ADVERTISEMENT

ಶಿವಮೊಗ್ಗ: ಪಕ್ಷಾತೀತವಾಗಿ ಒಟ್ಟಾದರೇ ಬಿಎಸ್‌ವೈ ವಿರೋಧಿಗಳು?

ಶಿಕಾರಿಪುರ ಗಲಾಟೆ: ಒಂದು ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ತಂತ್ರಗಾರಿಕೆ

ವೆಂಕಟೇಶ್ ಜಿ.ಎಚ್
Published 29 ಮಾರ್ಚ್ 2023, 4:59 IST
Last Updated 29 ಮಾರ್ಚ್ 2023, 4:59 IST
ಬಿ.ಎಸ್‌. ಯಡಿಯೂರಪ್ಪ
ಬಿ.ಎಸ್‌. ಯಡಿಯೂರಪ್ಪ    

ಶಿವಮೊಗ್ಗ: ‘ಶಿಕಾರಿಪುರದಲ್ಲಿ ಸೋಮವಾರ ಬಂಜಾರ ಸಮುದಾಯದ ಗಲಾಟೆಗೆ ಕುಮ್ಮಕ್ಕು ನೀಡುವಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ ಕುಟುಂಬದ ವಿರೋಧಿಗಳು ಪಕ್ಷಾತೀತವಾಗಿ ಕೈ ಜೊಡಿಸಿದ್ದಾರೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲಾಗಿದೆ’ ಎಂಬ ಚರ್ಚೆ ಜಿಲ್ಲೆಯ ರಾಜಕೀಯ ಪಡಸಾಲೆಯಲ್ಲಿ ಮುನ್ನೆಲೆಗೆ ಬಂದಿದೆ.

ಸಕ್ರಿಯ ರಾಜಕಾರಣದಿಂದ ನಿವೃತ್ತರಾದ ಯಡಿಯೂರಪ್ಪ, ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಪುತ್ರ ವಿಜಯೇಂದ್ರ ಅವರಿಗೆ ಪಟ್ಟ ಕಟ್ಟುವ ಸಿದ್ಧತೆಯಲ್ಲಿದ್ದಾರೆ. ವಂಶಪಾರಂಪರ್ಯ ರಾಜಕಾರಣ ಎಂಬ ಕಾರಣಕ್ಕೆ ಸ್ಥಳೀಯವಾಗಿ ಪಕ್ಷದಲ್ಲಿಯೇ ಒಂದು ಗುಂಪಿನಿಂದ ಇದಕ್ಕೆ ವಿರೋಧವಿದೆ. ಹೀಗಾಗಿ ಕ್ಷೇತ್ರದಲ್ಲಿ ಯಡಿಯೂರಪ್ಪ ಕುಟುಂಬದ ಹಿಡಿತ ತಪ್ಪಿಸಲು ಹಿತ ಶತ್ರುಗಳೇ ಮೀಸಲಾತಿ ಅಸ್ತ್ರ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ನಿರ್ಣಾಯಕ ಮತಬುಟ್ಟಿ: ಶಿಕಾರಿಪುರ ಕ್ಷೇತ್ರದಲ್ಲಿ ಅಂಜನಾಪುರ ಹೋಬಳಿಯಲ್ಲಿ ಬಂಜಾರ ಸಮುದಾಯದವರು, ಹೊಸೂರು ಹೋಬಳಿಯಲ್ಲಿ ಭೋವಿ ಸಮಾಜದವರು ಗಣನೀಯವಾಗಿದ್ದಾರೆ. ಬಿಜೆಪಿ ಗೆಲುವಿನಲ್ಲಿ ಎರಡೂ ಸಮುದಾಯಗಳು ನಿರ್ಣಾಯಕವಾಗಿವೆ. ಯಡಿಯೂರಪ್ಪ ವ್ಯಕ್ತಿತ್ವದ ಕಾರಣಕ್ಕೆ ಮುಸ್ಲಿಮರಲ್ಲೂ ಒಂದಷ್ಟು ಪಾಲು ಚುನಾವಣೆಯಲ್ಲಿ ಬೆಂಬಲಕ್ಕೆ ನಿಲ್ಲುತ್ತಿ
ದ್ದರು. ‘ಯಡಿಯೂರಪ್ಪಗೆ ಸಾದರೊಂದಿಗೆ ಸಾಬರು ವೋಟು ಹಾಕುತ್ತಾರೆ’ ಎಂಬ ಮಾತು ಜನಜನಿತವಾಗಿದೆ.

