ADVERTISEMENT

ಶಿವಮೊಗ್ಗ | ಸ್ವಚ್ಛತಾ ವಾಹಿನಿ ನೌಕರರಿಗೆ ಮನ್ನಣೆ ಕೊಡಿ: ಸಿಇಒಗೆ ಮನವಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 15:45 IST
Last Updated 8 ಜುಲೈ 2024, 15:45 IST
ಶಿವಮೊಗ್ಗದಲ್ಲಿ ಸೋಮವಾರ ತರಬೇತಿ ಪಡೆದ ಸ್ವಚ್ಛತಾವಾಹಿನಿ ನೌಕರರು ಪ್ರತಿಭಟನೆ ನಡೆಸಿದರು
ಶಿವಮೊಗ್ಗದಲ್ಲಿ ಸೋಮವಾರ ತರಬೇತಿ ಪಡೆದ ಸ್ವಚ್ಛತಾವಾಹಿನಿ ನೌಕರರು ಪ್ರತಿಭಟನೆ ನಡೆಸಿದರು   

ಶಿವಮೊಗ್ಗ: ತರಬೇತಿ ಪಡೆದ ಸ್ವಚ್ಛತಾ ವಾಹಿನಿ ನೌಕರರಿಗೆ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಕೊಡುವಂತೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸ್ವಚ್ಛವಾಹಿನಿ ಆಟೊ ಚಾಲಕರು ಹಾಗೂ ಸಹಾಯಕಿಯರ ಸಂಘದ ಜಿಲ್ಲಾ ಶಾಖೆಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಗಾಂಧಿ ಪಾರ್ಕ್‌ನಿಂದ ಜಿಲ್ಲಾ ಪಂಚಾಯಿತಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಸಿಇಒಗೆ ಮನವಿ ಸಲ್ಲಿಸಲಾಯಿತು. 

ಕಸ ವಿಲೇವಾರಿ ಮಾಡುವುದರಲ್ಲಿ ಸ್ವಚ್ಛವಾಹಿನಿ ಮಹಿಳಾ ಕಾರ್ಮಿಕರು ಪ್ರಮುಖರಾಗಿದ್ದಾರೆ. ಕಸವನ್ನು ಬೇರ್ಪಡಿಸುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಸ್ವಚ್ಛ ಭಾರತ್ ಅಭಿಯಾನ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಆದರೆ ಗ್ರಾಮಗಳ ಸ್ವಚ್ಛತೆಯ ಜವಾಬ್ದಾರಿ ಹೊತ್ತಿರುವ ಸ್ವಚ್ಛವಾಹಿನಿ ನೌಕರರಿಗೆ ಮೂಲಸೌಲಭ್ಯಗಳು ಸಿಗುತ್ತಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದರು.

ADVERTISEMENT

ಸ್ವಚ್ಛವಾಹಿನಿ ನೌಕರರಿಗೆ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಕೊಡುತ್ತಿಲ್ಲ. ಸ್ವಚ್ಛವಾಹಿನಿ ಗಾಡಿಗಳಿಗೆ ವಿಮೆ ನವೀಕರಣ ಮಾಡಿಲ್ಲ. ನೌಕರರಿಗೆ ವೇತನ ಬಾಕಿ ಉಳಿಸಿಕೊಂಡಿದೆ. ಸ್ವಚ್ಛತಾ ಸಿಬ್ಬಂದಿಗೆ ರಕ್ಷಣಾ ಸಲಕರಣೆ ಒದಗಿಸುತ್ತಿಲ್ಲ. ಇದರಿಂದಾಗಿ ನೌಕರರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ದೂರಿದರು.

ಸ್ವಚ್ಛತಾವಾಹಿನಿ ಗಾಡಿಗಳಿಗೆ ವಿಮೆ ನವೀಕರಣ ಮಾಡಬೇಕು. ಗ್ರಾಮ ಪಂಚಾಯಿತಿ ನೌಕರರೆಂದು ಪರಿಗಣಿಸಬೇಕು. ರಕ್ಷಣಾ ಸಲಕರಣೆಗಳನ್ನು ಒದಗಿಸಬೇಕು. ಸ್ವಚ್ಛತಾವಾಹಿನಿ ಮಹಿಳಾ ಸಿಬ್ಬಂದಿ  ಮತ್ತು ಅವರ ಕುಟುಂಬದವರಿಗೆ ಆರೋಗ್ಯ ವಿಮೆ ಜಾರಿಯಾಗಬೇಕು. ತರಬೇತಿ ಪಡೆದ ಮಹಿಳಾ ಚಾಲಕರುಗಳಿಗೆ ಮಾತ್ರ ಆಟೊ ನೀಡಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಕೆಟ್ಟು ನಿಂತಿರುವ ಆಟೊಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಸಂಚಾಲಕ ಡಿ.ಎಂ.ಮರಿಯಪ್ಪ, ಮುಖಂಡರಾದ ಹನುಮಮ್ಮ, ಎಂ. ನಾರಾಯಣ್, ಮುನಿರಾಜು, ಕುಸುಮಬಾಯಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.