ಸಾಗರ: ತಾಲ್ಲೂಕಿನ ತಾಳಗುಪ್ಪ ಗ್ರಾಮದ ಪ್ಲೈವುಡ್ ಫ್ಯಾಕ್ಟರಿ ಆವರಣದಲ್ಲಿ ಅ. 20 ರಂದು ಬೆಳಿಗ್ಗೆ 9.30ಕ್ಕೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ನಾಗರಿಕ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ ಎಂದು ಸನ್ಮಾನ ಸಮಿತಿ ಸಂಚಾಲಕ ಶಿವಮೂರ್ತಿ ತಿಳಿಸಿದ್ದಾರೆ.
1972ರಲ್ಲಿ ಪ್ರಥಮ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ ಕಾಗೋಡು ತಿಮ್ಮಪ್ಪ ಭೂ ಸುಧಾರಣಾ ಕಾಯ್ದೆ ಜಾರಿಯಾಗಲು ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲು ಕಾರಣರಾದವರಲ್ಲಿ ಪ್ರಮುಖರಾಗಿದ್ದಾರೆ. ರಾಜ್ಯದ ಸಚಿವ ಸಂಪುಟದಲ್ಲಿ ಹಲವು ಖಾತೆ ಹಾಗೂ ವಿಧಾನಸಭೆಯ ಅಧ್ಯಕ್ಷ ಸ್ಥಾನವನ್ನು ಯಶಸ್ವಿಯಾಗಿ ನಿರ್ವಹಿಸಿರುವ ಅವರಿಗೆ ಕೃತಜ್ಞತಾಪೂರ್ವಕವಾಗಿ ಈ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ವಿಧಾನಸಭೆಯ ಮಾಜಿ ಅಧ್ಯಕ್ಷ ರಮೇಶ್ ಕುಮಾರ್ ಅಭಿನಂದನಾ ಭಾಷಣ ಮಾಡಲಿದ್ದು, ಸಚಿವ ಮಧು ಬಂಗಾರಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು, ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪ, ಬಿ.ಆರ್.ಜಯಂತ್ ಮೊದಲಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಸನ್ಮಾನ ಸಮಿತಿಯ ಪ್ರಮುಖರಾದ ಎಚ್.ಎನ್.ದಿವಾಕರ್, ಈಶ್ವರ ನಾಯ್ಕ ಕುಗ್ವೆ, ಮಂಡಗಳಲೆ ಹುಚ್ಚಪ್ಪ, ಮಹಾಬಲೇಶ್ವರ ಕುಗ್ವೆ, ಅಣ್ಣಪ್ಪ ಮರಿಗೆ, ವೀರಭದ್ರಪ್ಪ, ಶ್ರೀಧರಮೂರ್ತಿ, ಹುಚ್ಚಪ್ಪ ಹುಣಸೂರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.