ADVERTISEMENT

ಈಗ ಒಳ ಮೀಸಲಾತಿ ಶಿಫಾರಸ್ಸಿನ ನಂತರ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಭೋವಿ ಸಮಾಜದವರು ಮುನಿಸಿಕೊಂಡಿದ್ದರೆ, ಬಂಜಾರ ಸಮುದಾಯ ತನ್ನ ಆಕ್ರೋಶ ಬಹಿರಂಗವಾಗಿಯೇ ಪ್ರಕಟಪಡಿಸಿದೆ. ಇನ್ನು ಬೊಮ್ಮಾಯಿ 2ಬಿ ಮೀಸಲಾತಿ ರದ್ದು ಮಾಡಿದರೂ ಯಡಿಯೂರಪ್ಪ ತಮ್ಮ ಪರ ಚಕಾರ ಎತ್ತಲಿಲ್ಲ ಎಂಬ ಬೇಸರ ಮುಸ್ಲಿಮರಲ್ಲೂ ಒಡಮೂಡಿದೆ.

ವ್ಯವಸ್ಥಿತ ಅಪಪ್ರಚಾರ?: ‘ಮನೆಗೆ ಕಲ್ಲು ಹೊಡೆದ ಘಟನೆ ರಾಜ್ಯದ ವೀರಶೈವ ಲಿಂಗಾಯತ ಸಮುದಾಯದಲ್ಲಿ ಯಡಿಯೂರಪ್ಪ ಪರ ಅನುಕಂಪ ಮೂಡಿಸಿ ಒಂದೆಡೆ ಬಿಜೆಪಿಗೆ ಮತ ಕ್ರೋಢೀಕರಣಕ್ಕೆ ನೆರವಾಗಲಿದೆ. ಇನ್ನೊಂದೆಡೆ ಬಂಜಾರ ಸಮುದಾಯದ ಬಂಡಾಯದಿಂದ ಶಿಕಾರಿಪುರದಲ್ಲಿ ಬಿಜೆಪಿಯ ಮತ ಬ್ಯಾಂಕ್ ಛಿದ್ರಗೊಂಡು ಯಡಿಯೂರಪ್ಪ ಅವರಿಗೆ ಹಿನ್ನಡೆ ಆಗಲಿದೆ ಎಂಬುದು ಗಲಾಟೆ ಹಿಂದಿನ ‘ಹಿತ ಶತ್ರುಗಳ‘ ಲೆಕ್ಕಾಚಾರ.

ಹೀಗಾಗಿಯೇ ಒಳಮೀಸಲಾತಿ ವಿಚಾರಕ್ಕಿಂತ ಬಂಜಾರ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಹೊರಗಿಡಲು ಸರ್ಕಾರ ಮುಂದಾಗಿದೆ ಎಂಬ ಸುಳ್ಳು ಸುದ್ದಿಯನ್ನು ತಾಂಡಾಗಳಲ್ಲಿ ವ್ಯವಸ್ಥಿತವಾಗಿ ಹರಡಲಾಯಿತು. ಇದು ಗಲಭೆಗೆ ಪ್ರಚೋದನೆ ನೀಡಿತು’ ಎಂದು ಯಡಿಯೂರಪ್ಪ ನಿಕಟವರ್ತಿಯೊಬ್ಬರು ಹೇಳುತ್ತಾರೆ.

