ಹೊಳೆಹೊನ್ನೂರು: ಅಡಿಕೆ ಬೆಲೆ ಅರ್ಧ ಶತಕ ದಾಟಿದ್ದು, ಅಡಿಕೆ ಬೆಳೆಗಾರರಲ್ಲಿ ಒಂದೆಡೆ ಹರ್ಷದ ವಾತಾವರಣ ಇದ್ದರೆ, ಇನ್ನೊಂದೆಡೆ ಕಳ್ಳರ ಭಯ ಶುರುವಾಗಿದೆ.
ಅಡಿಕೆ ಗೇಣಿದಾರರು ಬೇಯಿಸಿದ ಅಡಿಕೆ ಕಳವಾಗುತ್ತಿವೆ. ಅಲ್ಲದೇ ತೋಟದಲ್ಲಿ ರಾತ್ರೋ ರಾತ್ರಿ ಅಡಿಕೆ ಕಳವಾಗುತ್ತಿರುವ ಪ್ರಕರಣಗಳೂ ಹೆಚ್ಚುತ್ತಿವೆ. ಒಂದು ಕ್ವಿಂಟಲ್ ಅಡಿಕೆಗೆ ಸುಮಾರು ₹ 50 ಸಾವಿರ ದೊರೆಯುವುದರಿಂದ ಅಡಿಕೆ ಕಳವು ಪ್ರಕರಣಗಳು ಹೆಚ್ಚಾಗುತ್ತಿವೆ.
ಮಲ್ಲಾಪುರದಲ್ಲಿ ಒಂದು ಕ್ವಿಂಟಲ್, ಕಲ್ಲಜ್ಜನಾಳ್‌ನಲ್ಲಿ ಎರಡು ಕ್ವಿಂಟಲ್, ಸೈದರಕಲ್ಲಹಳ್ಳಿಯಲ್ಲಿ ಎರಡು ಕ್ವಿಂಟಲ್ ಹಾಗೂ ಅರಬಿಳಚಿ ಗ್ರಾಮದಲ್ಲಿ ನಾಲ್ಕು ಕ್ವಿಂಟಲ್ ಬೇಯಿಸಿದ ಅಡಿಕೆ ಕಳವಾಗಿವೆ. ಇದಲ್ಲದೇ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳ ಅಡಿಕೆ ತೋಟಗಳಲ್ಲಿ 15 ದಿನಗಳಿಂದ ಒಂದಲ್ಲ ಒಂದು ಕಳವು ಘಟನೆಗಳು ಬೆಳಕಿಗೆ ಬರುತ್ತಿವೆ. ಒಂದೊಂದು ತೋಟಗಳಲ್ಲಿ 5ರಿಂದ 10 ಕ್ವಿಂಟಲ್‌ವರೆಗೂ ಅಡಿಕೆ ಕಳವಾಗುತ್ತಿವೆ.
‘ಈ ಭಾಗದಲ್ಲಿ ಅಡಿಕೆ ಕಟಾವಿಗೆ ಬಂದ ಸಂದರ್ಭದಲ್ಲಿ ಪ್ರತಿ ವರ್ಷವೂ ಅಡಿಕೆ ಕಳವು ಸಾಮಾನ್ಯವಾಗಿದೆ. ಈ ಬಾರಿ ಅಡಿಕೆ ಬೆಲೆ ಅರ್ಧ ಶತಕ ದಾಟಿದ ನಂತರ ಇದು ಹೆಚ್ಚಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಅನೇಕ ಪ್ರಕರಣಗಳು ದಾಖಲಾಗಿದ್ದರೂ, ಕೆಲವು ಪ್ರಕರಣಗಳನ್ನು ಮಾತ್ರ ಪೊಲೀಸರು ಭೇದಿಸಿದ್ದಾರೆ’ ಎಂದು ತೋಟದ ಮಾಲೀಕರೊಬ್ಬರು ಆರೋಪಿಸುತ್ತಾರೆ.
ಸಿ.ಸಿ.ಟಿ.ವಿ ಕ್ಯಾಮೆರಾದ ಮೊರೆ: ಕಳ್ಳರ ಭಯದಿಂದ ಕೆಲವರು ಅಡಿಕೆ ತೋಟಗಳಿಗೆ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸುತ್ತಿದ್ದಾರೆ. ಆದರೂ ಕಳ್ಳರು ಮುಖಕ್ಕೆ ಬಟ್ಟೆ ಸುತ್ತಿಕೊಂಡು ಕಳವು ಮಾಡುವುದರಿಂದ ಈ ಪ್ರಯತ್ನ ವೂ ಪ್ರಯೋಜನಕ್ಕೆ ಬಾರದಾಗಿದೆ.
ಮೂರು ಪ್ರಕರಣ ದಾಖಲು
ಅಡಿಕೆ ಕಳವಿಗೆ ಸಂಬಂಧಿಸಿದಂತೆ ಈವರೆಗೆ ಮೂರು ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಎರಡು ಪ್ರಕರಣಗಳನ್ನು ಭೇದಿಸಿದ್ದು, ಇನ್ನೊಂದು ಪ್ರಕರಣದ ತನಿಖೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ರಾತ್ರಿ ವೇಳೆ ಗಸ್ತು ತಿರುಗಲು ಸಿಬ್ಬಂದಿಯನ್ನು ನೇಮಕ ಮಾಡಲಾಗುವುದು. ಈ ಭಾಗದಲ್ಲಿ ಹೆಚ್ಚು ಗ್ರಾಮಗಳಿದ್ದು, ಸಿಬ್ಬಂದಿ ಕೊರತೆ ಇರುವುದರಿಂದ ಸಾರ್ವಜನಿಕರೇ ರಾತ್ರಿ ವೇಳೆಯಲ್ಲಿ ಕಾವಲು ಕಾಯುವ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ. ಜೊತೆಗೆ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ.
– ಲಕ್ಷೀಪತಿ, ಸಬ್‌ಇನ್‌ಸ್ಪೆಕ್ಟರ್
ನಾವು ಕಷ್ಟಪಟ್ಟು ಅಡಿಕೆ ಗೇಣಿ ಮಾಡುತ್ತಿದ್ದು, ಅಡಿಕೆ ಕಳವಾದರೆ ಬೆಳೆಗಾರರಿಗೆ ಹಣ ನೀಡುವುದಾದರೂ ಹೇಗೆ? ಆದ್ದರಿಂದ ಪೊಲೀಸ್ ಇಲಾಖೆ ಹೆಚ್ಚಿನ ಕಾಳಜಿ ವಹಿಸಿ ಕಳ್ಳರನ್ನು ಬಂಧಿಸಿದರೆ ತುಂಬಾ ಉಪಕಾರವಾಗುವುದು.
- ಮಂಜುನಾಥ, ಅರಬಿಳಚಿ, ಅಡಿಕೆ ಕಳವಾದ ತೋಟದ ಮಾಲೀಕ
ಅಡಿಕೆ ಕಳವು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪೊಲೀಸ್ ಇಲಾಖೆ ಇಂದಿನಿಂದಲೇ ಸೂಕ್ತ ಕ್ರಮ ಕೈಗೊಂಡು ಜನರು ನಿರ್ಭೀತಿಯಿಂದ ಇರಲು ಅನುವು ಮಾಡಿಕೊಡಬೇಕು.
- ವೀರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರಾಜ್ಯ ರೈತ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.