಮಾತನಾಡುವುದೇ ಹೆಮ್ಮೆಯ ವಿಚಾರ. ಅವರು ಎಂದಿಗೂ ಸ್ಮರಣೀಯ. ಹಿಂದುಳಿದವರು, ಬಡವರು ಮತ್ತು ಮಹಿಳೆಯರಿಗೆ ಶಿಕ್ಷಣದ ಅಗತ್ಯದ ಬಗ್ಗೆ ಒತ್ತಿ ಹೇಳಿದ್ದರು’ ಎಂದು ಹೇಳಿದರು.

‘ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ನೂರಾರು ಕ್ಷೇತ್ರಗಳ ಬಗ್ಗೆ ಅವರು ಅಧ್ಯಯನ ಮಾಡಿ ಬರೆದಿದ್ದಾರೆ. ಅದನ್ನು ಓದಿ ಅರ್ಥ ಮಾಡಿಕೊಂಡರೆ ನಮ್ಮ ಜೀವನ ಸಾರ್ಥಕವಾಗುತ್ತದೆ. ಮಾದರಿ ವ್ಯಕ್ತಿತ್ವ ಅವರದ್ದಾಗಿದ್ದು ಅವರೊಬ್ಬ ಜ್ಞಾನ ಭಂಡಾರ. ಅಂತಹ ಮಹಾನ್ ವ್ಯಕ್ತಿಯ ಮೌಲ್ಯಗಳನ್ನು ನಾವು ಅಳವಡಿಸಿಕೊಳ್ಳಬೇಕಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಸ್ನೇಹಲ್ ಎಸ್. ಲೋಖಂಡೆ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್, ದಲಿತ ಸಂಘರ್ಷ ಸಮಿತಿ, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.