ಆಕಾಂಕ್ಷಿಗಳಲ್ಲಿ ದಿಗಿಲು..

ಒಳ ಮೀಸಲಾತಿ ವಿಚಾರ ಬಿಜೆಪಿಯಲ್ಲಿ ಬೇಗೆ ಸೃಷ್ಟಿಸಿದೆ. ಶಿಕಾರಿಪುರ, ಶಿವಮೊಗ್ಗ ನಗರ, ಗ್ರಾಮಾಂತರ, ಭದ್ರಾವತಿ, ಸೊರಬ ಕ್ಷೇತ್ರಗಳಲ್ಲಿ ಬಂಜಾರ ಮತ್ತು ಭೋವಿ ಸಮುದಾಯದವರು ಗಣನೀಯವಾಗಿದ್ದಾರೆ. ಇಲ್ಲೆಲ್ಲಾ ಪಕ್ಷಕ್ಕೆ ಮೀಸಲಾತಿ ಆಕ್ರೋಶದ ಬಿಸಿ ತಟ್ಟಬಹುದು ಎಂಬ ದಿಗಿಲು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಮೂಡಿದೆ.

’ಎಡಗೈ ಹಾಗೂ ಬಲಗೈ ಸಮುದಾಯಗಳ ಹೊರತಾಗಿ ಇತರೆ 99 ಜಾತಿಗಳಲ್ಲಿ ಒಳಮೀಸಲಾತಿಗೆ ಶಿಫಾರಸು ವಿಚಾರ ಆತಂಕ ಮೂಡಿಸಿದೆ. ಚುನಾವಣೆ ಸಮಯದಲ್ಲಿ ನಕಾರಾತ್ಮಕ ಸುದ್ದಿ ಹರಡಿಸುವುದು ವಿರೋಧಿಗಳಿಗೆ ಸುಲಭ. ಆಯಾ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮನದಟ್ಟು ಮಾಡಿಕೊಡಲು ನಮಗೀಗ ಸಮಯ ಇಲ್ಲ‘ ಎಂದು ಬಿಜೆಪಿಯ ಜಿಲ್ಲಾ ಘಟಕದ ಪದಾಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.

‘ಶಿವಮೊಗ್ಗ ಜಿಲ್ಲೆ ಹೊರತಾಗಿ ಬೇರೆಡೆ ವೀರಶೈವ ಲಿಂಗಾಯತ ಸಮುದಾಯದವರು ಹೆಚ್ಚು ಇರುವಲ್ಲಿ ಎಡ ಹಾಗೂ ಬಲಗೈ ಸಮುದಾಯದವರು ಗಣನೀಯವಾಗಿದ್ದಾರೆ. ಈ ಸಮೀಕರಣ ಚುನಾವಣೆಯಲ್ಲಿ ಪಕ್ಷಕ್ಕೆ ನೆರವಾಗಬಹುದು ಎಂಬ ಲೆಕ್ಕಾಚಾರವೂ ಒಳಮೀಸಲಾತಿ ಬುಟ್ಟಿಯಲ್ಲಿದೆ’ ಎಂದು ಅವರು ಹೇಳುತ್ತಾರೆ.

**

ರಾಜಕೀಯ ಹಿತಾಸಕ್ತಿ ಹೊಂದಿರುವ ಕೆಲವೇ ಜನರು ಗಲಾಟೆಯ ಹಿಂದಿರುವ ಬಗ್ಗೆ ನನಗೆ ಮಾಹಿತಿ ಇದೆ. ಘಟನೆಯ ಹಿಂದಿರುವ ರಾಜಕಾರಣವೇನು ಎಂಬುದನ್ನು ಪರಿಶೀಲಿಸುತ್ತಿದ್ದೇವೆ.

–ಆರಗ ಜ್ಞಾನೇಂದ್ರ, ಗೃಹ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.