ADVERTISEMENT

ಬರಿಗೈಲಿ ಹೋದವನಿಗೆ ಬರುವಾಗ ಕೋಟ್ಯಂತರ ಜನರ ಒಲವು: ಶಿಲ್ಪಿ ಅರುಣ್‌ ಯೋಗಿರಾಜ್‌

ಶಿಲ್ಪಿ ಅರುಣ್‌ ಯೋಗಿರಾಜ್‌ಗೆ ಸನ್ಮಾನ, ದೇವ ಶಿಲ್ಪಿ ಬಿರುದು ಘೋಷಣೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 16:08 IST
Last Updated 7 ಏಪ್ರಿಲ್ 2024, 16:08 IST
<div class="paragraphs"><p>ಶಿವಮೊಗ್ಗದ ಡಾ.ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ವಿಶ್ವಕರ್ಮ ಮಹಾಸಭಾ ಜಿಲ್ಲಾ ಘಟಕದ ಸಹಯೋಗದೊಂದಿಗೆ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಲ್ಪಿ ಅರುಣ್‌ ಯೋಗರಾಜ್‌ ಅವರನ್ನು ಸನ್ಮಾನಿಸಲಾಯಿತು</p></div>

ಶಿವಮೊಗ್ಗದ ಡಾ.ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ವಿಶ್ವಕರ್ಮ ಮಹಾಸಭಾ ಜಿಲ್ಲಾ ಘಟಕದ ಸಹಯೋಗದೊಂದಿಗೆ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಲ್ಪಿ ಅರುಣ್‌ ಯೋಗರಾಜ್‌ ಅವರನ್ನು ಸನ್ಮಾನಿಸಲಾಯಿತು

   

ಶಿವಮೊಗ್ಗ: ‘ಮೈಸೂರಿನಿಂದ ಅಯೋಧ್ಯೆಗೆ ಬರಿಗೈಲಿ‌ ಹೋದ ನನಗೆ ವಾಪಸ್ ಬರುವಾಗ ಕೋಟ್ಯಂತರ ಜನರ ಪ್ರೀತಿ‌ ಸಿಕ್ಕಿತು. ದೇಶದ 100 ಕೋಟಿಗಿಂತಲೂ ಹೆಚ್ಚು ಜನತೆ ಬಾಲರಾಮನ ವಿಗ್ರಹ ಪ್ರೀತಿಸುತ್ತಾರೆ. ವಿಗ್ರಹ ಕೆತ್ತುವಾಗ ಸತತ 7 ತಿಂಗಳ ಕಾಲ ನಾನು ಸರಿಯಾಗಿ ನಿದ್ದೆ ಕೂಡ ಮಾಡಿರಲಿಲ್ಲ’ ಎಂದು ಶಿಲ್ಪಿ ಅರುಣ್‌ ಯೋಗಿರಾಜ್‌ ಹೇಳಿದರು. 

ಜಿಲ್ಲಾ ವಿಶ್ವಕರ್ಮ ಮಹಾಸಭಾ, ಜಿಲ್ಲಾ ವಿಶ್ವ ಬ್ರಾಹ್ಮಣರ ಸಂಘ, ಕಾಳಿಕಾ ಪರಮೇಶ್ವರಿ ದೇವಸ್ಥಾನ ಸೇವಾ ಸಮಿತಿ, ಹರಕೆರೆ ಕಾಳಿಕಾಂಬ ದೇವಸ್ಥಾನ ಸಮಿತಿ, ಜಿಲ್ಲಾ ವಿವಿಧ ಸಂಘ ಸಂಸ್ಥೆಗಳು ಆಶ್ರಯದಲ್ಲಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 

ADVERTISEMENT

ದಕ್ಷಿಣದಿಂದ ಉತ್ತರಕ್ಕೆ ನಮ್ಮ‌ ಕಲೆ ಪ್ರಚಾರ ಮಾಡುವ ಅವಕಾಶ ಸಿಕ್ಕಿತು. ಬಹಳ ದೊಡ್ಡ ಜವಾಬ್ದಾರಿ ಎಚ್ಚರಿಕೆಯಿಂದ ನಿಭಾಯಿಸಿದ್ದೇನೆ. ಮಾತು ಕೊಟ್ಟ ಮೇಲೆ ಕೆಲಸ ಮಾಡಿ ತೋರಿಸಬೇಕು. ಕಷ್ಟವಾದರೂ ಕೂಡ ಅದನ್ನು ಬಿಡಬಾರದು. ಅಯೋಧ್ಯೆಯಲ್ಲಿ ಕೆಲಸ ಮಾಡುವಾಗ ನ್ಯಾಯ ಒದಗಿಸಬೇಕು ಎಂಬ ಹಂಬಲವಿತ್ತು. ದೇಶದ ಜನತೆಗೆ ಕೊಡುವ ಅವಕಾಶ ಭಗವಂತನು ನನಗೆ ಅವಕಾಶ ಮಾಡಿ ಕೊಟ್ಟಿರುವುದ ಪುಣ್ಯ ಎಂದರು.

