ADVERTISEMENT

ಆಸ್ಪತ್ರೆಗೆಂದು ತಮ್ಮದೇ ಕುಟುಂಬದವರ ಜಮೀನು ಸ್ವಾಧೀನ: ವಿಜಯೇಂದ್ರ ವಿರುದ್ಧ ಆಯನೂರು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2024, 21:01 IST
Last Updated 10 ಸೆಪ್ಟೆಂಬರ್ 2024, 21:01 IST
ಆಯನೂರು ಮಂಜುನಾಥ್
ಆಯನೂರು ಮಂಜುನಾಥ್   

ಶಿವಮೊಗ್ಗ: ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನಿರ್ದೇಶಕರಾಗಿರುವ ಟ್ರಸ್ಟ್‌ನಿಂದ ಆಸ್ಪತ್ರೆ ನಿರ್ಮಾಣಕ್ಕೆ ಸಂಸದ ಬಿ.ವೈ.ರಾಘವೇಂದ್ರ ಅವರ ಪತ್ನಿಯ ಸಹೋದರನ ಹೆಸರಿನ ಜಮೀನನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಸ್ವಾಧೀನಪಡಿಸಿಕೊಟ್ಟಿದೆ’ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆರೋಪಿಸಿದರು.

‘ಇಲ್ಲಿನ ಹರಿಗೆ ಗ್ರಾಮದ ಬಳಿಯ ಕೈಗಾರಿಕಾ ಪ್ರದೇಶದಿಂದ 3 ಕಿ.ಮೀ ದೂರದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆಂದು 5.34 ಎಕರೆ ಭೂಮಿಯನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಟ್ಟಿದೆ. ವಿಶೇಷವೆಂದರೆ ಆ ಜಮೀನು ಬಿ.ವೈ. ರಾಘವೇಂದ್ರ ಅವರ ಪತ್ನಿಯ ಸಹೋದರ ಸಂಗಮೇಶ ಪರಪ್ಪ ಗದಗ ಅವರ ಹೆಸರಿನಲ್ಲಿತ್ತು. ಅದು ಈಗ ಬಿ.ವೈ. ವಿಜಯೇಂದ್ರ ಅವರ ಹೆಸರಿಗೆ ನೋಂದಣಿ ಆಗಿದೆ’ ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿದರು.

‘ಕೆಐಎಡಿಬಿ ಸ್ವಾಧೀನಪಡಿಸಿಕೊಂಡ ಜಮೀನಿನ ಅಕ್ಕಪಕ್ಕದಲ್ಲಿ ಯಡಿಯೂರಪ್ಪ ಕುಟುಂಬ ಜಮೀನು ಖರೀದಿ ಮಾಡಿದೆ. ಇದನ್ನೂ ಅದೇ ರೀತಿ ನೇರವಾಗಿ ಖರೀದಿಸಬಹುದಿತ್ತು. ಅದರ ಬದಲಿಗೆ ತಮ್ಮದೇ ಕುಟುಂಬದವರ ಹೆಸರಿನ ಭೂಮಿ ಕೆಐಎಡಿಬಿ ಮೂಲಕ ತಾವೇ ಸ್ವಾಧೀನಪಡಿಸಿಕೊಂಡಿದ್ದಾರೆ. ಇದು ದೇಶದಲ್ಲಿಯೇ ಮೊದಲು’ ಎಂದು ಆಯನೂರು ವ್ಯಂಗ್ಯವಾಡಿದರು.

ADVERTISEMENT

‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿಗೆ ಅವರ ಸಹೋದರ ಜಮೀನು ಕೊಟ್ಟದ್ದು ಹಗರಣ ಆಗುವುದಾದರೆ ಹರಿಗೆಯಲ್ಲಿ ಕೆಐಎಡಿಬಿಯಿಂದ ಭೂಮಿ ಸ್ವಾಧೀನವೂ ಹಗರಣವಲ್ಲವೇ?‌’ ಎಂದು ಅವರು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.