ಆನಂದಪುರ: ಜನಪದ ಕಲೆಗಳು ನಶಿಸಿ ಹೋಗುತ್ತಿವೆ ಎಂದು ಒಂದೆಡು ಹೇಳುತ್ತಿರುವಾಗಲೆ ಮಲೆನಾಡಿನಲ್ಲಿ ಕಿನ್ನೂರಿ ಹಿಡಿದು ಊರೂರು ಸುತ್ತುತ್ತ ಬದುಕು ಕಟ್ಟಿಕೊಂಡ ಕಲಾವಿದ ಕೆ.ಗುಡ್ಡಪ್ಪ ಜೋಗಿಗೆ ನಾಡೋಜ ಎಚ್.ಎಲ್.ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಮೂಲತಃ ಅಲೆಮಾರಿಗಳಾದ ಇವರು ಕಿನ್ನೂರಿ ಜೋಗಿಗಳು ಎಂದು ಪ್ರಸಿದ್ದರು. ಗುಡ್ಡಪ್ಪ ಜೋಗಿ ಕುಟುಂಬದವರು ಮೂಲತಃ ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನವರು. ಭಿಕ್ಷಾಟನೆ ಹಾಗೂ ಜಾನಪದ ಹಾಡುಗಳೊಂದಿಗೆ ಊರೂರು ಸುತ್ತುತ್ತ ನೆಲೆಯೂರಿದ್ದು ಮಾತ್ರ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ. ಕಣಿವೆಪ್ಪ ಜೋಗಿ ಹಾಗೂ ಬಸಮ್ಮ ದಂಪತಿ ಪುತ್ರ ಗುಡ್ಡಪ್ಪ ಪ್ರಾಥಮಿಕ ಶಿಕ್ಷಣ ಮಾತ್ರ ಪಡೆದಿದ್ದಾರೆ. ಗುರು ಹಾಗೂ ದೊಡ್ಡಪ್ಪ ಸಿದ್ದಪ್ಪ ಹಾಗೂ ತಂದೆಯಿಂದ ಕಿನ್ನೂರಿವಾದನ ಕಲೆಯನ್ನು ಬಳುವಳಿ ಪಡೆದು ರಾಜ್ಯಾದ್ಯಂತ ಕಲೆಯ ಸೊಬಗನ್ನು ವಿಸ್ತರಿಸಿದ್ದಾರೆ.
ಭಿಕ್ಷಾಟನೆಗೆ ಹೆಚ್ಚು ಒತ್ತು ನೀಡದೆ ಕಿನ್ನೂರಿ ವಾದನ ಕಲೆಗೆ ಹೆಚ್ಚು ಮಹತ್ವ ಸಿಗಬೇಕು ಎಂಬ ಉದ್ದೇಶದಿಂದ ಕಾಲಭೈರವೇಶ್ವರ ಕಲಾತಂಡವ ಕಟ್ಟಿ ವಿವಿಧೆಡೆ ಕಾರ್ಯಕ್ರಮಗಳ ನೀಡಿದ್ದು, ಆಕಾಶವಾಣಿ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದಾರೆ.
ಇವರು ಕಟ್ಟಿದ ಜಾನಪದ ಕಲಾ ತಂಡವು ಸರ್ಕಾರದ ಜನಜಾಗೃತಿ ಯೋಜನೆಗಳ ಕಾರ್ಯಕ್ರಮಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದೆ. ಪ್ರಮುಖವಾಗಿ ಅಕ್ಷರತುಂಗಾ, ಪಲ್ಸ್ ಪೋಲಿಯೋ, ಎಚ್.ಐ.ವಿ ಸೋಂಕು ತಡೆ, ಕ್ಷಯರೋಗ ಹಾಗೂ ಅರಣ್ಯ ಇಲಾಖೆಯ ಪಶ್ಚಿಮಘಟ್ಟ ಕಾಡು ಹಾಗೂ ಕಾಡು ಪ್ರಾಣಿ ಉಳಿಸಿ ಅಭಿಯಾನಕ್ಕೆ ಕಿನ್ನೂರಿ ವಾದನ ಕಲೆ ಜೀವ ತುಂಬಿದೆ.
ಗುಡ್ಡಪ್ಪ ಜೋಗಿ ಅವರು ಗೀಗಿ ಪದ, ಲಾವಣಿ, ಆಶು ಕಥೆಗಳನ್ನು ಸೊಗಸಾಗಿ ಹಾಡುತ್ತಾರೆ. 10 ಸಾವಿರಕ್ಕೂ ಅಧಿಕ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಇವರದ್ದಾಗಿದೆ.
ಇವರ ಕಲೆ ಗುರುತಿಸಿದ ಸರ್ಕಾರ 1999-2000 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. 2005-06 ರಲ್ಲಿ ಬಸಪ್ಪ ಮಾದರ್, ಮಂಗಳೂರು ಸಂದೇಶ್, ಕೀರ್ತನಾಚಾರ್ಯ ಪ್ರಶಸ್ತಿ, ಕರ್ನಾಟಕ ಜಾನಪದ ಪರಿಷತ್ ನೀಡುವ ದೊಡ್ಮನೆ ಲಿಂಗೇಗೌಡ ಪ್ರಶಸ್ತಿ, ಆರ್ಯಭಟ ರಾಷ್ಟ್ರ ಪ್ರಶಸ್ತಿ, ಜಾನಪದ ಆಕಾಡೆಮಿಯ ರಾಜ್ಯ ಪ್ರಶಸ್ತಿ, ಜೋಗಿ ಕಲಾಶ್ರೀ ಪ್ರಶಸ್ತಿ, ನಾಥ ಪಂಥ ಜೋಗಿ ಸಾಧಕ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಚಂದನ ವಾಹಿನಿ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ಕಾರ್ಯಕ್ರಮ ನೀಡುವ ಮೂಲಕ ಕಲೆ ಬೆಳೆಸಿದ್ದಾರೆ.
ಈ ಪ್ರಶಸ್ತಿಯು ₹ 1 ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ಹೊಂದಿದೆ. ನ.22 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿತರಿಸಲಾಗುತ್ತಿದೆ.
‘ಹಳ್ಳಿಯ ಮೂಲೆಯಲ್ಲಿರುವ ನನ್ನನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಸಂತಸದ ವಿಷಯ. ಜಾನಪದ ಕಲಾವಿದನಾಗಿ ಬೆಳೆಯಲು ಅವಕಾಶ ಕಲ್ಪಿಸಿದ ಸಂಘ ಸಂಸ್ಥೆಗಳಿಗೆ ಚಿರಋಣಿಯಾಗಿರುತ್ತೇನೆ’ ಎಂದು ಗುಡ್ಡಪ್ಪ ಜೋಗಿ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.