ಕೇದಾರನಾಥದಲ್ಲಿ ಶಂಕರಾಚಾರ್ಯರ ಪ್ರತಿಮೆ ಮಾಡಲು ನನಗೆ ಅವಕಾಶ ಸಿಕ್ಕಿತು. ಇದೇ ಹೊತ್ತಿನಲ್ಲಿ ಯುರೋಪ್‌ನಲ್ಲಿ ಮೂರ್ತಿಗಳನ್ನು ಕೆತ್ತನೆ ಮಾಡಲು ಅವಕಾಶ ಒದಗಿ ಬಂದಿತು. ಅವರಿಗೆ 6 ತಿಂಗಳ ಕಾಲ ಹೆಚ್ಚುವರಿ ಕಾಲಾವಕಾಶ ನೀಡುವಂತೆ ಕೋರಿದ್ದೆನು. ಆದರೆ ನೀಡಿಲಿಲ್ಲ. ವಿದೇಶದ ಅವಕಾಶ ತಿರಸ್ಕಾರ ಮಾಡಿ ಶಂಕರಾಚಾರ್ಯರ ಮೂರ್ತಿ ಕೆತ್ತನೆ ಮಾಡಿದ್ದೇನೆ ಎಂದು ಹೇಳಿದರು.

ಕುಟುಂಬವನ್ನು ಬಿಟ್ಟು ನಾನು ಕಲ್ಲಿನೊಂದಿಗೆ ಜೀವನ ಕಳೆದಿದ್ದೇನೆ. ಕೆಲಸ ಮಾಡುವಾಗ ಬಹಳ ಒತ್ತಡ ಇರುತ್ತದೆ. ಇದನ್ನು ನಿಭಾಯಿಸಲು ಶ್ರದ್ದೆ ಇರಬೇಕು. ಮೊದಲಿಗೆ ಅಧ್ಯಯನ ಮಾಡಿ ನಂತರ ಕೆಲಸ ಮಾಡಬೇಕಿದೆ. ಸಮಯ ಪಾಲನೊಂದಿಗೆ ಗುರಿ ಮುಟ್ಟಲು ಸುಲಭವಾಗುತ್ತದೆ ಎಂದು ತಿಳಿಸಿದರು.

ಜೀವನದಲ್ಲಿ ಮೊದಲು ಸಣ್ಣ ಸಣ್ಣ ಗುರಿಗಳನ್ನು ಇಟ್ಟುಕೊಳ್ಳಬೇಕು. ಇದು ಮುಟ್ಟಿದ ಬಳಿಕ ದೊಡ್ಡ ಗೋಲು ಸುಲಭವಾಗಿ ಮುಟ್ಟಲು ಸಾಧ್ಯವಾಗುತ್ತದೆ. ನಿರ್ಲಕ್ಷ್ಯ ವಹಿಸಿದರೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದಕ್ಕೆ ಎಂದಿಗೂ ಅವಕಾಶ ಮಾಡಿಕೊಡಬಾರದು. ಗುರಿ ಸಾಧನೆಗೆ ನಿತ್ಯ 10 ತಾಸುಗಳ ಕಾಲ ಕಲ್ಲಿನೊಂದಿಗೆ ಕಳೆಯಬೇಕು ಎಂದರು. 

ವಿಶ್ವಕರ್ಮ ಮಹಾಸಭಾ ಜಿಲ್ಲಾ ಘಟಕ ಅಧ್ಯಕ್ಷ ನಿರಂಜನ ಮೂರ್ತಿ ಮಾತನಾಡಿ, ಅರುಣ್‌ ಯೋಗಿರಾಜ್‌ ಅವರು ಎಂಬಿಎ ಓದಿ ಶಿಲ್ಪಿ ಆಗಿದ್ದಾರೆ. ನಮ್ಮ ಪರಂಪರೆಯನ್ನು ಮುಂದುವರೆಸಿದ್ದಾರೆ. ಮೈಸೂರು ಮಹಾರಾಜರು ಕೊಟ್ಟ ಮನೆಯಲ್ಲಿಯೇ ಈಗಲೂ‌ ವಾಸಿಸುತ್ತಿದ್ದಾರೆ ಎಂದು ಹೇಳಿದರು.

