ಶಿವಮೊಗ್ಗ: ಮಲೆನಾಡಿನಲ್ಲಿ ಈ ಬಾರಿ ಅಧಿಕ ಮಳೆಯಿಂದಾಗಿ ಅಡಿಕೆಗೆ ಕೊಳೆ ರೋಗ ಮತ್ತೆ ವ್ಯಾಪಕಗೊಳ್ಳುತ್ತಿದೆ. ರೋಗ ಬಾಧಿತ ಮರಗಳಲ್ಲಿನ ಅಡಿಕೆ ಕಾಯಿಗಳು ಉದುರುತ್ತಿವೆ. ಇದು ಮರದಲ್ಲಿ ಚಿನ್ನದ ಬೆಳೆ ತೆಗೆಯುವ ಬೆಳೆಗಾರರ ಕನಸಿಗೆ ಕೊಳ್ಳಿ ಇಡುತ್ತಿದೆ.
ಈ ಬಾರಿ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ 8ರಷ್ಟು ಮಳೆ ಹೆಚ್ಚು ಸುರಿದಿದೆ. ಜೂನ್ 1ರಿಂದ ಆ. 27ರವರೆಗೆ ವಾಡಿಕೆಯಂತೆ 175.4 ಸೆಂ.ಮೀ ಮಳೆ ಆಗಬೇಕಿತ್ತು. ಆದರೆ 188.8 ಸೆಂ.ಮೀ. ದಾಖಲಾಗಿದೆ.
ನಿರಂತರ ಮಳೆ, ಮೋಡ ಕವಿದ ವಾತಾವರಣ ಹಾಗೂ ಶೀತದ ಕಾರಣ ರೋಗ ಬಾಧೆ ತೀವ್ರಗೊಳ್ಳುತ್ತಿದೆ. ಹಸಿರಿನಿಂದ ಕಂಗೊಳಿಸಬೇಕಿದ್ದ ತೋಟಗಳು ಮುಖ ಇಳಿಬಿಟ್ಟಿವೆ. ಕೊನೆಯಿಂದ ವಿಪರೀತ ಕಾಯಿ ಉದುರುತ್ತಿವೆ.
30,057 ಹೆಕ್ಟೇರ್ ಪ್ರದೇಶದಲ್ಲಿ ಬಾಧೆ: ತೋಟಗಾರಿಗೆ ಇಲಾಖೆಯ ಸಮೀಕ್ಷೆ ಅನ್ವಯ ಜಿಲ್ಲೆಯಲ್ಲಿ ಒಟ್ಟು 1.21,260 ಹೆಕ್ಟೇರ್ ಅಡಿಕೆ ಬೆಳೆಯ ಪೈಕಿ 30,057 ಹೆಕ್ಟೇರ್ ಪ್ರದೇಶದಲ್ಲಿ ಕೊಳೆ ರೋಗ ವ್ಯಾಪಿಸಿದೆ. ಶೇ 39.14ರಷ್ಟು ತೋಟಗಳು ರೋಗ ಪೀಡಿತವಾಗಿವೆ.
ಬೋರ್ಡೊ ದ್ರಾವಣ ಸಿಂಪಡಿಸಿ: ‘ವಾತಾವರಣದಲ್ಲಿ ಆರ್ದ್ರತೆ ಶೇ 85ಕ್ಕಿಂತ ಹೆಚ್ಚು ಆದಾಗ ಶಿಲೀಂಧ್ರ ಬಾಧೆಯಿಂದ ಕೊಳೆ ರೋಗದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮಲೆನಾಡಿನಲ್ಲಿ ಜುಲೈನಲ್ಲಿ ನಿರಂತರವಾಗಿ ಮಳೆ ಆಗಿದ್ದರಿಂದ ರೋಗ ಉಲ್ಬಣಗೊಂಡಿದೆ’ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಅಡಿಕೆ ಸಂಶೋಧನಾ ವಿಭಾಗದ ಮುಖ್ಯಸ್ಥ ನಾಗರಾಜ ಅಡಿವೆಪ್ಪ ಹೇಳುತ್ತಾರೆ.
‘ಕೊಳೆ ರೋಗ ಬಾಧೆ ತಡೆಗಟ್ಟಲು ಅಡಿಕೆ ತೋಟಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಬಸಿಗಾಲುವೆಗಳನ್ನು ಸ್ವಚ್ಛಪಡಿಸಬೇಕು. ರೋಗ ಹರಡದಂತೆ ಶಿಲೀಂಧ್ರ ಬಾಧಿತ ಕಾಯಿಗಳನ್ನು ತೆಗೆದು ಹಾಕಬೇಕು. ರೋಗ ನಿಯಂತ್ರಣಕ್ಕೆ ಗಿಡಗಳಿಗೆ ಶೇ 1ರಷ್ಟು ಬೋರ್ಡೊ ದ್ರಾವಣ ಸಿಂಪಡಿಸಬೇಕು. ಮಣ್ಣಿನ ಫಲವತ್ತತೆ ಹೆಚ್ಚಿಸುವ ಜೊತೆಗೆ ಮಣ್ಣು ಕೊಚ್ಚಿ ಹೋಗದಂತೆ ಬದು ನಿರ್ಮಿಸಿ, ನೀರು ಇಂಗಲು ಬಸಿ ಕಾಲುವೆ ನಿರ್ಮಿಸಿದರೆ ಸೂಕ್ತ’ ಎಂದು ಸಲಹೆ ನೀಡುತ್ತಾರೆ.
ಇಲಾಖೆಯ ಸಮೀಕ್ಷೆಯಲ್ಲಿ 30057 ಹೆಕ್ಟೇರ್ ಅಡಿಕೆ ತೋಟ ಕೊಳೆ ರೋಗ ಬಾಧಿತವಾಗಿರುವುದು ಕಂಡು ಬಂದಿದೆ. ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ.ಜಿ.ಸವಿತಾ ಉಪನಿರ್ದೇಶಕರು ತೋಟಗಾರಿಕೆ ಇಲಾಖೆ ಶಿವಮೊಗ್ಗ
ರೋಗದಿಂದ ಬೆಳೆ ಹಾನಿ ಜೊತೆಗೆ ಮರಗಳು ಸಾಯುತ್ತವೆ. ಬೆಳೆ ವಿಮೆ ಅಡಿ ತುರ್ತಾಗಿ ಪರಿಹಾರ ಕೊಡಿಸಲು ಕೇಂದ್ರ ಸರ್ಕಾರ ಮುಂದಾಗಲಿ. ರಾಜ್ಯ ಸರ್ಕಾರ ಪ್ರತ್ಯೇಕ ಪರಿಹಾರ ಪ್ಯಾಕೇಜ್ ಘೋಷಿಸಲಿರಮೇಶ್ ಹೆಗ್ಡೆ ಶಿವಮೊಗ್ಗ ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.