ತೀರ್ಥಹಳ್ಳಿ: ‘ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ (ಮ್ಯಾಮ್ಕೋಸ್)ದಲ್ಲಿ ನೇರವಾಗಿ ಗುಟ್ಕಾ ಕಂಪನಿಗೆ ಅಡಿಕೆ ಮಾರಾಟ ವ್ಯವಹಾರ ನಡೆಯುತ್ತಿಲ್ಲ. ಮಧ್ಯವರ್ತಿಗಳಿಗೆ ಮಾರಾಟ ಮಾಡುತ್ತಿದ್ದು, ರೈತರಿಗೆ ಸರಿಯಾದ ಧಾರಣೆ ಸಿಗುತ್ತಿಲ್ಲ. ಸಂಸ್ಥೆಯಿಂದ 20,000 ಅಡಿಕೆ ಚೀಲಗಳನ್ನು ರೈತರು ವಾಪಸ್ ಪಡೆದಿದ್ದಾರೆ’ ಎಂದು ಸಹಕಾರ ವೇದಿಕೆ ಸಂಚಾಲಕ ಕಡ್ತೂರು ದಿನೇಶ್ ಆರೋಪಿಸಿದರು.
‘ವಾರ್ಷಿಕವಾಗಿ ಮೂರುವರೆ ಲಕ್ಷಕ್ಕೂ ಅಧಿಕ ಅಡಿಕೆ ಚೀಲಗಳು ಮ್ಯಾಮ್ಕೋಸ್‌ಗೆ ಬರುತ್ತವರ. ಇದರಲ್ಲಿ ಧಾರಣೆ ಸಿಗದೆ ತೀರ್ಥಹಳ್ಳಿ ತಾಲ್ಲೂಕು ಕೇಂದ್ರವೊಂದರಲ್ಲೇ 1,442 ಅಡಿಕೆ ಚೀಲಗಳನ್ನು ರೈತರು ವಾಪಸ್ ಪಡೆದು ಅಧಿಕ ಬೆಲೆಗೆ ಬೇರೆ ಸಂಸ್ಥೆಗಳಲ್ಲಿ ಮಾರಾಟ ಮಾಡಿದ್ದಾರೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
‘ಸಂಸ್ಥೆಯಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ 31,000 ಷೇರುದಾರರಿದ್ದಾರೆ. ಆದರೆ ಕೇವಲ 6,000 ಸದಸ್ಯರಿಗೆ ಮಾತ್ರ ಮತದಾನದ ಹಕ್ಕು ನೀಡಲಾಗಿದೆ. ಆಡಳಿತ ಮಂಡಳಿ 19 ನಿರ್ದೇಶಕರು ಮನಸೋ ಇಚ್ಚೆ ವರ್ತಿಸುತ್ತಿದ್ದು, ರೈತರ ಸಂಸ್ಥೆ ಎಂಬುದನ್ನು ಮರೆತಿದ್ದಾರೆ. ಮ್ಯಾಮ್ಕೋಸ್ ಸಂಸ್ಥೆ ಈಚೆಗೆ ಸ್ವತಃ ವ್ಯವಹಾರ ಆರಂಭಿಸಿದ ನಂತರದ ವರ್ಷಗಳಲ್ಲಿ ರೈತರಿಗೆ ಮೋಸ ಹೆಚ್ಚಾಗುತ್ತಿದೆ’ ಎಂದರು.
‘ಮ್ಯಾಮ್ಕೋಸ್ ಚುನಾವಣೆಯಲ್ಲಿ ಕ್ಷೇತ್ರವಾರು ನಿರ್ದೇಶಕರ ಸ್ಥಾನ ವಿಂಗಡಿಸುವಂತೆ ರಾಜ್ಯ ಸರ್ಕಾರ ಸೆಪ್ಟೆಂಬರ್ 18ರಂದು ಆದೇಶಿಸಿದೆ. ಇದು ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರ ಗಮನದಲ್ಲಿದೆ. ನಿಯಮ ಉಲ್ಲಂಘಿಸಿದರೆ ಸಂಸ್ಥೆಗೆ ಆಡಳಿತಾಧಿಕಾರಿ ನೇಮಿಸುವ ಸನ್ನಿವೇಶ ಸೃಷ್ಟಿಯಾಗಲಿದೆ’ ಎಂದರು.
‘ಮ್ಯಾಮ್ಕೋಸ್ ನಾನು ಹಾಕಿದ ಅಡಿಕೆಯ ರಾಶಿ ಇಡಿಗೆ ₹37,000 ದರ ನಿಗದಿಪಡಿಸಿತ್ತು. ಅದೇ ಅಡಿಕೆಯನ್ನು ಟಾಸ್, ವಿಪ್ರ ಸಂಸ್ಥೆಯಲ್ಲಿ ಮಾರಾಟ ಮಾಡಿದ್ದು ಹೆಚ್ಚುವರಿ ₹13,000 ಲಾಭ ಸಿಕ್ಕಿದೆ’ ಎಂದು ಕರಿಮನೆ ರಾಘವೇಂದ್ರ ಭಟ್ ಹೇಳಿದರು.
‘ಸಂಸ್ಥೆಯ ಪಾರದರ್ಶಕತೆ ಬಗ್ಗೆ ಭ್ರಷ್ಟಾಚಾರದ ಆರೋಪಗಳು ಇದ್ದು ಅಧ್ಯಕ್ಷರಾದ ಜಿಲ್ಲಾಧಿಕಾರಿ ವಿವಾದ ತಣಿಸುವ ಕೆಲಸ ಮಾಡುತ್ತಿಲ್ಲ’ ಎಂದು ವಿನಾಯಕ ತುಪ್ಪದಮನೆ ದೂರಿದರು.
ಮುಖಂಡರಾದ ಕೆಸ್ತೂರು ಮಂಜುನಾಥ, ಹಾರೋಗೊಳಿಗೆ ಪದ್ಮನಾಭ, ಕಡ್ತೂರು ಮೋಹನ್, ಕಡಿದಾಳು ತಾರಾನಾಥ, ಅಮ್ರಪಾಲಿ ಸುರೇಶ್, ಟಿ.ಟಿ.ತಿಮ್ಮಪ್ಪ, ಆದರ್ಶ ಹುಂಚದಕಟ್ಟೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.