ಅರೇಮಾದನಹಳ್ಳಿ ಶಿವಸುಜ್ಞಾನತೀರ್ಥ ಸ್ವಾಮೀಜಿ, ಸರಸ್ವತಿ ಪೀಠದ ಶಂಕರ ಅತ್ಮಾನಂದ ಸರಸ್ವತಿ ಸ್ವಾಮೀಜಿ  ಆಶೀರ್ವಚನ ನೀಡಿದರು. ಜಿಲ್ಲಾ ವಿಶ್ವ ಬ್ರಾಹ್ಮಣರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ  ಎನ್. ಸೋಮಾಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.  ಬಿ.ಕೆ.‌ಶ್ರೀನಾಥ್ , ರಮೇಶ್, ಲೀಲಾಮೂರ್ತಿ, ಎಸ್. ರಾಮು,  ಡಾ.‌ಭಾಗ್ಯಲಕ್ಷ್ಮೀ ಸೇರಿದಂತೆ ಇನ್ನಿತರರಿದ್ದರು.

ಕೊನೆಗೂ ಅಪ್ಪ ಮೆಚ್ಚಿದ್ರು

‘ನಮ್ಮ ತಾತ ನನಗಿಂತಲೂ ಚೆನ್ನಾಗಿ ಕೆಲಸ ಮಾಡುತ್ತಾರೆ ಎಂದು ನಮ್ಮ ತಂದೆ ಅವರು ಆಗಾಗ ಹೇಳುತ್ತಿದ್ದರು. ನಾನು 20 ವರ್ಷಗಳ ಕಾಲ ಸಾವಿರಾರು ಮೂರ್ತಿಗಳನ್ನು ಕೆತ್ತನೆ ಮಾಡಿದ್ದೇನೆ. ಆದರೆ ಒಂದು ದಿನವೂ ನೀನು ಚೆನ್ನಾಗಿ ಕೆಲಸ ಮಾಡುತ್ತಿದ್ದೀಯಾ ಅಂತಾ ನನ್ನ ತಂದೆ ಹೇಳಲಿಲ್ಲ. ಆದರೂ ನಮ್ಮ ಅಪ್ಪನಿಂದ ಮೆಚ್ಚುಗೆ ಪಡೆಯಬೇಕು ಎಂದು ಹಠಕ್ಕೆ ಬಿದ್ದು ಕೆಲಸ ಮಾಡಿದೆನು. ಶಂಕರಾಚಾರ್ಯರ ಮೂರ್ತಿ ನೋಡಿ ನಮ್ಮ‌ ತಂದೆ ಮೆಚ್ಚುಗೆ ವ್ಯಕ್ತಪಡಿಸಿದಾಗ ನನಗೆ ಬಹಳ ಖುಷಿಯಾಯಿತು’ ಎಂದ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರು ನನಗೂ ಸ್ವಲ್ಪ ಅಹಂಕಾರ ಬಂದಿತು. ಆದರೆ ನನ್ನ‌ ತಂದೆಯವರು ನನಗೆ ತಿದ್ದಿ‌ ತೀಡಿ ಅದರಿಂದ ಹೊರಗೆ ಕರೆದುಕೊಂಡು ಬಂದರು ಎಂದು ತಿಳಿಸಿದರು. ದೇವ ಶಿಲ್ಪಿ ಬಿರುದು ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ವಿಗ್ರಹ ಕೆತ್ತಿ ದೇಶದ ಜನರ ಮನ ಗೆದ್ದಿರುವ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರಿಗೆ ಜಿಲ್ಲಾ ವಿಶ್ವಕರ್ಮ ಮಹಾಸಭಾ ಸೇರಿದಂತೆ ಇನ್ನಿತರ ಸಂಘಟನೆಗಳಿಂದ ಸನ್ಮಾನ ಮಾಡಿದ ಬಳಿಕ ಅವರಿಗೆ ‘ದೇವ ಶಿಲ್ಪಿ’ ಬಿರುದು ನೀಡಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.